ಬೆಂಗಳೂರು, ಜುಲೈ 14,2023(www.justkannada.in): ತಾಯಿಗೆ ಜೀವನಾಂಶ ನೀಡಲು ಸಾಧ್ಯವಿಲ್ಲವೆಂದ ಪುತ್ರರಿಗೆ ರಾಜ್ಯ ಹೈಕೋರ್ಟ್ ತರಾಟೆ ತೆಗೆದುಕೊಂಡಿದ್ದು, ಪ್ರತಿ ತಿಂಗಳು ತಲಾ 10 ಸಾವಿರ ಪಾವತಿಸುವಂತೆ ಪುತ್ರರಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಮೈಸೂರಿನ ನಿವಾಸಿಯಾದ 84 ವರ್ಷದ ವೆಂಕಟಮ್ಮ ಗಂಡು ಮಕ್ಕಳಿಂದ ದೂರವಾಗಿ ಪುತ್ರಿಯರ ಮನೆ ಸೇರಿದ್ದರು. ಜೀವನ ನಿರ್ವಹಣೆಗೆ ಇಬ್ಬರು ಪುತ್ರರಿಂದ ಜೀವನಾಂಶ ಕೊಡಿಸುವಂತೆ ಮೈಸೂರಿನ ವಿಭಾಗಾಧಿಕಾರಿಗಳನ್ನು ಮನವಿ ಸಲ್ಲಿಸಿದ್ದರು
ಹಿರಿಯ ನಾಗರಿಕರ ಜೀವನಾಂಶ ಹಾಗೂ ಕಲ್ಯಾಣ ಕಾಯ್ದೆಯಡಿ ತಲಾ 5 ಸಾವಿರ ಜೀವನಾಂಶ ಒದಗಿಸುವಂತೆ ವಿಭಾಗಾಧಿಕಾರಿ ನೀಡಿದ್ದ ಆದೇಶ ಮಾರ್ಪಡಿಸಿದ್ದ ಜಿಲ್ಲಾಧಿಕಾರಿಗಳು ತಲಾ 10 ಸಾವಿರ ರೂಪಾಯಿ ಜೀವನಾಂಶ ಒದಗಿಸುವಂತೆ ವೆಂಕಟಮ್ಮ ಪುತ್ರರಿಗೆ ಆದೇಶಿಸಿದ್ದರು.
ಇದನ್ನ ಪ್ರಶ್ನಿಸಿ ಇಬ್ಬರು ಪುತ್ರರಾದ ಗೋಪಾಲ್, ಮಹೇಶ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ಪುರಾಣ, ಉಪನಿಷತ್ಗಳನ್ನು ಉಲ್ಲೇಖಿಸಿ ತಾಯಿಯನ್ನು ಸಲಹುವ ಕರ್ತವ್ಯ ಮಕ್ಕಳದ್ದೆಂದು ತೀರ್ಪು ನೀಡಿದ್ದಾರೆ.
ಇಬ್ಬರೂ ಪುತ್ರರು ದೈಹಿಕವಾಗಿ ಸಮರ್ಥರಾಗಿರುವುದರಿಂದ ತಾಯಿಗೆ ಜೀವನಾಂಶ ನೀಡಲು ಸಾಧ್ಯವಿಲ್ಲವೆಂದು ಹೇಳಲಾಗದು. ಪತ್ನಿಯನ್ನು ಸಲಹಲು ಸಮರ್ಥನಿರುವ ಪುರುಷ ಅವಲಂಬಿತ ತಾಯಿಯನ್ನು ನೋಡಿಕೊಳ್ಳಲು ಏಕೆ ಸಾಧ್ಯವಿಲ್ಲ. ಒಬ್ಬ ಮಗನಿಗೆ 3 ಮಳಿಗೆಯ ಬಾಡಿಗೆ ಬರುತ್ತಿದೆ. ತಾಯಿಯನ್ನು ತಾವೇ ನೋಡಿಕೊಳ್ಳುತ್ತೇವೆಂಬ ಪುತ್ರರ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಗೆಯೇ ಎಲ್ಲಾ ವಸ್ತುಗಳು ದುಬಾರಿಯಾಗಿರುವ ಈ ಕಾಲದಲ್ಲಿ 10 ಸಾವಿರ ಜೀವನಾಂಶ ಹೆಚ್ಚಾಯಿತೆಂಬ ಪುತ್ರರ ವಾದವನ್ನು ಹೈಕೋರ್ಟ್ ತಳ್ಳಿಹಾಕಿದ್ದು, ತಾಯಿಗೆ ತಲಾ 10 ಸಾವಿರ ಪಾವತಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳು ನೀಡಿರುವ ಆದೇಶವನ್ನು ಎತ್ತಿ ಹಿಡಿದಿದೆ.
Key words: sons cannot pay – mother- direction –high court