ಸ್ನೇಹಮಯಿ ಕೃಷ್ಣ ಸ್ವಯಂ ನಿಯಂತ್ರಣ ವಿಧಿಸಿಕೊಳ್ಳಬೇಕು : ಕೋರ್ಟ್‌ ತಾಕೀತು

Snehamayi Krishna should exercise self-control: Court warns

 

ಬೆಂಗಳೂರು, ಡಿ.೧೧,೨೦೨೪: (www.justkannada.in news) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ವಿಚಾರಣೆ ವೇಳೆ ದೂರುದಾರ ಸ್ನೇಹಮಯಿ ಕೃಷ್ಣ ಅವರ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರ ಪರ ವಕೀಲ ಕೆ.ಜಿ.ರಾಘವನ್‌ , ಕೋರ್ಟ್‌ ಕ್ಷಮೆ ಕೋರಿದರು.

ಅಡ್ವಕೇಟ್‌ ಜನರಲ್‌ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣ ಮಾಧ್ಯಮಗಳಲ್ಲಿ ಆರೋಪ ಮಾಡುತ್ತಿರುವ ಬಗ್ಗೆ ಸರಕಾರದ ಪರ ವಕೀಲರಾದ ಕಪಿಲ್‌ ಸಿಬಲ್‌ ನ್ಯಾಯಾಲಯದ ಗಮನ ಸೆಳೆದ ವೇಳೆ ಈ ಬೆಳವಣಿಗೆ ನಡೆದಿದೆ.

ಹಿನ್ನೆಲೆ:

ಶಾಸಕ-ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮಂಗಳವಾರ ವಿಚಾರಣೆ ನಡೆಸಿದರು. ಈ ವೇಳೆ ‘ಅಡ್ವಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ವಿರುದ್ಧ ಅರ್ಜಿದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡುತ್ತಿದ್ದು, ಆ ಕುರಿತ ವರದಿಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇದು ನ್ಯಾಯಾಲಯದಲ್ಲಿರುವ ವಿಚಾರಣೆಯ ಮೇಲೆ ಅಡ್ಡ ಪರಿಣಾಮ ಉಂಟು ಮಾಡುತ್ತದೆ. ಅರ್ಜಿದಾರರ ಈ ನಡವ ಳಿಕೆಯನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಬೇಕು’ ಎಂದು ಕಪಿಲ್ ಸಿಬಲ್ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಆಗ ಅರ್ಜಿದಾರರ ಪರ ವಕೀಲರಾದ  ಕೆ.ಜಿ.ರಾಘವನ್ ಅವರನ್ನು ಉದ್ದೇಶಿಸಿದ ನ್ಯಾಯಪೀಠ, ‘ಏನಿದೆಲ್ಲಾ? ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವ ಹಂತದಲ್ಲಿ ಹೀಗೆ ಮಾಡುವುದು ಎಷ್ಟು ಸರಿ? ಅರ್ಜಿದಾರರು ಸ್ವಯಂ ನಿಯಂತ್ರಣ ವಿಧಿಸಿಕೊಳ್ಳಬೇಕು’ ಎಂದು ತಾಕೀತು ಮಾಡಿದರು. ಇದಕ್ಕೆ ರಾಘವನ್, ‘ಅರ್ಜಿದಾರರ ನಡೆಗೆ ನಾನು ಕ್ಷಮೆ ಕೋರುತ್ತೇನೆ’ ಎಂದು ತಿಳಿಸಿದರು.

ವರದಿ ಸಲ್ಲಿಸಿದ ಲೋಕಾಯುಕ್ತ:

ಇದೇ ವೇಳೆ ಡಿ. 9ರವರೆಗೆ ನಡೆಸಿರುವ ತನಿಖೆಯ ವಸ್ತುಸ್ಥಿತಿ ವರದಿಯನ್ನು ಲೋಕಾಯುಕ್ತ ಪೊಲೀಸರು ನ್ಯಾಯಪೀಠಕ್ಕೆ ಸಲ್ಲಿಸಿದರು. ಅಂತೆಯೇ, ಪ್ರಕರಣದ ಕೇಸ್ ಡೈರಿ ಮತ್ತು ಸಾಕ್ಷಿಗಳ ಹೇಳಿಕೆ ಒಳಗೊಂಡ ಮತ್ತೊಂದು ವರದಿಯನ್ನೂ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು.

“ಅರ್ಜಿಯಲ್ಲಿ ಜಾರಿ ನಿರ್ದೇಶನಾಲಯವನ್ನೂ (ಇ.ಡಿ) ಪ್ರತಿವಾದಿ- ಯಾಗಿಸಬೇಕು’ ಎಂಬ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಒಂದು ವಾರ ಕಾಲಾವಕಾಶ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಿತು.

key words: Snehamayi Krishna, exercise self-control, Court warns, MUDA, Sites

Snehamayi Krishna should exercise self-control: Court warns