ಬೆಂಗಳೂರು ಮಾ. 23,2021(www.justkannada.in): ರೈತರೇ ಟ್ರಾನ್ಸ್ ಫಾರ್ಮರ್ ದುರಸ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಅವರೇ ಬಾಡಿಗೆ ವಾಹನದಲ್ಲಿ ಟ್ರಾನ್ಸ್ ಫಾರ್ಮರ್ ತಂದು ಸ್ವಂತ ಖರ್ಚಿನಲ್ಲಿ ಕೆಲಸಮಾಡಿಸಿಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರು ಬಂದಿದೆ. ಈ ಘಟನೆ ಮರುಕಳಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಚೆಸ್ಕಾಂ ಅಧಿಕಾರಿಗಳನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅವರ ಮನವಿ ಮೇರೆಗೆ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಯಿತು. ಇನ್ನು ಮುಂದೆ ಟ್ರಾನ್ಸ್ಫಾರ್ಮರ್ ದುರಸ್ತಿ ಸೇರಿದಂತೆ ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆ ಇದ್ದಲ್ಲಿ ಚೆಸ್ಕಾಂನವರೇ ಕೆಲಸ ಮಾಡಿಕೊಡಬೇಕು. ಇದಕ್ಕೆ ರೈತರಿಂದ ಅಥವಾ ಜನಸಾಮಾನ್ಯರಿಂದ ಹಣ ವಸೂಲಿ ಮಾಡುವಂತಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಮಂಡ್ಯ ಜಿಲ್ಲೆಯಲ್ಲಿನ ವಿದ್ಯುತ್ ಸಮಸ್ಯೆ ಸಂಬಂಧ ಎಪ್ರಿಲ್ 10 ರ ಒಳಗೆ ಎಲ್ಲ ತಾಲೂಕಿನಲ್ಲಿ ಶಾಸಕರ ಜೊತೆ ಸಭೆ ನಡೆಸಿ ವರದಿ ನೀಡಬೇಕು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿಯ ಎಂ.ಡಿ. ಮನೋಹರ್ ಬೇವಿನಮರದ್ ಅವರಿಗೆ ಸೂಚಿಸಿದರು. ಹೂಗೇನಹಳ್ಳಿ – ಮಾದೇಶ್ವರ್ ಲೈನ್ ಅಳವಡಿಕೆಗೆ 20 ದಿನಗಳೊಳಗೆ ಟೆಂಡರ್ ಕರೆಯಬೇಕು.65 ಕೆ.ವಿ., 100 ಕೆ.ವಿ. ಯ ಟ್ರಾನ್ಸ್ ಫಾರ್ಮರ್ ಅನ್ನು ಚೆಸ್ಕಾಂನವರೆ ಅಳವಡಿಸಬೇಕು. ಎಷ್ಟು ಬೇಡಿಕೆ ಇದೆ ಎಂದು ತಕ್ಷಣ ಕ.ವಿ.ಕ.ಗೆ ಪ್ರಸ್ತಾವನೆ ಸಲ್ಲಿಸಿ, 15 ದಿನಗಳಲ್ಲಿ ಟಿಸಿ ಅಳವಡಿಕೆ ಕೆಲಸ ಆಗಬೇಕು ಎಂದು ಗೃಹ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಓವರ್ ಲೋಡ್ ಇದ್ದ ಕಡೆ 25 ಕೆ.ವಿ. ಟಿಸಿಯನ್ನು ಅಳವಡಿಸುವ ಕೆಲಸವೂ ಶೀಘ್ರದಲ್ಲಿ ಮಾಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಗುತ್ತಿಗೆ ಪಡೆದಿರುವ ಎಲ್ಲ ಕಂಪೆನಿಗಳನ್ನ ಕರೆದು ತಾಲೂಕಾವಾರು ಸಭೆ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ನಡೆಯಬೇಕು. ಉಪಗುತ್ತಿಗೆ ನೀಡಲು ಯಾವುದೇ ಗುತ್ತಿಗೆದಾರರಿಗೆ ಅವಕಾಶ ಇಲ್ಲ. ಅಧಿಕಾರಿಗಳ ಶಾಮೀಲಾತಿಯಿಂದಲೇ ಉಪಗುತ್ತಿಗೆ ನೀಡಿರುವ ಮಾಹಿತಿ ಇದೆ. ತಕ್ಷಣ ಉಪಗುತ್ತಿಗೆ ರದ್ದಾಗಬೇಕು, ಮುಖ್ಯಗುತ್ತಿಗೆದಾರರಿಂದಲೇ ಕೆಲಸ ಆಗಬೇಕು. ಆದರೂ ಇಂತಹ ಘಟನೆ ಮರುಕಳಿಸಿದರೆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅವರು ಮಾತನಾಡಿ, ಎಲ್ಲ ತಾಲೂಕಿನಲ್ಲಿ, ಮುಖ್ಯಗುತ್ತಿಗೆದಾರರನ್ನೇ ಕರೆದು ಸಭೆ ನಡೆಸಿ ಎಚ್ಚರಿಕೆ ನೀಡಬೇಕು. ನಿಗದಿತ ಸಮಯದೊಳಗೆ ಕೆಲಸ ಮುಗಿಸುವಂತೆ ಮಾಡುವ ಜವಾಬ್ದಾರಿ ಅಧಿಕಾರಿಗಳದ್ದು. ಚೆಸ್ಕಾಂ ಎಂ.ಡಿ. ದಿಢೀರ್ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಬೇಕು. ಈ ತಿಂಗಳಾಂತ್ಯಕ್ಕೆ ಎಂ.ಡಿ. ಮನೋಹರ್ ಅವರು ನಿವೃತ್ತಿಯಾಗುತ್ತಿರುವ ಕಾರಣ, ತುರ್ತು ಕೆಲಸ ಮುಗಿಸಬೇಕಾಗಿರುವ ಹಿನ್ನೆಲೆಯಲ್ಲಿ ಅವರ ಸೇವಾವಧಿಯನ್ನ ಒಂದು ತಿಂಗಳು ವಿಸ್ತರಿಸಿದ್ದಾರೆ.
ಎಲ್ಲ ಶಾಸಕರು ಆಗಬೇಕಾಗಿರುವ ಕೆಲಸದ ಬಗ್ಗೆ ಲಿಖಿತವಾಗಿ ಮನವಿ ಸಲ್ಲಿಸಿ ಎಂದು ಗೃಹ ಸಚಿವರು ಮನವಿ ಮಾಡಿದ್ದಾರೆ. ಮುಂದಿನ ಸಭೆಯಲ್ಲಿ ಅಧಿಕಾರಿಗಳು ಯಾವುದೇ ಸಬೂಬು ಹೇಳಿದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ, ಶಾಸಕರಾದ ಎಂ. ಶ್ರೀನಿವಾಸ್, ಡಿ.ಸಿ. ತಮ್ಮಣ್ಣ, ಸುರೇಶ್ ಗೌಡ, ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ವಿಧಾನ ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ಅಪ್ಪಾಜಿ ಗೌಡ, ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Solve – power problem – Mandya district- soon-Home Minister –basavaraj Bommai.