ಬೆಳಗಾವಿ:ಮೇ-4:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಫಲಾನುಭವಿಗಳ ಆಯ್ಕೆ ಕಾಳಮಾರುಕಟ್ಟೆಯಲ್ಲಿ ಕಾನೂನು ಬಾಹಿರವಾಗಿ ಎಗ್ಗಿಲ್ಲದೆ ನಡೆಯುತ್ತಿರುವುದು ಜಗಜ್ಜಾಹೀರಾಗಿದೆ. ಇದೀಗ ಅದರ ಮತ್ತೊಂದು ಕರಾಳ ಮುಖ ಅನಾವರಣ ಗೊಂಡಿದ್ದು, ದೇಶದ ನಾಗರಿಕತ್ವವೂ ಮಾರಾಟಕ್ಕಿದೆ!
ಕೇವಲ 600 ರೂ. ನೀಡಿದರೆ ಭಾರತೀಯ ನಾಗರಿಕರಿಗೆ ನೀಡುವ ವೋಟರ್ ಐಡಿಯನ್ನು ಖಾಸಗಿ ವ್ಯಕ್ತಿಗಳು ಮನೆಯಲ್ಲಿ, ಪೋಟೋ ಸ್ಟುಡಿಯೋ, ಸೈಬರ್ ಕೆಫೆಗಳಲ್ಲಿ ವಿತರಿಸುತ್ತಾರೆ. ಸರ್ಕಾರ ಉಚಿತವಾಗಿಯೇ ವೋಟರ್ ಐಡಿ ಮಾಡಿಕೊಡುತ್ತಿರುವಾಗ ಇವರಲ್ಲಿ 600 ರೂ. ಕೊಟ್ಟು ಯಾರು ಪಡೆದುಕೊಳ್ಳುತ್ತಾರೆ ಎಂಬುದನ್ನು ತಿಳಿಯಲು ಮತ್ತದೆ ಸುಳಗಾದ ಏಜೆಂಟ್ನನ್ನು ಮಾತಿಗೆಳೆದಾಗ ಯಾವ ದಾಖಲೆಗೆ ಎಷ್ಟು ಹಣ ಪಡೆಯುತ್ತಾರೆ ಎಂಬುದರ ಬಗ್ಗೆ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ. ಆಧಾರ್ ಕಾರ್ಡ್, ವೋಟರ್ ಐಡಿ, ಜನನ ಪ್ರಮಾಣಪತ್ರ ಹೀಗೆ ಎಲ್ಲವನ್ನೂ ಮಾಡುತ್ತೇವೆ. ನಿಮಗೆ ಏನು ಬೇಕು ಎನ್ನುವುದರ ಮೇಲೆ ಅದರ ರೇಟ್ ಹೇಳುತ್ತೇನೆ. ಎಸ್ಎಸ್ಎಲ್ಸಿ ಪಾಸಿಂಗ್ ಸರ್ಟಿಫಿಕೇಟ್ ಬೇಕಾದ್ರೆ 40 ಸಾವಿರ ರೂ. ಕೊಡಬೇಕು. ಮಾಡಿಕೊಡುವವರಿಗೂ ನಾವು ಕೊಡಬೇಕು, ಹೀಗಾಗಿ ಅದರಲ್ಲಿ ನನಗೆ ಹೆಚ್ಚು ಉಳಿಯುವುದಿಲ್ಲ. ನಾವು ಯಾವುದನ್ನೂ ಡುಪ್ಲಿಕೇಟ್ ಕೊಡುವುದಿಲ್ಲ, ಅನುಮಾನ ಇದ್ದರೆ ಸರ್ಕಾರಕ್ಕೆ ತೋರಿಸಿ ಎಂದು ಸವಾಲ್ ಹಾಕುತ್ತಾನೆ. ಹಾಗಾಗಿ ಈ ಅಕ್ರಮ ಜಾಲ ಎಲ್ಲಿಯವರೆಗೆ ಹಬ್ಬಿಕೊಂಡಿದೆ ಎಂಬುದನ್ನು ಊಹಿಸಬಹುದು. ಮತದಾನ ಹೆಚ್ಚಿಸುವುದಕ್ಕಾಗಿ ಚುನಾವಣೆ ಸಂದರ್ಭ ಮತದಾರರ ಗುರುತಿನ ಚೀಟಿ ವಿತರಿಸುವ, ನೋಂದಾಯಿಸುವ ಪ್ರಕ್ರಿಯೆ ಆಯಾ ಪ್ರದೇಶಗಳ ಶಾಲೆ ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ನೌಕರರಿಗೆ ವಹಿಸಲಾಗುತ್ತದೆ. ಚುನಾವಣೆ ಮುಕ್ತಾಯದ ನಂತರ ನೂತನವಾಗಿ ಮತದಾರರ ಐಡಿ ಪಡೆಯುವುದು ಕಷ್ಟ. ಪಾಸ್ಪೋರ್ಟ್ ಪಡೆಯಲು ವೋಟರ್ ಐಡಿ ಕಡ್ಡಾಯ. ಹೀಗಾಗಿ ಆ ಸಂದರ್ಭಗಳಲ್ಲಿ ಅಗತ್ಯವಿದ್ದವರು ಶಾರ್ಟ್ಕಟ್ನಲ್ಲಿ ವೋಟರ್ ಐಡಿ ಪಡೆಯುತ್ತಾರೆ. ಈತನೊಬ್ಬನಿಂದ ಇದೆಲ್ಲ ಹೇಗೆ ಸಾಧ್ಯ? ಎಂಬ ಅನುಮಾನ ಕಾಡುವುದು ನಿಜ. ಆದರೆ, ಈತನೊಬ್ಬನೇ ಈ ಕೃತ್ಯ ನಡಸುತ್ತಿಲ್ಲ. ಸಾರ್ವಜನಿಕರು ನೀಡಿದ ದಾಖಲೆಗಳ ಫೋಟೋ ತೆಗೆದು ಮೊಬೈಲ್ನಲ್ಲಿ ಪರಿಚಿತ ವ್ಯಕ್ತಿಗೆ ವಾಟ್ಸ್ಆಪ್ ಮೂಲಕ ಕಳುಹಿಸುತ್ತಾನೆ. ನಂತರ ಆತ ಸರ್ಕಾರಿ ದಾಖಲೆ ನೀಡಲು ಸಮಯ ತೆಗೆದುಕೊಳ್ಳುತ್ತಾನೆ. ಇಲ್ಲಿ ಈ ಫೋಟೋ ಗ್ರಾಫರ್ ಕೇವಲ ಹೆಸರಿಗೆ ಮಾತ್ರ. ಬೇರೆ ಎಲ್ಲಿಯೋ ಕುಳಿತು ಕಾರ್ಯಸಾಧಿಸುವವರ ಸಂಖ್ಯೆ ಇನ್ನೂ ಹೆಚ್ಚಿದೆ.
ಬಾಂಗ್ಲಾ ವಲಸಿಗರಿಗೂ ಆಧಾರ್: ಬೆಳಗಾವಿಯಲ್ಲಿ ಆಧಾರ್ ಮಾಡಿಸಿಕೊಂಡಿದ್ದ ಬಾಂಗ್ಲಾ ವಲಸಿಗ ಮಹಮ್ಮದ್ ಬೇಪಾರಿ 2017ರಲ್ಲಿ ದುಬೈಗೆ ಹೊರಟಿದ್ದಾಗ ಪುಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಆನಂತರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಜಿಲ್ಲೆಯಲ್ಲಿ 12 ಅಕ್ರಮ ಬಾಂಗ್ಲಾ ವಲಸಿಗಳನ್ನು ಪತ್ತೆ ಹಚ್ಚಿದ್ದನ್ನು ಸ್ಮರಿಸಬಹುದು.
ಕೃಪೆ:ವಿಜಯವಾಣಿ