ಬೆಂಗಳೂರು,ಫೆಬ್ರವರಿ,07,2021 (www.justkannada.in) : ಸರ್ಕಾರ ರೂಪಿಸುವ ಜನಪರ ಕಾರ್ಯಕ್ರಮಗಳನ್ನು, ಪಕ್ಷ ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ನೇರವಾಗಿ, ಸರಳವಾಗಿ ದಾಟಿಸಬಹುದು. ಈ ಕಾರ್ಯಗಳನ್ನು ಸಮರ್ಥವಾಗಿ ಮಾಡುವ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಭಾನುವಾರ ಪಕ್ಷದ ರಾಜ್ಯ ಘಟಕ ಹಮ್ಮಿಕೊಂಡಿದ್ದ ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ಸಾಮಾಜಿಕ ಜಾಲತಾಣಗಳು ಇವತ್ತು ಪರಿಣಾಮಕಾರಿಯಾಗಿ ಬೆಳೆದಿವೆ. ಇವುಗಳನ್ನು ನಾವು ಸದುಪಯೋಗ ಮಾಡಿಕೊಳ್ಳಬೇಕು ಹಾಗೂ ಆ ಬಗ್ಗೆ ನಿಪುಣತೆಯನ್ನು ಸಾಧಿಸಿಕೊಳ್ಳಬೇಕು ಎಂದರು.
ಮಾಧ್ಯಮ ಕ್ಷೇತ್ರ ವಿವಿಧ ಆಯಾಮಗಳಲ್ಲಿ ಬೆಳೆಯುತ್ತಿದೆ. ಸಾಂಪ್ರದಾಯಿಕ ಮಾಧ್ಯಮ ಒಂದೆಡೆಯಾದರೆ, ಸಾಮಾಜಿಕ ಜಾಲತಾಣಗಳ ರೂಪದಲ್ಲಿ ನವ ಮಾಧ್ಯಮಗಳು ವೇಗವಾಗಿ ಬೆಳೆಯುತ್ತಿವೆ. ಇಂಥ ಸಂದರ್ಭದಲ್ಲಿ ಇಂಥ ಜಾಲತಾಣಗಳಲ್ಲಿ ಪಕ್ಷದ ಧ್ವನಿಯನ್ನು ಮೊಳಗಿಸಬೇಕಾದರೆ ಅದಕ್ಕೆ ಅಗತ್ಯವಾದ ಜ್ಞಾನ, ಅಧ್ಯಯನ, ಪೂರ್ವಸಿದ್ಧತೆ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ ಎಂದು ಡಿಸಿಎಂ ಒತ್ತಿ ಹೇಳಿದರು.
ಸರ್ಕಾರ ಯಾವ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ? ಆ ಕಾರ್ಯಕ್ರಮಗಳು ಯಾರಿಗಾಗಿ? ಅವುಗಳ ಉದ್ದೇಶವೇನು? ಎಂಬ ಅಂಶಗಳ ಬಗ್ಗೆ ಅರಿವು ಹೊಂದಿರಬೇಕು. ಅದೇ ರೀತಿ ಜನಪರವಾಗಿ ಪಕ್ಷ ಯಾವ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬ ತಿಳಿವಳಿಕೆಯೂ ಇರಬೇಕು ಎಂದು ವಿವರಿಸಿದರು.
ಸಂಸದ ಪಿ.ಸಿ.ಮೋಹನ್ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಬಿಜೆಪಿಯ ರಾಜ್ಯಮಟ್ಟದ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ವಿನೋದ್ ಕೃಷ್ಣಮೂರ್ತಿ, ಸಹ ಸಂಚಾಲಕ ಪ್ರಶಾಂತ್ ಜಾಧವ್ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಪಕ್ಷದ ಸಾಮಾಜಿಕ ಜಾಲತಾಣ ಪ್ರಕೋಷ್ಠದಲ್ಲಿ ಕೆಲಸ ಮಾಡುತ್ತಿರುವವರೆಲ್ಲರೂ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
key words : Social Media-way-Folks-How-reach-young-leaders-party-DCM Dr.CN Ashwath Narayana-Teaching