ಶಿಮ್ಲಾ, ನ.18, 2021 : ( www.justkannada.in news ) ವಿಧಾನ ಮಂಡಲಗಳ ಸ್ವತಂತ್ರ ನಿರ್ವಹಣೆ ಹಾಗೂ ಪಕ್ಷಾತೀತ ಕಾರ್ಯನಿರ್ವಹಣೆ ದೃಷ್ಠಿಯಿಂದ ಅವುಗಳಿಗೆ ಆರ್ಥಿಕ ಸ್ವಾಯತ್ತತೆ ನೀಡುವುದು ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಆಯವ್ಯಯದಲ್ಲಿ ಪ್ರತ್ಯೇಕ ಬಜೆಟ್ ಮೀಸಲಿಡಬೇಕೆಂದು ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿದರು.
ಶಿಮ್ಲಾದಲ್ಲಿ ನಡೆದ 2 ದಿನಗಳ 82ನೇ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನ ಮತ್ತು ಶತಮಾನೋತ್ಸವ ಸಮಾರಂಭದಲ್ಲಿ ಸಮ್ಮೇಳನದ ನಿರ್ಣಯ ಕುರಿತ ಸಭೆಯಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ, ವಿಧಾನ ಮಂಡಲದ ಸಚಿವಾಲಯಕ್ಕೆ ಆರ್ಥಿಕ ಸ್ವಾಯತ್ತತೆ ನೀಡುವ ಕುರಿತು ಸಮ್ಮೇಳನ ಪೂರಕ ನಿರ್ಣಯ ಸ್ವೀಕರಿಸಿ, ಸದನಗಳ ಗೌರವ, ಘನತೆ ಹಾಗೂ ಪ್ರಾಮುಖ್ಯತೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಲೋಕ ಸಭಾಧ್ಯಕ್ಷರು ನಿರ್ಣಯ ಅಂಗೀಕರಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಸಭಾಪತಿ ಬಸವರಾಜ ಹೊರಟ್ಟಿರವರ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಲೋಕ ಸಭಾಧ್ಯಕ್ಷರಾದ ಓಂ ಬಿರ್ಲಾ ಅವರು ಈ ಕುರಿತು ಕೂಡಲೇ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗುವುದು ಎಂದರು.
ವಿಧಾನ ಮಂಡಲದ ದೈನಂದಿನ ಕಾರ್ಯಚಟುವಟಿಕೆ ಹಾಗೂ ಆಡಳಿತವನ್ನು ಕಾಗದ ರಹಿತವನ್ನಾಗಿಸಲು “ಇ-ವಿಧಾನ್” ತಂತ್ರಜ್ಞಾನ ಅಳವಡಿಕೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸಭಾಪತಿ ಬಸವರಾಜ ಹೊರಟ್ಟಿ ಮಾಡಿದ ಮನವಿಗೆ ತಕ್ಷಣವೇ ಸ್ಪಂದಿಸಿದ ಸಭೆ, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಿತು.
ಸದನದಲ್ಲಿ ಸದಸ್ಯರ ನಡವಳಿಕೆ, ನೀತಿ ನಿಯಮಗಳ ಪಾಲನೆ ಸೇರಿದಂತೆ, ವಿವಿಧ ವಿಷಯಗಳ ಕುರಿತು 2 ದಿನಗಳ ಸಮ್ಮೇಳನದಲ್ಲಿ ಕೈಗೊಂಡ ಎಲ್ಲಾ ನಿರ್ಣಯಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲು ಲೋಕಸಭಾಧ್ಯಕ್ಷರು ಕ್ರಮ ಕೈಗೊಳ್ಳುವಂತೆ ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿದರು.
ಸಭಾಪತಿಗಳ ಮನವಿಗೆ ಸಹಮತ ವ್ಯಕ್ತ ಪಡಿಸಿದ ಲೋಕ ಸಭಾಧ್ಯಕ್ಷ ಓಂ ಬಿರ್ಲಾ, ಸದನದಲ್ಲಿ ಕೈಗೊಳ್ಳುವ ಎಲ್ಲಾ ನಿರ್ಣಯಗಳ ಜಾರಿಗೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗುವುದು, ದೇಶದ ಎಲ್ಲಾ ವಿಧಾನ ಮಂಡಲಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿ, ಪಾರದರ್ಶಕ ಹಾಗೂ ಸುಗಮ ಕಲಾಪಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್ ಮಾತನಾಡಿ, ಮೊದಲ ಪೀಠಾಸೀನಾಧಿಕಾರಿಗಳ ಸಮ್ಮೇಳನ 1921ರಲ್ಲಿ ಹಿಮಾಚಲ ಪ್ರದೇಶದಲ್ಲಿಯೇ ನಡೆದಿದ್ದು, ಇದೀಗ ಶತಮಾನೋತ್ಸವವೂ ಸಹ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.
ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ 2 ದಿನಗಳ ಸಮ್ಮೇಳನ ಫಲಪ್ರದವಾಗಿದೆ, ಪ್ರಜಾಪ್ರಭುತ್ವದ ಯಶಸ್ಸಿಗೆ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೊಳಿಸಿ ಪ್ರಜಾಸತ್ತಾತ್ಮಕ ಮೌಲ್ಯಗಳ ಬಲವರ್ಧನೆಗೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿಮಾಚಲ ಪ್ರದೇಶದ ವಿಧಾನ ಸಭಾಧ್ಯಕ್ಷ ವಿಪಿನ್ ಸಿಂಗ್ ಪರಮಾರ್ ಸೇರಿದಂತೆ, ವಿವಿಧ ರಾಜ್ಯಗಳ ವಿಧಾನ ಸಭಾಧ್ಯಕ್ಷರು ಹಾಗೂ ಸಭಾಪತಿಗಳು ಪಾಲ್ಗೊಂಡಿದ್ದರು.
key words : Speaker of the Karnataka – Legislative Assembly- Vishweshwar Hegde Kageri- Rajendra Vishwanath Arlekar- Governor of Himachal Pradedh – Shimla