ಮೈಸೂರು,ಆಗಸ್ಟ್,28,2024 (www.justkannada.in): ಸ್ನೇಹ ಮಯಿ ಕೃಷ್ಣ ಒಬ್ಬ ರೌಡಿ ಶೀಟರ್ ಎಂದು ಆರೋಪಿಸಿದ್ದ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಗೆ ತಿರುಗೇಟು ನೀಡಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ನಾನು ರೌಡಿ ಶೀಟರ್ ಅಂತ ದಾಖಲೆ ಸಮೇತ ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸ್ನೇಹಮಯಿ ಕೃಷ್ಣ, ನಾನು ರೌಡಿ ಸೀಟರ್ ಅಲ್ಲ ಎಂದು ನ್ಯಾಯಾಲಯವೇ ಘೋಷಣೆ ಮಾಡಿದೆ. ಅದನ್ನ ಲಕ್ಷ್ಮಣ್ ಓದಿಕೊಳ್ಳಲಿ. ನಾನು ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಸಮಾಜದಲ್ಲಿ ಆಗುವ ಅನ್ಯಾಯಗಳ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇನೆ. ಒಬ್ಬ ಭ್ರಷ್ಟ ಪೋಲಿಸ್ ಅಧಿಕಾರಿ ನನ್ನ ಮೇಲೆ ಇಲ್ಲ ಸಲ್ಲದ ಪ್ರಕರಣ ದಾಖಲಿಸಿ ರೌಡಿ ಶೀಟರ್ ಓಪನ್ ಮಾಡಿದ್ದ. ಆದರೆ ನ್ಯಾಯಾಲಯದಲ್ಲಿ ಒಬ್ಬ ಸಾಮಾಜಿಕ ಕಾರ್ಯಕರ್ತ ರೌಡಿ ಶೀಟರ್ ಅಲ್ಲ ಎಂದು ತೀರ್ಪು ನೀಡಿದೆ. ನಾನು ಹೇಗೆ ರೌಡಿ ಶೀಟರ್, ಎಷ್ಟು ಕೊಲೆ ಮಾಡಿದ್ದೀನಿ, ಎಷ್ಟು ಸುಲಿಗೆ ಮಾಡಿದ್ದೀನಿ, ಯಾರ ಮೇಲೆ ಹಲ್ಲೆ ಮಾಡಿದ್ದೀನಿ ಅಂತ ದಾಖಲೆ ಬಿಡುಗಡೆ ಮಾಡಲಿ. ಈಗ ನಾನು ಮುಡಾ ಪ್ರಕರಣದಲ್ಲಿ ಹೆಚ್ಚು ಗಮನಹರಿಸಬೇಕಿದೆ. ಸದ್ಯಕ್ಕೆ ಲಕ್ಷ್ಮಣ್ ಆರೋಪದ ಬಗ್ಗೆ ಮುಂದಿನ ದಿನಗಳಲ್ಲಿ ಉತ್ತರಿಸುತ್ತೇನೆ ಎಂದರು.
ನಾನು ಸಿಎಂ ಸಿದ್ದರಾಮಯ್ಯ ಅವರ ಒಂದು ಪ್ರಕರಣವನ್ನು ಉದಾಹರಣೆಯಾಗಿ ತೆಗೆದುಕೊಂಡು ದೂರು ಕೊಟ್ಟಿದ್ದೇನೆ. ಆದರೆ 1990 ರಿಂದ ಮುಡಾದಲ್ಲಿ ಎಷ್ಟು ಅಕ್ರಮ ನಡೆದಿದೆ ಏನೂ ಎಂದು ಸಮಗ್ರ ತನಿಖೆಗೆ ನಾನು ಒತ್ತಾಯಿಸಿದ್ದೇನೆ. ಪ್ರಕರಣದಲ್ಲಿ ಯಾರು ಎಷ್ಟು ಪ್ರಭಾವಿಗಳಾದರೂ ಸರಿ,ಯಾವ ಪಕ್ಷದವರಾದರೂ ಸರಿ ಸಮಗ್ರ ತನಿಖೆಗೆ ಆಗಲಿ ಎಂಬುದು ನನ್ನ ಆಗ್ರಹ. ನನಗೆ ಯಾವುದೇ ಬಿಜೆಪಿ, ಜೆಡಿಎಸ್ ನಾಯಕರ ಸಂಪರ್ಕ ಇಲ್ಲ. ಯಾರ ಆಸೆ ಆಮಿಷಗಳಿಗೂ ಒಳಗಾಗಿಲ್ಲ. ಸ್ವಯಂ ಆಸಕ್ತಿಯಿಂದ ಈ ಪ್ರಕರಣ ಕುರಿತು ದೂರು ಸಲ್ಲಿಸಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ಹೇಳಿದರು.
Key words: Snehamai Krishna, challenges, M. Laxman, prove, rowdy sheeter