ಬೆಂಗಳೂರು,ಅಕ್ಟೋಬರ್,20,2020(www.justkannada.in) : ಚಾಲಕರಿಗೆ 5 ಸಾವಿರ ರೂ. ಕೊಡುವ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಸರ್ಕಾರ ಚಾಲಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿತ್ತು, ಆದರೆ ಅನುಷ್ಠಾನಕ್ಕೆ ತರಲಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಅಸಮಾಧಾನವ್ಯಕ್ತಪಡಿಸಿದ್ದಾರೆ.
ಕೋವಿಡ್-19 ವೇಳೆ ಸಂಕಟಕ್ಕೆ ಒಳಗಾಗಿದ್ದ ಚಾಲಕರಿಗೆ 5 ಸಾವಿರ ರೂ. ಕೊಡುವ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಸರ್ಕಾರ ಪರಿಹಾರ ಕೊಡದೆ ಮಾತು ತಪ್ಪಿದೆ. ಇಂದು ದಂಡ ವಸೂಲಿಯ ನೆಪದಲ್ಲಿ ಚಾಲಕರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕಿಡಿಕಾರಿದ್ದಾರೆ.
ಚಾಲಕರು ಪ್ರಯಾಣಿಕರ ಕೊರತೆಯಿಂದ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ
ಈಗಷ್ಟೇ ರಸ್ತೆಗೆ ಇಳಿದಿರುವ ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರು ಪ್ರಯಾಣಿಕರ ಕೊರತೆಯಿಂದ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ ಪೊಲೀಸರು ದಂಡ ವಸೂಲಿಯನ್ನೇ ಮೂಲಮಂತ್ರವಾಗಿರಿಸಿ ಕೊಂಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು ಎಂದು ಬೇಸರವ್ಯಕ್ತಪಡಿಸಿದರು.
ಚಾಲಕರನ್ನು ಸುಲಿಯುವ ನಿರ್ದಾಕ್ಷಿಣ್ಯ ಕ್ರಮಕ್ಕೆ ತಕ್ಷಣ ತಡೆಯೊಡ್ಡಿ
ಸರ್ಕಾರ ಚಾಲಕರನ್ನು ಸುಲಿಯುವ ನಿರ್ದಾಕ್ಷಿಣ್ಯ ಕ್ರಮಕ್ಕೆ ತಕ್ಷಣ ತಡೆಯೊಡ್ಡಿ ಔದಾರ್ಯ ತೋರುವ ಮೂಲಕ ಚಾಲಕರಿಗೆ ತುಸು ನೆಮ್ಮದಿ ನೀಡಬೇಕಾದ ತುರ್ತು ಅಗತ್ಯವಿದೆ. ಎಗ್ಗಿಲ್ಲದೆ ದಂಡ ವಸೂಲಿ ಮಾಡುವ ಪೋಲಿಸರ ಕ್ರಮದಿಂದ ಚಾಲಕರು ನಲುಗಿ ಹೋಗಿದ್ದಾರೆ. ಇಂತಹ ಕಡು ಕಷ್ಟಕಾಲದಲ್ಲಿ ಸರ್ಕಾರ ಮಾನವೀಯತೆಯನ್ನು ಪ್ರದರ್ಶಿಸಬೇಕು ಎಂದು ಟ್ವಿಟರ್ ನಲ್ಲಿ ಆಗ್ರಹಿಸಿದ್ದಾರೆ.
key words : Special-package-announcement-drivers-same- true-nose-gash-Former CM HD Kumaraswamy