ಬೆಂಗಳೂರು,ಜೂ,15,2020(www.justkannada.in): ಸಮಾಜ ಕಲ್ಯಾಣ ಇಲಾಖೆ ನಡೆಸುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಇರುವ ಬೇಡಿಕೆ ಕುರಿತಂತೆ ಸಮೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜತೆ ಚರ್ಚಿಸಿದರು. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳು ಇರುವ ಹಿನ್ನೆಲೆಯಲ್ಲಿ ಈ ಸಮೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಬಿಎಸ್ ವೈ ತಿಳಿಸಿದರು.
ಸಭೆಯಲ್ಲಿ ಕ್ರೈಸ್ ವಸತಿ ಶಾಲೆಗಳಲ್ಲಿ 660 ಶಿಕ್ಷಕರು ಮತ್ತು 183 ಪದವಿಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. 993 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ದಾಖಲಾತಿ ಪರಿಶೀಲನೆ ಹಂತದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶಿಕ್ಷಣ ಇಲಾಖೆ ನೆರವಿನೊಂದಿಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 2019-20ನೇ ಸಾಲಿನಲ್ಲಿ ಎಸ್ ಸಿ ಎಸ್ ಪಿ ಮತ್ತು ಎಸ್ ಟಿ ಪಿ ಯೋಜನೆಯಡಿ ಶೇ 94.51 ಗುರಿ ಸಾಧನೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಗಂಗಾ ಕಲ್ಯಾಣ ಯೋಜನೆಯಡಿ ಬಾಕಿ ಇರುವ 8911 ಘಟಕಗಳ ವಿದ್ಯುದೀಕರಣಕ್ಕೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಈ ಯೋಜನೆಯಡಿ 2019-20ರಲ್ಲಿ 8,270 ಕೊಳವೆ ಬಾವಿ ಕೊರೆಯಲಾಗಿದ್ದು, 10,201 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ.
ಐರಾವತ ಯೋಜನೆಯಡಿ ಟ್ಯಾಕ್ಸಿ ವಿತರಣೆ ನಗರ ಪ್ರದೇಶದಲ್ಲಿ ಮಾತ್ರ ಯಶಸ್ವಿಯಾಗುತ್ತಿದೆ. ಇತರ ಪ್ರದೇಶಗಳಲ್ಲಿ ಸರಕು ಸಾಗಣೆ ವಾಹನಗಳನ್ನು ಒದಗಿಸಬೇಕು. ಲಿಡ್ಕರ್ ಮೂಲಕ 11,772 ಚರ್ಮ ಕುಶಲ ಕರ್ಮಿಗಳಿಗೆ ಕೋವಿಡ್ 19 ಲಾಕ್ ಡೌನ್ ಸಂದರ್ಭದಲ್ಲಿ ತಲಾ 5 ಸಾವಿರ ರೂ. ನೆರವು ನೀಡಲಾಗಿದೆ ಎಂದರು.
ವಸತಿ ಶಾಲೆಗಳು ಮತ್ತು ವಿದ್ಯಾರ್ಥಿನಿಲಯಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ…
ಶಿಕ್ಷಣ ಇಲಾಖೆಯ ವೇಳಾಪಟ್ಟಿಯಂತೆ ಇಲಾಖೆಯ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳು ಕಾರ್ಯಾರಂಭ ಮಾಡಲಿವೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದರು.
42 ಸಾವಿರಕ್ಕೂ ಹೆಚ್ಚು ಜನ ಇಲಾಖೆಯ ವಸತಿ ಶಾಲೆಗಳು ಹಾಗೂ ಹಾಸ್ಟೆಲ್ ಗಳಲ್ಲಿ ಕ್ವಾರಂಟೈನ್ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Key words: social walfare- department-meeting-CM bs yeddyurappa