ಚಾಮರಾಜನಗರ, ಏಪ್ರಿಲ್ 22, 2020 (www.justkannada.in): ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾನ್ಯ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಭಾನುವಾರ ಮುಂಜಾನೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ರೈತರು ಹಾಗೂ ವರ್ತಕರ ಬಳಿ ತೆರಳಿದ ಸಚಿವರು, ವ್ಯಾಪಾರ-ವಹಿವಾಟು ಬಗ್ಗೆ ವಿಚಾರಿಸಿದರು. ಅಲ್ಲದೆ, ಮಾರುಕಟ್ಟೆಗೆ ಬೆಳೆಗಳನ್ನು ಸಾಗಿಸುವಾಗ ಚೆಕ್ ಪೋಸ್ಟ್ ಬಳಿ, ಇಲ್ಲವೇ ದಾರಿ ಮಧ್ಯೆ ಪೊಲೀಸರಿಂದ ಸಮಸ್ಯೆಯಾಗುತ್ತಿದೆಯೇ ಎಂದು ಪ್ರಶ್ನಿಸಿ ತಿಳಿದುಕೊಂಡರು.
ಕೇರಳ ಹಾಗೂ ತಮಿಳುನಾಡಿಗೆ ಉತ್ಪನ್ನಗಳ ಸಾಗಾಟ ವೇಳೆ ತೊಂದರೆಯಾಗದಂತೆ ಈಗಾಗಲೇ ಸೂಚಿಸಲಾಗಿದೆ. ಒಂದು ವೇಳೆ ಸಮಸ್ಯೆಯಾದರೆ ತಕ್ಷಣವೇ ಗಮನಕ್ಕೆ ತನ್ನಿ ಎಂದು ಸಚಿವರು ರೈತರು ಹಾಗೂ ವರ್ತಕರಿಗೆ ಮನವಿ ಮಾಡಿದರು.
ಇನ್ನು ಮಾರುಕಟ್ಟೆಯಲ್ಲಿ ತರಕಾರಿ ಉತ್ಪನ್ನಗಳ ಮಾರಾಟ ಸ್ಥಿತಿಗತಿಗಳ ಬಗ್ಗೆ ಪ್ರತಿ ಮಳಿಗೆಗೆ ಭೇಟಿ ಕೊಡುವುದರ ಮೂಲಕ ಕೊರೋನಾ ಬಾಧಿಸುವುದಕ್ಕೆ ಮುಂಚೆ ಹಾಗೂ ಹಾಲಿ ವಸ್ತುಸ್ಥಿತಿ ಹೇಗಿದೆ ಎಂದು ವಿಚಾರಿಸಿಕೊಂಡರು.
ಅಧಿಕಾರಿಗಳೊಂದಿಗೆ ಸಭೆ
ಎಪಿಎಂಸಿ ಪರಿಶೀಲನೆ ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಶೇಖರ್, ರೈತರು-ವರ್ತಕರ ಸಮಸ್ಯೆಗಳ ಬಗ್ಗೆ ಆಲಿಸಿದರು.
ರೈತರ ಬೆಳೆಗೆ ಉತ್ತಮ ದರ ಸಿಗುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಬೇಕಾಬಿಟ್ಟಿ ದರಗಳ ಮಾರಾಟಕ್ಕೆ ಕಡಿವಾಣ ಬೀಳಬೇಕು. ರೈತರಿಗೆ ಒಳ್ಳೇ ದರ ಸಿಗಬೇಕು. ಆ ದರದ ಮೇಲೆ ಮಾರಾಟದ ದರದ ಮೇಲೂ ನಿಗಾ ವಹಿಸಬೇಕು. ರೈತರಿಗೆ ನಷ್ಟವಾಗಿ ದಲ್ಲಾಳಿಗಳಿಗೆ ಮಾತ್ರ ಲಾಭವಾಗುವಂತೆ ಮಾಡುವುದು ಸರಿಯಲ್ಲ. ಇಂಥದ್ದಕ್ಕೆ ಎಪಿಎಂಸಿಯಿಂದ ಕಡಿವಾಣ ಬೀಳಬೇಕು. ಈ ಬಗ್ಗೆ ಕೂಡಲೇ ಉಪ ವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್ ಮೂಲಕ ಆದೇಶ ಹೊರಡಿಸಲಾಗುವುದು. ಹಾಗೇ ಎಪಿಎಂಸಿಗೆ ಕೋಲ್ಡ್ ಸ್ಟೋರೇಜ್ ಅನ್ನು ಮಂಜೂರು ಮಾಡಲಾಗುವುದು ಎಂದು ಸಚಿವರು ತಿಳಿಸಿದರು.