ಮೈಸೂರು, ಸೆ.25, 2020 : (www.justkannada.in news) : ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ನಡೆಸಿಕೊಟ್ಟ ಕೊನೆಯ ಲೈವ್ ಕಾರ್ಯಕ್ರಮ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿತ್ತು. ಅದು ಸಂಸ್ಥೆಯೊಂದರ ಸಹಾಯಾರ್ಥ ಎಸ್ಪಿಬಿ ಖುದ್ದು ಆಸಕ್ತಿ ವಹಿಸಿ ನಡೆಸಿಕೊಟ್ಟ ಕಾರ್ಯಕ್ರಮ.
“ದೀನ ದುರ್ಬಲರ ಸೇವೆಯೇ ದೇವರ ಸೇವೆ’ ಎಂಬ ಧ್ಯೆಯ ಹೊಂದಿರುವ ಮೈಸೂರಿನ ‘ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ‘ ಸಂಸ್ಥೆಗೆಂದು ಬಾಲಸುಬ್ರಮಣ್ಯಂ, 2020 ರ ಫೆಬ್ರವರಿಯಲ್ಲಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಈ ಸಮಾರಂಭ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದಿತ್ತು.
ಸುದೀರ್ಘ ಕಾಯಿಲೆಗೆ ತುತ್ತಾದವರು, ಗುಣಪಡಿಸಲಾಗದ ಕಾಯಿಲೆಗಳಿಂದ ನರಳುತ್ತಿರುವವರಿಗೆ ಉಚಿತವಾಗಿ ಮನೆ ಆಧಾರಿತ ಚಿಕಿತ್ಸೆಯನ್ನು ವಿವೇಕಾನಂದ ಯೂತ್ ಮೂವ್‌ಮೆಂಟ್ ಒದಗಿಸುತ್ತಿದೆ. ಇದಕ್ಕಾಗಿ ಮೈಸೂರಿನ ಪ್ರಿನ್ಸೆಸ್ ಕೃಷ್ಣರಾಜಮ್ಮಣ್ಣಿ ಟ್ಯೂಬರ್‌ಕುಲಾಸಿಸ್ ಅಂಡ್ ಚೆಸ್ಟ್ ಡಿಸೀಸ್ ಕ್ಯಾಂಪಸ್‌ನಲ್ಲಿ ಶುಶ್ರೂಷ ಕೇಂದ್ರ ತೆರೆದು ಸಂಸ್ಥೆಗೆ ದಾಖಲಾದ ರೋಗಿಗಳಿಗೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ.
ಕ್ಯಾನ್ಸರ್, ಗ್ಯಾಂಗ್ರಿನ್, ಪಾರ್ಶ್ವವಾಯು…ಇಂಥ ಕಾಯಿಲೆಗಳಿಗೆಲ್ಲಾ ಚಿಕಿತ್ಸೆ ದುಬಾರಿ. ಚಿಕಿತ್ಸೆಗೆ ಹಣ ಸಂಗ್ರಹಿಸುವ ಸದಾಶಯದಿಂದ “ಸ್ವರಾನುಭೂತಿ’ ಹೆಸರಿನ ವಾರ್ಷಿಕ ಸಂಗೀತ ಕಾರ್ಯಕ್ರಮ ನಡೆಸಲಾಗುತ್ತದೆ. ಅಂದು ಸಂಗ್ರಹವಾಗುವ ಹಣವನ್ನು ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಈ ಸಂಸ್ಥೆಯ ‘ ಉಪಶಮನ ಆರೈಕೆ ‘ ಎಂಬ ವಿನೂತನ ಸೇವೆ ನಡೆಸುತ್ತಿದ್ದು, ಈ ಸಂಸ್ಥೆ ಕಾರ್ಯ ಮೆಚ್ಚಿದ ಗಾಯಕ ಬಾಲು, ಆರ್ಥಿಕ ನೆರವಿಗಾಗಿ ಲೈವ್ ಕಾರ್ಯಕ್ರಮ ನಡೆಸಿಕೊಡಲು ಮುಂದಾದರು.
ಈ ಘಟನೆ ಬಗ್ಗೆ ‘ ಜಸ್ಟ್ ಕನ್ನಡ ‘ ಜತೆ ಮಾತನಾಡಿದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ನ ಸಂಚಾಲಕ ಡಾ. ಬಾಲಸುಬ್ರಮಣ್ಯಂ, ಎಸ್ಪಿಬಿಯ ಸರಳ ವ್ಯಕ್ತಿತ್ವ, ನಾಯಕತ್ವದ ಬಗ್ಗೆ ಹೇಳಲು ಮಾತುಗಳೇ ಬಾರದು. ಶಿಖರದ್ದಷ್ಟು ಎತ್ತರಕ್ಕೆ ಸಾಧನೆ ಮಾಡಿದ್ದರು ನಾನೇನು ಮಾಡೇ ಇಲ್ಲ ಎಂಬಂತೆ ತಣ್ಣಗೆ, ಸಾಮಾನ್ಯರಲ್ಲಿ ಸಾಮಾನ್ಯನಂತೆ ವರ್ತಿಸುತ್ತಿದ್ದರು.
ಸಂಸ್ಥೆಯ ಕಾರ್ಯ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರತಿ ವರ್ಷ ಉಚಿತವಾಗಿ ಕಾರ್ಯಕ್ರಮ ನಡೆಸಿಕೊಡುತ್ತೇನೆ ಎಂದು ಅಭಯ ನೀಡಿದರು. ಅದರಂತೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಈ ಸಲುವಾಗಿಯೇ ಈ ವರ್ಷದ ಫೆಬ್ರವರಿಯಲ್ಲಿ ಮೈಸೂರಿನಲ್ಲಿ ಕಾರ್ಯಕ್ರಮ ಅಯೋಜನೆ ಮಾಡಿದ್ದೆವು. ಎಸ್ಪಿಬಿ ಉತ್ಸಾಹದಿಂದಲೇ ಈ ಕಾರ್ಯಕ್ರಮ ನಡೆಸಿಕೊಟ್ಟರು.
ಅವರ ಈ ಕಾರ್ಯಕ್ರಮವೊಂದರಿಂದಲೇ ಸಂಸ್ಥೆಯ ವರ್ಷದ ಖರ್ಚು, ನಿರ್ವಹಣೆಗೆ ಬೇಕಾದ ಹಣ ಸಂಗ್ರಹವಾಗುತ್ತಿತ್ತು. ಆದರೆ ಅವರೆಂದು ಈ ಬಗ್ಗೆ ಹೆಚ್ಚುಗಾರಿಕೆ ತೋರಿಸಿದವರಲ್ಲ. ಬದಲಿಗೆ ನಾವೇ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲು ಮುಂದಾದಾಗ, ನಾನು ಸಂಸ್ಥೆಯಲ್ಲಿ ಒಬ್ಬ ಎಂದುಕೊಂಡಿದ್ದೇನೆ. ಸನ್ಮಾನ ಮಾಡುವ ಮೂಲಕ ನನ್ನನ್ನು ಹೊರಗಿನವನನ್ನಾಗಿಸಬೇಡಿ ಎಂದರು ಎಂಬುದನ್ನು ಡಾ. ಬಾಲಸುಬ್ರಮಣ್ಯಂ ಸ್ಮರಿಸಿಕೊಂಡರು.
ಈ ಸಮಾರಂಭದಲ್ಲಿ ಭಾಗವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಅಂದಿನ ಕಾರ್ಯಕ್ರಮ ಮರೆಯಲಾಗದು. ಅದೊಂದು ಅವಿಸ್ಮರಣೀಯ ಗಾಯನ ಕಾರ್ಯಕ್ರಮ. ನನಗೆ ಎಸ್ಪಿಬಿ ಅವರ ಹಾಡುಗಳು ಅಂದ್ರೆ ತುಂಬ ಇಷ್ಟ. ಅದರಲ್ಲೂ ಲೈವ್ ಕಾರ್ಯಕ್ರಮ ನಡೆಯುತ್ತಿದೆ ಎಂಬುದು ತಿಳಿದಾಗ, ಅದನ್ನು ತಪ್ಪಿಸಿಕೊಳ್ಳಬಾರದು ಎಂದು ನಿರ್ಧರಿಸಿ ತೆರಳಿದ್ದೆ. ಹೋಗಿದ್ದು ಸಾರ್ಥಕವಾಯಿತು. ಬಾಲು ಅವರ ಗಾನ ಲಹರಿಯಲ್ಲಿ ಮೈ-ಮನಸ್ಸು ಹಗುರವಾಯ್ತು ಎಂಬುದನ್ನು ಸ್ಮರಿಸಿಕೊಂಡರು, ಗಾಯಕ ಬಾಲಸುಬ್ರಂಣ್ಯಂ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.
key words : SPB-Singer- Swami Vivekananda Youth Movement (SVYM) – Dr. R Balasubramaniam- swaranubhuti-music-mysore