1979ರಲ್ಲಿ ನಡೆದ ಇರಾನಿನ ಕ್ರಾಂತಿಯ ನಂತರ ಇರಾನ್ ಮತ್ತು ಅಮೆರಿಕಾಗಳ ಮಧ್ಯದ ಸಂಬಂಧ ಯಾವತ್ತೂ ಬೂದಿ ಮುಚ್ಚಿದ ಕೆಂಡದಂತೆ ಉದ್ವಿಗ್ನವಾಗೇ ಇತ್ತು. ಇತ್ತೀಚಿನ ವರ್ಷಗಳಲ್ಲಿ ಇರಾನ್ ಕೈಗೆತ್ತಿಕೊಂಡಿರುವ ಪರಮಾಣು ಕಾರ್ಯಾಚರಣೆಗಳು ಹಾಗೂ ಅದರ ಮೇಲೆ ಅಮೆರಿಕಾ ಹೇರಿರುವ ನಿರ್ಬಂಧಗಳು ಸಾಕಷ್ಟು ವಿವಾದಗಳಿಗೆ ಗ್ರಾಸವಾಗಿವೆ. ಅಮೆರಿಕಾ ಮತ್ತು ಇರಾನ್ ಎರಡೂ ರಾಷ್ಟ್ರಗಳೂ ಈಗ ಮತ್ತೆ ಮಾತುಕತೆಯಿಂದ ಫಲ ಸಿಗುತ್ತದೆಯೇ ಎಂದು ನೋಡಲು ಇನ್ನೊಂದು ಪ್ರಯತ್ನಕ್ಕಿಳಿದಿವೆ. ಆದರೆ ಈ ವಿಚಾರದಲ್ಲಿ ನಡೆದ ಪ್ರಗತಿ ಮಾತ್ರ ತೀರಾ ಕಡಿಮೆ. ಪ್ರಸ್ತುತ ರಷ್ಯಾ ಮತ್ತು ಉಕ್ರೇನ್ ಮಧ್ಯ ನಡೆಯುತ್ತಿರುವ ಯುದ್ಧವೂ ಈ ಪರಿಸ್ಥಿತಿಯನ್ನು ಇನ್ನಷ್ಟು ಕಠಿಣಗೊಳಿಸಿದೆ.
ಒಂದು ವೇಳೆ ಮಾತುಕತೆಯ ಮೇಲೆ ಇರಾನ್‌ಗಿರುವ ನಂಬಿಕೆ ಸಂಪೂರ್ಣವಾಗಿ ಕುಸಿದು ಹೋದರೆ, ಆ ರಾಷ್ಟ್ರವು ಅಮೆರಿಕಾದ ಮೇಲೆ ಇನ್ನಷ್ಟು ಒತ್ತಡ ಹೇರುವಂತೆ ಮಾಡಲು ತನ್ನ ಕೊನೆಯ, ಪ್ರಬಲವಾದ ಉಪಾಯವಾದ ಹೊರ್ಮುಸ್ ಜಲಸಂಧಿಯನ್ನು ಮುಚ್ಚುವ ನಿರ್ಧಾರ ಕೈಗೊಳ್ಳಲೂಬಹುದು. ಅದೂ ಅಲ್ಲದೆ, ಹೊರ್ಮುಸ್ ಜಲಸಂಧಿ ಮಧ್ಯ ಪೂರ್ವದ ತೈಲವನ್ನು ಸಂಪೂರ್ಣ ಜಗತ್ತಿಗೆ ಸರಬರಾಜು ಮಾಡುವ ನಿಟ್ಟಿನಲ್ಲಿ ಅತ್ಯಂತ ಮುಖ್ಯವಾದ, ಕಾರ್ಯತಂತ್ರದ ಜಲ ಮಾರ್ಗವಾಗಿದೆ.
ಈ ಹೊರ್ಮುಸ್ ಜಲಸಂಧಿ ಅನ್ನುವುದು ಒಮಾನ್ ಮತ್ತು ಇರಾನ್ ರಾಷ್ಟ್ರಗಳ ಮಧ್ಯದಲ್ಲಿರುವ ಸಮುದ್ರದ ಕಿರಿದಾದ ಪಟ್ಟಿಯಾಗಿದೆ. ಪಶ್ಚಿಮ ರಾಷ್ಟ್ರಗಳೊಡನೆ ಇರಾಕ್, ಕುವೈತ್, ಸೌದಿ ಅರೇಬಿಯಾ, ಬಹರೇನ್, ಕತಾರ್ ಹಾಗೂ ಯುಎಇ ರಾಷ್ಟ್ರಗಳನ್ನು ಅರಬ್ಬಿ ಸಮುದ್ರದ ಮೂಲಕ ಸಂಪರ್ಕಿಸುವ ಏಕೈಕ ಸಮುದ್ರ ಮಾರ್ಗ ಇದಾಗಿದೆ.
2021ರ ಪ್ರಕಾರ, ಜಗತ್ತಿನ ಐದನೇ ಒಂದರಷ್ಟು ಭಾಗದ ಕಚ್ಚಾ ತೈಲ (ಪ್ರತಿದಿನ 17.4 ಮಿಲಿಯನ್ ಬ್ಯಾರಲ್) ಈ ಜಲಮಾರ್ಗದ ಮೂಲಕವೇ ಹಾದು ಹೋಗುತ್ತದೆ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ಸದಸ್ಯ ರಾಷ್ಟ್ರಗಳಾದ ಸೌದಿ ಅರೇಬಿಯಾ, ಇರಾನ್, ಯುಎಇ, ಕುವೈತ್, ಹಾಗೂ ಇರಾಕ್‌ಗಳು ಈ ಜಲಸಂಧಿಯ ಮೂಲಕವೇ ಬಹುಪಾಲು ಕಚ್ಚಾ ತೈಲವನ್ನು ರಫ್ತು ಮಾಡುತ್ತವೆ. ಇದರೊಂದಿಗೆ, ಜಗತ್ತಿನ ಮೂರನೇ ಒಂದರಷ್ಟು ದ್ರವೀಕೃತ ನೈಸರ್ಗಿಕ ಅನಿಲ ಪಶ್ಚಿಮದ ರಾಷ್ಟ್ರಗಳಿಗೆ ಈ ಜಲಸಂಧಿಯ ಮೂಲಕವೇ ರಫ್ತಾಗುತ್ತದೆ.
ಹೊರ್ಮುಸ್ ಜಲಸಂಧಿಗಿದೆ ಅಪಾರ ಕಾರ್ಯತಂತ್ರದ ಪ್ರಾಮುಖ್ಯತೆ:
ಇರಾನ್ ಸಮುದ್ರದ ತೀರದಲ್ಲಿರುವ ರಾಷ್ಟ್ರವಾಗಿರುವುದರಿಂದ, ಅದು ಇರಾನ್‌ಗೆ ಮಧ್ಯ ಪೂರ್ವದ ಬೇರೆ ಯಾವ ರಾಷ್ಟ್ರಗಳಿಗೂ ಇಲ್ಲದ ಒಂದು ಮೇಲುಗೈಯನ್ನು ಒದಗಿಸುತ್ತದೆ. ಇರಾನ್‌ಗೆ ತಾನು ಇರುವ ಪ್ರದೇಶದ ಕಾರ್ಯತಂತ್ರದ ಮಹತ್ವ ತುಂಬಾ ಚೆನ್ನಾಗಿ ಅರಿವಿದೆ. ಅದು ತನ್ನ ಸ್ಥಾನವನ್ನು ಉಪಯೋಗಿಸಿ, ಕಚ್ಚಾ ತೈಲ ಸಾಗಾಟವನ್ನು ನಿಯಂತ್ರಿಸಬಹುದು. ಆ ಮೂಲಕ ಅದು ಅಂತಾರಾಷ್ಟ್ರೀಯ ಸಂಬಂಧಗಳ ಮೇಲೂ ಪರಿಣಾಮ ಬೀರಬಹುದು. ಇದನ್ನು ಅರ್ಥ ಮಾಡಿಕೊಂಡೇ ಇರಾನ್ ಇತ್ತೀಚೆಗೆ ಹೊರ್ಮುಸ್ ಜಲಸಂಧಿಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಾ ಬಂದಿದೆ. ಈ ರೀತಿ ವರ್ತಿಸುತ್ತಾ ಇರಾನ್ ಹೊರ್ಮುಸ್ ಜಲಸಂಧಿ ನಿರ್ವಿಹಿಸುವ ಮಹತ್ತರ ಪಾತ್ರವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸುತ್ತಾ ಬಂದಿದೆ.
ಇದಕ್ಕೆ ನಮಗೆ ಸಾಕಷ್ಟು ಉದಾಹರಣೆಗಳೂ ಲಭಿಸುತ್ತವೆ. ಇತ್ತೀಚೆಗೆ, ಅಂದರೆ ಕೇವಲ ತಿಂಗಳ ಹಿಂದಷ್ಟೇ ಇರಾನಿನ ರೆವೊಲ್ಯೂಷನರಿ ಗಾರ್ಡ್ ಅರೇಬಿಯನ್ ಕೊಲ್ಲಿಯ ಸಮೀಪ ಎರಡು ಗ್ರೀಕ್ ತೈಲ ಟ್ಯಾಂಕರ್‌ಗಳನ್ನು ವಶಪಡಿಸಿಕೊಂಡಿತ್ತು. ಆ ಬಳಿಕ ಅವುಗಳನ್ನು ಇರಾನ್ ತೀರದ ಕಡೆ ತೆರಳುವಂತೆ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಗ್ರೀಕ್ ವಿದೇಶಾಂಗ ಸಚಿವಾಲಯ ತನಗೆ ಈ ರೀತಿ ವಶಪಡಿಸಲ್ಪಟ್ಟ ಹಡಗಿನ ಜೊತೆ ಯಾವ ಸಂಪರ್ಕ ಏರ್ಪಡಿಸಲೂ ಸಾಧ್ಯವಾಗುತ್ತಿಲ್ಲ ಎಂದಿತ್ತು. ಅದರ ನಂತರ ಹೊರ್ಮುಸ್ ಜಲಸಂಧಿಯಲ್ಲಿ ಅಮೆರಿಕಾದ ನೌಕಾಪಡೆ ಹಾಗೂ ಇರಾನಿನ ಪ್ಯಾರಾ ಮಿಲಿಟರಿ ರೆವಲ್ಯೂಷನರಿ ಗಾರ್ಡ್ ಮಧ್ಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ, ಸಾಕಷ್ಟು ಮಾತಿನ ಚಕಮಕಿಯೂ ನಡೆದಿತ್ತು.
ಇಷ್ಟೇ ಅಲ್ಲದೆ, ಇರಾನ್ ಅಮೇರಿಕಾ ಹೇರಿರುವ ನಿರ್ಬಂಧಗಳನ್ನು ಪ್ರತಿಭಟಿಸಿ, ಅದರ ವಿರುದ್ಧವಾಗಿ ಹೊರ್ಮುಸ್ ಜಲಸಂಧಿಯನ್ನು ಮುಚ್ಚಿಬಿಡುತ್ತೇನೆ ಎಂಬುದಾಗಿಯೂ ಬೆದರಿಕೆಗಳನ್ನು ಒಡ್ಡಿದ ಉದಾಹರಣೆಗಳಿವೆ (ಜುಲೈ 2018). ಒಂದು ವೇಳೆ ಇರಾನ್ ಏನಾದರೂ ಅದು ಹೇಳಿದಂತೆಯೇ ಈ ಜಲಸಂಧಿಯನ್ನೇನಾದರೂ ಮುಚ್ಚುವ ನಿರ್ಧಾರ ಕೈಗೊಂಡಿದ್ದೇ ಆದರೆ, ಅದು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಬಹುದೊಡ್ಡ ಆಘಾತ ನೀಡಲಿದೆ. ಬಿಡಿಸಿ ಹೇಳುವ ಅಗತ್ಯವೇ ಇಲ್ಲದಂತೆ, ಒಂದು ವೇಳೆ ಇರಾನ್ ಏನಾದರೂ ಈ ಜಲಸಂಧಿಯನ್ನು ಮುಚ್ಚಿದ್ದೇ ಆದರೆ, ಆ ಬಳಿಕ ಜಾಗತಿಕ ತೈಲ ಸರಬರಾಜು ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಳ್ಳುತ್ತದೆ. ಅದರ ಪರಿಣಾಮವಾಗಿ ತೈಲ ಬೆಲೆಯೂ ಗಗನಕ್ಕೇರುತ್ತದೆ. ಅದರಿಂದಾಗಿ ಯುರೋಪಿಯನ್ ಒಕ್ಕೂಟದ ಆರ್ಥಿಕತೆಯ ಕುತ್ತಿಗೆ ಹಿಸುಕಿದಂತಾಗಿ, ಆ ಶ್ರೇಯಸ್ಸೂ ಇರಾನ್ ಮುಡಿಗೇರಲಿದೆ! ಯುರೋಪಿಯನ್ ಒಕ್ಕೂಟದ ಜೊತೆಗೆ, ಇದು ಅಮೆರಿಕಾದ ಆರ್ಥಿಕತೆಗೂ ಬಲವಾದ ಏಟು ನೀಡಲಿದೆ. ಸಹಜವಾಗಿಯೇ ತೈಲ ಬೆಲೆಯಲ್ಲಿ ಉಂಟಾಗುವ ಹೆಚ್ಚಳ ಒಂದು ಸರಣಿ ಪ್ರಕ್ರಿಯೆಯಂತೆ, ಸರಕು ಸಾಗಾಣಿಕೆ ಬೆಲೆಯಲ್ಲಿನ ಹೆಚ್ಚಳ, ಆ ಮೂಲಕ ವಸ್ತುಗಳ ಬೆಲೆ ಏರಿಕೆ, ಅದರ ಪರಿಣಾಮವಾಗಿ ಹಣದುಬ್ಬರ, ಸಾಮಾನ್ಯ ಜನತೆ ಹಾಗೂ ಉದ್ಯಮಗಳಿಗೆ ಸಂಕಷ್ಟ, ಈ ರೀತಿ ಸಾಕಷ್ಟು ಬೇರೆ ಬೇರೆ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಒಂದು ವೇಳೆ ಇರಾನ್ ಏನಾದರೂ ಹೊರ್ಮುಸ್ ಜಲಸಂಧಿಯನ್ನು ಮುಚ್ಚಿಬಿಟ್ಟರೆ, ಅದು ಪಾಶ್ಚಿಮಾತ್ಯ ಜಗತ್ತಿನ ಮೇಲೆ ಅಪಾರ ಒತ್ತಡ ಹೇರುತ್ತದೆ. ಈ ರೀತಿ ಮಾಡಿದರೂ, ಇರಾನಿನ ಅಂತಿಮ ಉದ್ದೇಶ ಅಮೆರಿಕಾ ತನ್ನ ಮೇಲೆ ಹೇರಿರುವ ನಿರ್ಬಂಧಗಳನ್ನು ತೆಗೆಯುವಂತೆ ಮಾಡುವುದೇ ಆಗಿರುತ್ತದೆ. ಆಗ ಕಚ್ಚಾ ತೈಲದ ಅಭಾವದಿಂದ ನರಳುವ ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ಸಹ ಅಮೆರಿಕಾವನ್ನು ಇರಾನ್ ಮೇಲೆ ಹೇರಿರುವ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸುತ್ತವೆ ಎಂಬುದು ಇರಾನ್ ಲೆಕ್ಕಾಚಾರ.
ಆದರೆ ಎಲ್ಲವೂ ಅಲ್ಲಿಗೆ ಮುಕ್ತಾಯವಾಗುತ್ತದೆ ಎನ್ನಲು ಸಾಧ್ಯವಿಲ್ಲ. ಕಚ್ಚಾ ತೈಲ ಪೂರೈಕೆಯಲ್ಲಿ ಉಂಟಾಗುವ ತೊಂದರೆಯ ಪರಿಣಾಮವಾಗಿ ಯುರೋಪಿನ ಮೇಲೆ ಶಕ್ತಿ ಪೂರೈಕೆಯಲ್ಲಿ ರಷ್ಯಾದ ಹತೋಟಿ ಹೆಚ್ಚಾಗಬಹುದು. ಇದರಿಂದಾಗಿ ಉಕ್ರೇನಿನ ವಿಚಾರದಲ್ಲಿ ಯುರೋಪಿಯನ್ ಯೂನಿಯನ್ನಿನ ಹಠವೂ ಸಡಿಲಾಗಬಹುದು.
ಒಂದು ವೇಳೆ ಈ ಜಲಸಂಧಿಯನ್ನು ಇರಾನ್ ಮುಚ್ಚುವ ನಿರ್ಧಾರ ಕೈಗೊಂಡರೂ, ಅದರ ಪರಿಣಾಮವಾಗಿ ಇರಾನಿನ ಸ್ವಂತ ಹಡಗುಗಳ ಓಡಾಟಕ್ಕೂ ತಡೆ ಉಂಟಾಗುತ್ತದೆ. ಅದರಿಂದಾಗಿ ಇರಾನ್ ಕೇವಲ ಈ ಜಲಮಾರ್ಗವನ್ನು ಮುಚ್ಚುವುದು ಮಾತ್ರವಲ್ಲದೆ, ಅದರ ಹಡಗುಗಳು ಅರಬ್ಬಿ ಸಮುದ್ರದಲ್ಲಿ ಹಾದು ಹೋಗಲು ಅನುವಾಗುವಂತೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ 2021ರಲ್ಲಿ ಇರಾನ್ ಜಾಸ್ಕ್ ಬಂದರಿನ ಬಳಿ ಒಂದು ನೂತನ ತೈಲ ಟರ್ಮಿನಲ್ ತೆರೆದಿತ್ತು. ಈ ಟರ್ಮಿನಲ್ ಹೊರ್ಮುಸ್ ಜಲಸಂಧಿಯ ದಕ್ಷಿಣಕ್ಕಿದ್ದು, ಅರಬ್ಬಿ ಸಮುದ್ರಕ್ಕೆ ಚಲಿಸುವ ಹಡಗುಗಳಿಗೆ ಬೈಪಾಸ್‌ನಂತೆ, ಹೊರ್ಮುಸ್ ಜಲಸಂಧಿಯನ್ನು ಪ್ರವೇಶಿಸದೆ ಸಾಗುವಂತೆ ಜಲಮಾರ್ಗದ ವ್ಯವಸ್ಥೆ ಮಾಡುತ್ತಿತ್ತು. ಆದರೆ ಮಧ್ಯ ಪೂರ್ವದ ಬೇರೆ ರಾಷ್ಟ್ರಗಳಿಗೆ ಇಂತಹ ಪರ್ಯಾಯ ಜಲಮಾರ್ಗದ ವ್ಯವಸ್ಥೆ ಇಲ್ಲದಿರುವ ಕಾರಣ ಅವುಗಳು ತೀವ್ರ ಒತ್ತಡಕ್ಕೊಳಗಾಗುತ್ತವೆ.
ಈ ಟರ್ಮಿನಲ್ ಕುರಿತ ಮೊದಲ ವರದಿಗಳು ಬರುತ್ತಿದ್ದ ಹಾಗೇ, ಇರಾನಿನ ಆಗಿನ ಅಧ್ಯಕ್ಷ ಹಸನ್ ರೌಹಾನಿ ಇದು ಒಂದು ಕಾರ್ಯತಂತ್ರದ ನಿರ್ಧಾರವಾಗಿದ್ದು, ಇರಾನ್ ಪಾಲಿಗೆ ಮಹತ್ವದ ಹೆಜ್ಜೆಯಾಗಿದೆ ಎಂದಿದ್ದರು. ಅವರು ಈ ಮೂಲಕ ಇರಾನಿನ ತೈಲ ರಫ್ತನ್ನು ಸುರಕ್ಷಿತವಾಗಿಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದರು. ಈ ಮೂಲಕ ಮಧ್ಯ ಪೂರ್ವದ ಬೇರೆ ಯಾವ ರಾಷ್ಟ್ರವೂ ಪಶ್ಚಿಮದ ರಾಷ್ಟ್ರಗಳಿಗೆ ತೈಲ ಪೂರೈಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣ ಮಾಡಲು ಇರಾನ್ ಸಮರ್ಥವಾಗಿದೆ.
ಈಗಿನ ಸಂದರ್ಭದಲ್ಲಿ ಹೊರ್ಮುಸ್ ಜಲಸಂಧಿ ಇರಾನ್ ಕೈಯಲ್ಲಿ ಯಾವುದೇ ನಿರ್ಬಂಧವನ್ನು ಎದುರಿಸಲಾದರೂ ಇರುವ ಬ್ರಹ್ಮಾಸ್ತ್ರದಂತೇ ಕಾಣುತ್ತಿದೆ.
- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
key words : space-science-girish-bangalore