ಮೈಸೂರು,ಜೂನ್,11,2022(www.justkannada.in): ಜೂನ್ 13 ರಂದು ನಡೆಯುವ ದಕ್ಷಿಣ ಪದವೀಧರ ಕ್ಚೇತ್ರದ ಚುನಾವಣೆಯ ಕಣ ರಂಗೇರಿದ್ದು, ಈ ಮಧ್ಯೆ ಭಾರಿ ಪ್ರಮಾಣದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ.
ಹಾಸನ ಮಂಡ್ಯ ಮೈಸೂರು ಜಿಲ್ಲೆಯಲ್ಲಿ ಗಾಂಜಾ ಪತ್ತೆಯಾಗಿದೆ. ಪ್ರಜ್ಞಾವಂತ ಮತದಾರರು ಎನ್ನುವ ಚುನಾವಣಾ ಕ್ಷೇತ್ರದಲ್ಲಿ ಗಾಂಜಾ ,ಮದ್ಯದ ಅಮಲು ಕಂಡು ಬಂದಿದ್ದು, ಚುನಾವಣಾ ಆಯೋಗ ಒಟ್ಟು 21 ಕೆಜಿ ಗಾಂಜಾವನ್ನ ವಶಪಡಿಸಿಕೊಂಡಿದೆ.
ಈ ಕುರಿತು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಚುನಾವಣಾ ಅಧಿಕಾರಿ ಜಿ.ಸಿ ಪ್ರಕಾಶ್ , ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅಧಿಕಾರಿಗಳು ಗಾಂಜಾ ವಶಪಡಿಸಿಕೊಂಡಿದ್ದು, ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 516 ಪ್ರಕರಣಗಳಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ. ಹಾಗೆಯೇ 2,34,824 ರೂ ಮೌಲ್ಯದ ಮದ್ಯ 12 ದ್ವಿಚಕ್ರವಾಹನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದ ಅವಧಿ 1 ಗಂಟೆ ವಿಸ್ತರಣೆ.
ಇನ್ನು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದ ಅವಧಿ 1 ಗಂಟೆ ವಿಸ್ತರಣೆ ಮಾಡಲಾಗಿದೆ. ಜೂನ್ 13 ರಂದು ದಕ್ಷಿಣ ಪದವೀಧರ ಕ್ಷೇತ್ರದ ಮತದಾನ ನಡೆಯಲಿದ್ದು, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ 1,41,961 ಮಂದಿ ಪದವೀಧರ ಮತದಾರರಿದ್ದಾರೆ. ಈ ಪೈಕಿ 82,505 ಪುರುಷರು, 59,432 ಮಹಿಳೆಯರು, 24 ಇತರೆ ಮತದಾರರಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತ ಚಲಾಯಿಸಲು ಅವಕಾಶವಿದ್ದು, ಮತದಾನ ಮಾಡಲು ಒಂದು ಗಂಟೆ ಅವಧಿಯನ್ನು ವಿಸ್ತರಿಸಲಾಗಿದೆ. ಅರ್ಹ ಮತದಾರರು ರಾಜ್ಯದ ಯಾವುದೇ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಕೂಡ ಮತದಾನ ಮಾಡಲು ಅನುಕೂಲವಾಗುವಂತೆ ರಜೆ ನೀಡುವಂತೆ ಆದೇಶಿಸಲಾಗಿದೆ. ಬಹಿರಂಗ ಪ್ರಚಾರ ಇಂದು ಸಂಜೆ 5 ಗಂಟೆಗೆ ಅಂತ್ಯವಾಗಲಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 150 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಾದೇಶಿಕ ಆಯುಕ್ತ ಡಾ. ಜಿ ಸಿ ಪ್ರಕಾಶ್ ಮಾಹಿತಿ ನೀಡಿದರು.
ಹಾಸನ ಜಿಲ್ಲೆಯಲ್ಲಿ 27 ಮತಗಟ್ಟೆಗಳು. ಮಂಡ್ಯದಲ್ಲಿ 45, ಮೈಸೂರು ಜಿಲ್ಲೆಯಲ್ಲಿ 66 ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ 12 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಈ ಪೈಕಿ ನಾಲ್ಕು ಜಿಲ್ಲೆಗಳಲ್ಲಿ 68 ಸೂಕ್ಷ್ಮ, 17 ಅತಿಸೂಕ್ಷ್ಮ ಮತಗಟ್ಟೆಗಳಿವೆ. ಹಾಸನ ಜಿಲ್ಲೆಯಲ್ಲಿ 2 ಅತಿ ಸೂಕ್ಷ್ಮ ಮತಗಟ್ಟೆಗಳಿದ್ದು, ಮಂಡ್ಯ ಜಿಲ್ಲೆಯಲ್ಲಿ 13, ಮೈಸೂರು ಜಿಲ್ಲೆಯಲ್ಲಿ 2 ಅತಿ ಸೂಕ್ಷ್ಮ ಮತಗಟ್ಟೆಗಳಿದ್ದು ಹೆಚ್ಚಿನ ಬಂದೋಬಸ್ತ್ ಮಾಡಲಾಗುತ್ತದೆ. ಮತದಾರರ ಬಲಗೈನ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುತ್ತದೆ. ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ ಕ್ಷೇತ್ರದ ವ್ಯಾಪ್ತಿಗೆ ಸೇರದ ರಾಜಕೀಯ ನಾಯಕರು ಕ್ಷೇತ್ರದಿಂದ ಹೊರಡಬೇಕು. ಆಯಾ ತಾಲ್ಲೂಕಿನ ಕೇಂದ್ರಗಳಲ್ಲಿ ಮಸ್ಟರಿಂಗ್ ಹಾಗೂ ಡೀ ಮಸ್ಟರಿಂಗ್ ನಡೆಯಲಿದ್ದು, ಜೂನ್ 15 ರಂದು ಮೈಸೂರಿನ ಮಹಾರಾಣಿ ವಾಣಿಜ್ಯ ಪದವಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಡಾ. ಜಿ ಸಿ ಪ್ರಕಾಶ್ ತಿಳಿಸಿದರು.
Key words: Southern- graduate –election-21kg marijuana – liquor seized