ಬೆಂಗಳೂರು,ಜುಲೈ,28,2021(www.justkannada.in): ನಮ್ಮ ಸರ್ಕಾರ ಜನಪರ ಆಡಳಿತ ನೀಡಲಿದೆ. ಬಡವರ ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಳೆದ ಒಂದುವರೆ ವರ್ಷದಿಂದ ಕೊರೋನಾ ಸಂಕಷ್ಟವಿದೆ. ಕಳೆದ 2 ಬಾರಿಯಿಂದ ಪ್ರವಾಹ ಸ್ಥಿತಿ ಎದುರಿಸುತ್ತಿದ್ದಾರೆ. ನಮ್ಮ ಮುಂದೆ ಆರ್ಥಿಕ ಸಾಮಾಜಿಕ ಸವಾಲುಗಳಿವೆ. ಕೆಲ ಸಮಸ್ಯೆಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ಥೇವೆ. ಜನಪರ ಆಡಳಿತವನ್ನ ನೀಡುತ್ತೇವೆ. ರಾಜ್ಯದ ಜನರ ಸಂಕಷ್ಟಗಳಿಗೆ ನಮ್ಮ ಸರ್ಕಾರ ಸ್ಪಂದಿಸುತ್ತದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮವಹಿಸಲಾಗುತ್ತದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಎಲ್ಲರ ನೆರವು ಪಡೆದು ಸವಾಲು ಎದುರಿಸುತ್ತೇನೆ ನಾನು ಸಿಎಂ ಎನ್ನುವುದಕ್ಕಿಂತ ಟೀಂ ವರ್ಕ್ ಮಾಡುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.
ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಈ ಬಗ್ಗೆ ಇಂದು ಚರ್ಚೆ ನಡೆಯಲಿದೆ. ಪ್ರಮಾಣವಚನ ಸಮಾರಂಭದ ಬಳಿಕ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಆ ಬಳಿಕ ಅಧಿಕಾರಿಗಳ ಸಭೆ ನಡೆಸಿ ರಾಜ್ಯದಲ್ಲಿ ಕೋವಿಡ್ ಹಾಗೂ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಲಾಗುವುದು. ಜತೆಗೆ ಪ್ರವಾಹಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರ ಪದಗ್ರಹಣಕ್ಕೆ ಮುನ್ನ ರಾಜಕೀಯ ಗುರು ಯಡಿಯೂರಪ್ಪ ಅವರ ಆಶಿರ್ವಾದ ಪಡೆದರು.
Key words: Soon – cabinet- expansion-CM -Basavaraja Bommai -Confidence.