ಬೆಂಗಳೂರು, ಆಗಸ್ಟ್ 6, 2021(www.justkannada.in): ಅತೀ ಅಪೇಕ್ಷಿತ, ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್ನಲ್ಲಿ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ (ಬಹುಮಹಡಿ ವಾಹನ ನಿಲ್ದಾಣ) ಕಾಮಗಾರಿಗಳು ಅತೀ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರೂ.೭೯.೮೧ ಕೋಟಿ ವೆಚ್ಚದಲ್ಲಿ ಈ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಅನ್ನು ನಿರ್ಮಿಸುತ್ತಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಅವರ ಪ್ರಕಾರ ಕಟ್ಟಡ ಸೆಪ್ಟೆಂಬರ್ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ಗಾಂಧಿನಗರದ ಎಂಎಲ್ಎ ಗುಂಡೂರಾವ್ ಅವರೊಂದಿಗೆ ಗೌರವ ಗುಪ್ತಾ ಅವರು ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿಬಿಎಂಪಿ ಮುಖ್ಯ ಇಂಜಿನಿಯರ್ ಲೋಕೇಶ್ ಅವರ ಪ್ರಕಾರ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡದ ಬಹುಪಾಲು ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೇವಲ ಸೋಲಾರ್ ಪ್ಯಾನೆಲ್ಗಳ ಅಳವಡಿಕೆ ಬಾಕಿ ಇದೆ. “ನಾವು ನಿಗಧಿತ ಕಾಲಮಿತಿಯೊಳಗೆ ಕೆಲಸಗಳನ್ನು ಮುಗಿಸಲು ಶ್ರಮಿಸುತ್ತಿದ್ದೇವೆ,” ಎಂದು ತಿಳಿಸಿದರು.
ಈ ಕಾರ್ ಪಾರ್ಕಿಂಗ್ ಸೌಲಭ್ಯದ ನಿರ್ಮಾಣ ಕಾಮಗಾರಿಗಳು ೨೦೧೭ರಲ್ಲಿ ಆರಂಭವಾದರೂ, ಕಾಲಕಾಲಕ್ಕೆ ನಿಗಧಿಪಡಿಸಿದ ಡೆಡ್ಲೈನ್ ಗಳು ಸಾಧಿಸಲಾಗಿರಲಿಲ್ಲ. ಜೂನ್ ೨೦೨೧ ಕೊನೆಯ ಡೆಡ್ ಲೈನ್ ಆಗಿತ್ತು.
ಬಿಬಿಎಂಪಿಯು ನಗರೋತ್ಥಾನ ಅನುದಾನದಡಿ ರೂ.೭೯.೮೧ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡ ಮೂರು ಮಹಡಿಗಳನ್ನು ಹೊಂದಿದ್ದು (-೧, -೨, -೩), ೫೫೬ ಕಾರುಗಳು ಹಾಗೂ ೪೪೫ ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದು. “ಸ್ಥಳದಲ್ಲಿದ್ದಂತಹ ಬೃಹತ್ ಬಂಡೆಯಿಂದಾಗಿ ಕಾಮಗಾರಿಗಳು ವಿಳಂಬವಾಯಿತು. ಕಟ್ಟಡವು ನಾಲ್ಕು ಲಿಫ್ಟ್ ನಳು ಹಾಗೂ ೪೦ ಶೌಚಾಲಯಗಳನ್ನು ಹೊಂದಿದೆ. ಮೇಲಿನ ಮಹಡಿಯಲ್ಲಿ ಪ್ರತಿಭಟನೆಗಳನ್ನು ನಡೆಸಲು ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ಇದರ ಜೊತೆಗೆ, ವಿದ್ಯುತ್ ಕಾಮಗಾರಿಗಳು, ಆಗ್ನಿ ಶಾಮಕ ನಂದಿಸುವ ಉಪಕರಣಗಳ ಅಳವಡಿಕೆ, ಕಾಂಪೌಂಡ್ ನಿರ್ಮಾಣ, ಪ್ರವೇಶದ್ವಾರ ನಿರ್ಮಾಣ, ಪಾದಚಾರಿ ಮಾರ್ಗಗಳ ನಿರ್ಮಾಣ ಕಾಮಗಾರಿಗಳನ್ನು ಅತೀ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು,” ಎಂದು ವಿವರಿಸಿದರು.
ಈ ಪಾರ್ಕಿಂಗ್ ಸೌಲಭ್ಯ ಪೂರ್ಣಗೊಂಡರೆ ಗಾಂಧಿನಗರ ಹಾಗೂ ಸುತ್ತಮುತ್ತಲಿನಲ್ಲಿ ವಾಹನಗಳ ನಿಲುಗಡೆ ಸಮಸ್ಯೆ ಮಹತ್ತರವಾದ ಮಟ್ಟಿಗೆ ಬಗೆಹರಿದಂತಾಗುತ್ತದೆ.
ಗಾಂಧಿ ನಗರ ತೆರಿಗೆ ಪಾವತಿದಾರರ ಸಂಘದ ಸದಸ್ಯ ಸಂತೋಷ್ ಪ್ರಭಾಕರ್ ಅವರು ಈ ಕುರಿತು ಮಾತನಾಡಿ, “ಈವರೆಗೂ ಈ ಪ್ರದೇಶದಲ್ಲಿ ವಾಹನ ನಿಲುಗಡೆ ಬಹಳ ದೊಡ್ಡ ಸಮಸ್ಯೆಯಾಗಿತ್ತು. ಅದರಲ್ಲೂ ವಿಶೇಷವಾಗಿ ಇಲ್ಲಿಗೆ ಷಾಪಿಂಗ್ಗೆ ಬರುವ ಗ್ರಾಹಕರಿಗೆ ದೊಡ್ಡ ತಲೆ ನೋವಾಗಿತ್ತು. ಬಿಬಿಎಂಪಿಯ ಈ ಯೋಜನೆಯನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ,” ಎಂದರು.
ವ್ಯಾಪಾರಿ ನಿತಿನ್ ಭಕ್ತವತ್ಸಲ ಅವರು ಹೇಳುವಂತೆ ಈ ಮಲ್ಟಿಲೆವೆಲ್ ಪಾರ್ಕಿಂಗ್ ಸೌಲಭ್ಯದಿಂದ ವಾಹನಗಳ ಕಳುವು ಹಾಗೂ ಹಾನಿಗೊಳಿಸುವಿಕೆಯ ಪ್ರಸಂಗಗಳನ್ನೂ ತಡೆದಂತಾಗುತ್ತದೆ ಎಂದರು. “ವಾಹನ ಚಾಲಕರು ತಮ್ಮ ವಾಹನಗಳನ್ನು ಸಂಚಾರಿ ಪೊಲೀಸರ ಯಾವುದೇ ಭಯವಿಲ್ಲದೆ ಇಲ್ಲಿ ಪಾರ್ಕ್ ಮಾಡಿ ನೆಮ್ಮದಿಯಾಗಿ ತಮ್ಮ ಕೆಲಸ ಮುಗಿಸಿಕೊಂಡು ಹೋಗಬಹುದು,” ಎಂದರು.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: solution – Gandhinagar- parking -problem.