ಈಗೋ…ಸ್ಖಲನ ಸಮಸ್ಯೆಗೆ ಇಲ್ಲಿದೆ ಪರಿಹಾರ..!

 

ಬೆಂಗಳೂರು, ಮೇ 25, 2019 : ಈ ವಾರ ಸ್ಖಲನವಿಲ್ಲದ ಸ್ಥಿತಿಯ (Anejaculation) ಬಗ್ಗೆ ಚರ್ಚಿಸೋಣ. ಸಾಮಾನ್ಯವಾಗಿ ಪುರುಷರು ಕಡೆಗಣನೆ ಮಾಡುವ ಸಮಸ್ಯೆ ಇದು. ಶೀಘ್ರ ಸ್ಖಲನದ ಬಗ್ಗೆ ಇರುವಷ್ಟು ತಿಳಿವಳಿಕೆಯೂ ಇದರ ಬಗ್ಗೆ ಇಲ್ಲ ನಿರ್ಬಂಧಿತ ಸ್ಖಲನ ಎಂತಲೂ ಕರೆಯಲಾಗುವ ಈ ಸ್ಥಿತಿಯಲ್ಲಿ ವೀರ್ಯ ಸ್ಖಲನವಾಗುವುದೇ ಇಲ್ಲ. ವೀರ್ಯ ಉತ್ಪತ್ತಿಯೂ ಆಗುತ್ತದೆ, ಲೈಂಗಿಕ ತೃಪ್ತಿಯೂ ಸಿಗುತ್ತದೆ. ಆದರೆ ಉತ್ತುಂಗಸ್ಥಿತಿ ತಲುಪಿದ ನಂತರವೂ ಸ್ಖಲನವಾಗುವುದಿಲ್ಲ.

ಪ್ರಾಸ್ಟೇಟ್‌ಗ್ರಂಥಿ ಹಾಗೂ ಜನನಾಂಗದ ಮೂಲ ನಾಳಗಳು ವೀರ್ಯವನ್ನು ಬಿಡುಗಡೆ ಮಾಡಲಾರದೇ ಹೋದಾಗ ಈ ಸಮಸ್ಯೆ ಎದುರಾಗುತ್ತದೆ.

ಶೀಘ್ರ ಸ್ಖಲನವನ್ನು ಹೊರತುಪಡಿಸಿ, ಸ್ಖಲನದ ಇತರೆ ಸಮಸ್ಯೆಗಳ ಮೇಲೆ ವ್ಯಾಪಕ ಅಧ್ಯಯನಗಳು ನಡೆದಿಲ್ಲ. ಜನರೂ ಸಹ ಇವುಗಳ ಬಗ್ಗೆ ಅಷ್ಟೊಂದು ಗಮನಹರಿಸುವುದಿಲ್ಲ. ಆದಾಗ್ಯೂ, 2015ರ ಜರ್ನಲ್ ಆಫ್ ಸೆಕ್ಸ್ಯುಯಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಸಂಶೋಧನೆಯೊಂದು ಸ್ಖಲನವಿಲ್ಲದ ಸ್ಥಿತಿಯ ಮೇಲೆ ಬೆಳಕು ಚೆಲ್ಲಿದೆ.

ಇದರಲ್ಲಿ ಅಮೆರಿಕದ ವಿಜ್ಞಾನಿಗಳು ಸ್ಖಲನ ಅಸ್ವಸ್ಥತೆಗಳಿರುವ ಪುರುಷರಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಶೇ 88ರಷ್ಟು ಮಂದಿ ಕಡಿಮೆ ಪ್ರಮಾಣದ (ದುರ್ಬಲ) ಸ್ಖಲನದ ಸಮಸ್ಯೆಯನ್ನು, ಶೇ 81ರಷ್ಟು ಮಂದಿ ಕಡಿಮೆ ಬಲದ ಅನುಭವವನ್ನು, ಶೇ 62ರಷ್ಟು ಜನ ವಿಳಂಬ ಸ್ಖಲನವನ್ನು ಮತ್ತು ಶೇ 37ರಷ್ಟು ಜನ ಸ್ಖಲನವಾಗದೇ ಇರುವ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ. ಕೆಲವರಿಗೆ ಒಂದೇ ಬಗೆಯ, ಕೆಲವರಿಗೆ ಹಲವು ಬಗೆಯ ಸಮಸ್ಯೆ ಇರುವುದು ತಿಳಿದುಬಂದಿದೆ. ಕೆಲವರಿಗೆ ವೀರ್ಯ ಉತ್ಪತ್ತಿಯೂ ಆಗುತ್ತದೆ, ಮಿಲನಮಹೋತ್ಸವದ ಆನಂದವೂ ಪ್ರಾಪ್ತವಾಗುತ್ತದೆ. ಆದರೆ ಉತ್ತುಂಗ ತಲುಪಿದಾಗ ಸ್ಖಲನವೇ ಆಗುವುದಿಲ್ಲ.

ಇದು ಕೆಲವೊಮ್ಮೆ ಸ್ಥಿತಿಯಾಧಾರಿತ ಸಮಸ್ಯೆಯಾಗಿದ್ದರೆ, ಕೆಲವೊಮ್ಮೆ ನಿರಂತರವಾಗಿರುತ್ತದೆ. ಇನ್ನೂ ಕೆಲವರು ಇಡೀ ಜೀವನದಲ್ಲಿ ಸ್ಖಲಿಸಿರುವುದೇ ಇಲ್ಲ. ಕೆಲವರಲ್ಲಿ ಇದ್ದಕ್ಕಿದ್ದಂತೆಯೇ ಈ ಶಕ್ತಿ ನಿಂತು ಹೋಗುತ್ತದೆ. ವಿಜ್ಞಾನಿಗಳು ಸ್ಖಲನವಿಲ್ಲದ ಸ್ಥಿತಿ, ಅಂದರೆ ನಿರ್ಬಂಧಿತ ಸ್ಖಲನವನ್ನು ಎರಡು ವಿಧಗಳಲ್ಲಿ ವಿಂಗಡಿಸಿದ್ದಾರೆ.

ಪ್ರಾಥಮಿಕ (ಪ್ರೈಮರಿ) ಸ್ಖಲನವಿಲ್ಲದ ಸ್ಥಿತಿ: ಮೊದಲ ಲೈಂಗಿಕ ಅನುಭವದಿಂದಲೂ ಸ್ಖಲನವಾಗದೇ ಇರುವ ಸ್ಥಿತಿ.

ಅನುಷಂಗಿಕ (ಸೆಕೆಂಡರಿ) ಸ್ಖಲನವಿಲ್ಲದ ಸ್ಥಿತಿ : ಕೆಲಕಾಲ ಸಾಮಾನ್ಯ ಲೈಂಗಿಕ ಜೀವನ ನಡೆಸಿದ ನಂತರ ಸ್ಖಲನ ಸಾಮರ್ಥ್ಯ ಕಳೆದುಕೊಳ್ಳುವ ಸ್ಥಿತಿ.

ಈ ಸ್ಥಿತಿಯಲ್ಲಿ ಜೈವಿಕ ತಂದೆಯಾಗಲು ಸಾಧ್ಯತೆಗಳಿವೆಯೇ? ಖಂಡಿತ ಇದೆ. ಒಂದು ಸಮಸ್ಯೆ ಇದೆ ಎಂದಾದಲ್ಲಿ ಅದಕ್ಕೊಂದು ಪರಿಹಾರವೂ ಇದ್ದೇ ಇರುತ್ತದೆ. ಇಂತಹ ಲೈಂಗಿಕ ತೊಂದರೆ ಇರುವವರು ತಂದೆಯಾಗುವ ಬಯಕೆಗೆ ತಡೆಯೊಡ್ಡಬೇಕಾದ ಅಗತ್ಯವಿಲ್ಲ ಎನ್ನುತ್ತದೆ ವೈದ್ಯಕೀಯ ವಲಯ. ಮಕ್ಕಳನ್ನು ಪಡೆಯಲು ಮೂರು ವಿಧಾನಗಳಿವೆ. ದಂಪತಿ ವೈದ್ಯಕೀಯ ನೆರವು ಪಡೆದು, ಈ ಯಾವುದಾದರೂ ಒಂದು ವಿಧಾನ ಅನುಸರಿಸಿ ಮಕ್ಕಳನ್ನು ಪಡೆಯಬಹುದು.
ಜನನಾಂಗ ಕಂಪನ ಸಾಧನ (PVS-Penile vibratory stimulation): ಈ ಸಾಧನವನ್ನು ಪುರುಷ ಜನನಾಂಗದ ತುದಿಗೆ ಅಳವಡಿಸಲಾಗುವುದು. ಅದು ಸೂಕ್ಷ್ಮ ಸಂವೇದಿ ನರಗಳ ಮೂಲಕ ಬೆನ್ನುಮೂಳೆಗೆ ಸಂದೇಶ ಕಳುಹಿಸಿ, ಸ್ಖಲಿಸುವಂತೆ ಉದ್ದೀಪಿಸುತ್ತದೆ. ಈ ವಿಧಾನವು ಬೆನ್ನುಹುರಿಯ ಸಾಮರ್ಥ್ಯದ ಮೇಲೆ ಅವಲಂಬಿಸುತ್ತದೆ. ಶೇ 60ರಷ್ಟು ಪುರುಷರು ಇದರಿಂದ ಪ್ರಯೋಜನ ಪಡೆಯುತ್ತಾರೆ. ಆದರೆ ಬೆನ್ನುಹುರಿ ಸಮಸ್ಯೆ ಇರುವವರಿಗೆ ಇದರಿಂದ ಪ್ರಯೋಜನವಿಲ್ಲ.

ಎಲೆಕ್ಟ್ರೊ ಸ್ಖಲನ:

ಈ ಪ್ರಕ್ರಿಯೆಯಲ್ಲಿ ಪ್ರಾಸ್ಟೇಟ್‌ಗ್ರಂಥಿಯನ್ನು ಉದ್ದೀಪಿಸಲು ಗುದನಾಳದ ಮೂಲಕ ಎಲೆಕ್ಟ್ರೊ ಸಾಧನವನ್ನು ಅಳವಡಿಸಲಾಗುತ್ತದೆ. ಸ್ಖಲಿಸುವವರೆಗೂ ಉದ್ದೀಪನಾಕ್ರಿಯೆ ಮುಂದುವರಿಯುತ್ತದೆ. ಸಾಮಾನ್ಯ ಅರಿವಳಿಕೆ ನೀಡುವ ಮೂಲಕ ಇದನ್ನು ನಿರ್ವಹಿಸಲಾಗುತ್ತದೆ. ವ್ಯಕ್ತಿ ಸ್ಖಲನಗೊಳ್ಳುವವರೆಗೂ ಉದ್ದೀಪನ ಕ್ರಿಯೆ ಕ್ರಮೇಣ ಅಧಿಕಗೊಳ್ಳುತ್ತ ಹೋಗುತ್ತದೆ.

ವೀರ್ಯಾಣುವನ್ನು ಹೊರ ತೆಗೆಯುವುದು:
ಕೆಲವು ಪ್ರಕರಣಗಳಲ್ಲಿ ವೀರ್ಯಾಣುವನ್ನು ವೃಷಣಗಳಿಂದ ಹೊರತೆಗೆದು ಭ್ರೂಣ ಫಲಿತಕ್ಕೆ ಬಳಸಲಾಗುತ್ತದೆ. ನಿಮ್ಮ ಸಮಸ್ಯೆ, ಆರೋಗ್ಯ ಸ್ಥಿತಿ, ವಯೋಮಾನ ಒಳಗೊಂಡಂತೆ ಹಲವು ಅಂಶಗಳನ್ನು ಗಮನಿಸಿ ನಿಮಗೆ ಯಾವ ಮಾರ್ಗ ಸೂಕ್ತ ಎಂದು ನಿರ್ಧರಿಸಲಾಗುತ್ತದೆ.

ಕೃಪೆ : ಪ್ರಜಾವಾಣಿ

solution for premature ejaculation