ಮೈಸೂರು,ಮಾರ್ಚ್,7,2023(www.justkannada.in): ಒಂದು ಸಾಧಾರಣ ಸಂಸಾರದಲ್ಲಿದ್ದು, ಓರ್ವ ಬಳೆ ವ್ಯಾಪಾರಿಯಾಗಿ ಜೀವನ ಸಾಗಿಸುತ್ತಾ ಮಕ್ಕಳನ್ನು ಪಡೆದು ನಂತರ ದಿನಗಳಲ್ಲಿ ಸಂಸಾರ ತ್ಯಜಿಸಿ ಸನ್ಯಾಸ ಸ್ವೀಕರಿಸಿ ಸಮಾಜವನ್ನು ಅಧ್ಯಾತ್ಮಿಕ ಮಾರ್ಗಕ್ಕೆ ಕೊಂಡೊಯ್ಯುವ ಕೆಲಸದಲ್ಲಿ ತೊಡಗಿಸಿಕೊಂಡ ಕೈವಾರ ಯೋಗಿ ನಾರಾಯಣ ಯತೀಂದ್ರರ ಜೀವನ ಒಂದು ಅದ್ಭುತ ಪವಾಡ ಎಂದು ಅರಗು ಮತ್ತು ಬಣ್ಣದ ಕಾರ್ಖಾನೆಯ ಮಾಜಿ ಅಧ್ಯಕ್ಷ ಎಚ್. ಎ. ವೆಂಕಟೇಶ್ ಅಭಿಪ್ರಾಯಪಟ್ಟರು.
ಮೈಸೂರಿನ ಸರಸ್ವತಿಪುರಂನಲ್ಲಿರುವ ಬಣಜಿಗ( ಬಲಿಜ ) ವಿದ್ಯಾರ್ಥಿನಿಲಯದಲ್ಲಿ ಏರ್ಪಡಿಸಿದ್ದ ಕೈವಾರ ತಾತಯ್ಯನವರ 297 ನೇ ಜಯಂತೋತ್ಸವ ಸಮಾರಂಭದಲ್ಲಿ ತಾತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್, ಸಂಸಾರ ಜೀವನದಲ್ಲಿ ಬಳೆಗಾರರ ವೃತ್ತಿಯಲ್ಲಿ ನಿರತರಾಗಿದ್ದ ತಾತಯ್ಯನವರು ಕವಿಯಾಗಿ ,ಸಮಾಜಮುಖಿ ಚಿಂತಕರಾಗಿ, ಸಾಮಾಜಿಕ ಪಿಡುಗುಗಳನ್ನು ಪರಿಹರಿಸಿದ ಹರಿಕಾರನಾಗಿ ಕೈವಾರ ನಾರಾಯಣಪ್ಪ ಸಾರ್ಥಕತೆಯನ್ನು ಕಂಡಿದ್ದಾರೆ ಎಂದರು.
ಕಾಲಜ್ಞಾನ ,ನಾರಾಯಣ ಕವಿ ಶತಕ, ಸೂಕ್ಷ್ಮ ಭೀಮ ಲಿಂಗ ಶತಕ ಮತ್ತು ಪ್ರಪಂಚ ನಾರಾಯಣ ಕವಿ ಪದ್ಯಗಳು ತಾತಯ್ಯನವರು ಬರೆದಿರುವ ಪ್ರಮುಖ ಕೃತಿಗಳು. ಇವು ಆಧ್ಯಾತ್ಮಿಕ ವಿಚಾರಗಳನ್ನು ಪರಕೀಯರ ದಬ್ಬಾಳಿಕೆಯನ್ನು , ದಬ್ಬಾಳಿಕೆ ಕೊನೆಗೊಳ್ಳುವ ಕಾಲವನ್ನು ಸ್ವಾರ್ಥಿಗಳಿಂದ ಸಮಾಜದ ಮೇಲಾಗುವ ಪರಿಣಾಮಗಳನ್ನು ಹಾಗೂ ಅತಿಯಾದ ಸಂಪತ್ತಿನ ಕ್ರೂಡೀಕರಣ ದೆಸೆಯಲ್ಲಿ ಕೆಡುವ ಸಮಾಜದ ಸ್ವಸ್ಥ ಕುರಿತಾದ ರಚನೆಗಳು ಮೊದಲಾದ ಸಂಗತಿಗಳನೆಲ್ಲ ನಿರೂಪಿಸಿದೆ . ಒಟ್ಟಾರೆಯಾಗಿ ಸಾಹಿತ್ಯ, ವಿಜ್ಞಾನ ,ತಂತ್ರಜ್ಞಾನ, ಆರ್ಥಿಕ ರಾಜಕೀಯ ಧಾರ್ಮಿಕ ಹಾಗೂ ಆಧ್ಯಾತ್ಮಿಕಗಳೆಲ್ಲದವರ ಸಮ ಹಿತ ಮಿಶ್ರಣವಿರುವ ತಾತಯ್ಯನವರ ವಿಚಾರಧಾರೆಗಳು ಎಲ್ಲಾ ಕಾಲಕ್ಕೂ ಅನ್ವಯಗೊಳ್ಳುವ ಗುಣ ಹೊಂದಿದೆ ಹೀಗಾಗಿ ಮತ್ತೆ ಮತ್ತೆ ಪ್ರಸ್ತುತವಾಗುತ್ತಾರೆ ಎಂದರು.
ಕೆ.ಸಿ. ಪ್ರಕಾಶ್ ಕಿತ್ತೂರು ಮಾತನಾಡಿ ಸರಳ ಜೀವನದ ಬಗ್ಗೆ ತಾತಯ್ಯನವರು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ ಎಂದರು. ನಿವೃತ್ತ ಪ್ರಾಂಶುಪಾಲ ವಿಜಯ್ ಕುಮಾರ್ ಮಾತನಾಡಿ, ಆಧ್ಯಾತ್ಮಿಕ ಚಿಂತನೆಗಳು ಮೈಗೂಡಿಸಿಕೊಳ್ಳಬೇಕಾದರೆ ತಾತಯ್ಯನವರ ಕೃತಿಗಳು ಪರಿಣಾಮ ಬೀರಲಿದೆ ಎಂದರು.
ಸಂಘದ ಅಧ್ಯಕ್ಷರಾದ ಎಂ ನಾರಾಯಣ್, ಪ್ರಧಾನ ಕಾರ್ಯದರ್ಶಿ ಎಚ್ ಆರ್ ಗೋಪಾಲಕೃಷ್ಣ, ಖಜಾಂಚಿ ಕೆ.ಚಂದ್ರಶೇಖರ್, ಲೆಕ್ಕ ಪರಿಶೋಧಕರಾದ ಡಿ ನಾಗರಾಜ್, ನಿರ್ದೇಶಕರಾದ ಎಚ್ ಕೆ ಜಗನ್ನಾಥ್,ಎನ್ ವಿಜಯ್ ಕುಮಾರ್, ಕೆ ಸಿ ಪ್ರಕಾಶ್, ಪಾರ್ಥಸಾರಥಿ, ಟಿಎಸ್ ರಮೇಶ್,ಹೆಚ್ಎ ಜಗದೀಶ ,ಎಚ್ ಆರ್ ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.
Key words: Social thinker -Kaiwara Yogi- Narayan Yathindra’s- life – wonderful-H. A. Venkatesh