ಭಾರತದ ಸಹಕಾರದೊಂದಿಗೆ ಶ್ರೀಲಂಕಾದಲ್ಲಿ ಚಲನಚಿತ್ರ ಅಕಾಡೆಮಿ.

ಕೊಲೊಂಬೋ,ಮೇ,5,2023(www.justkannada.in): ಭಾರತ ಸರ್ಕಾರದ ಸಹಕಾರದೊಂದಿಗೆ ಶ್ರೀಲಂಕಾದಲ್ಲಿ ಚಲನಚಿತ್ರ ಆಕಾಡೆಮಿಯನ್ನು ಆರಂಭಿಸಲು ಯೋಜಿಸಲಾಗಿದೆ ಎಂದು ಶ್ರೀಲಂಕಾ ವಾರ್ತಾ ಮತ್ತು ಸಾರಿಗೆ ಸಚಿವ ಡಾ. ಬಂದುಲ ಗುಣವರ್ಧನೆ ಅವರು ತಿಳಿಸಿದರು.

ಶ್ರೀಲಂಕಾದ ಕೊಲಂಬೋದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರು ಕನ್ನಡ  ಚಲನಚಿತ್ರ ಉತ್ಸವವನ್ನು ಉದ್ಘಾಟಿಸಿದರು. ಇದೇ ಮೊದಲ ಬಾರಿಗೆ ಭಾರತೀಯ ಚಲನಚಿತ್ರಗಳ ಮೇಲೆ ಬೆಳಕು ಚೆಲ್ಲುವ ಉತ್ಸವ ಹಾಗೂ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಲಂಕಾ ಪ್ರವಾಸೋದ್ಯಮ ಉತ್ತೇಜನ ಮಂಡಳಿ (ಎಸ್ ಎಲ್ ಟಿ ಪಿ ಬಿ), ಏಷಿಯಾ ಮಾಧ್ಯಮ ಮತ್ತು ಸಾಂಸ್ಕೃತಿಕ ಸಂಸ್ಥೆ (ಎ ಎಮ್ ಸಿ ಎ), ಶ್ರೀಲಂಕಾ ಚಲನಚಿತ್ರ ಮಂಡಳಿ (ಎನ್ ಎಫ್ ಸಿ ), ಭಾರತ ರಾಯಭಾರ ಕಚೇರಿ ಹಾಗೂ ವಿವೇಕಾನಂದ ಸಾಂಸ್ಕೃತಿಕ ಸಂಸ್ಥೆ (ಐಸಿಸಿಆರ್) ಈ ಉತ್ಸವವನ್ನು ಹಮ್ಮಿಕೊಂಡಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಬಂದುಲ ಗುಣವರ್ಧನೆ, ಭಾರತದ ಚಲನಚಿತ್ರ ಉದ್ಯಮಿಗಳ ಅಪಾರ ಅನುಭವವನ್ನು ಒಳಗೊಂಡಲ್ಲಿ ಈ ಚಲನಚಿತ್ರ ಅಕಾಡೆಮಿ ಸತ್ವಯುತವಾಗಲಿದೆ. ಶ್ರೀಲಂಕಾದ ಆರ್ಥಿಕ ಅಭಿವೃದ್ದಿಗೆ ಚಲನಚಿತ್ರ ಉದ್ಯಮ ಮಹತ್ವದ ಸೇತುವೆಯಾಗಲಿದೆ ಎಂದು ಅವರು ತಿಳಿಸಿದರು.

ಉತ್ಸವದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಚಲನಚಿತ್ರ ನಿರ್ದೇಶಕನಾಗತಿಹಳ್ಳಿ ಚಂದ್ರಶೇಖರ್ ಅವರು,  ಕನ್ನಡ ಚಲನಚಿತ್ರರಂಗವು ಈಗ ವಿಶ್ವಾವ್ಯಾಪಿ ಜನಪ್ರಿಯತೆಯನ್ನು ಗಳಿಸಿದೆ. ಕನ್ನಡ ಚಲನಚಿತ್ರಗಳು ದೃಶ್ಯ ಮಾಧ್ಯಮದ ಮಹತ್ವವನ್ನು ಹೆಚ್ಚಿಸಿದೆ. ಕನ್ನಡ ಚಲನಚಿತ್ರಗಳ ಗುಣಮಟ್ಟ ಜಾಗತಿಕವಾಗಿ ಪ್ರಶಂಸೆಗೆ ಒಳಪಟ್ಟಿದೆ.  ಚಲನಚಿತ್ರ ನನ್ನ ಪಾಲಿಗೆ ಮನರಂಜನೆಯ ಜೊತೆಗೆ ಸಮಾಜದ ಬಿಕ್ಕಟ್ಟುಗಳನ್ನು ನೋಡುಗರ ಮುಂದಿಡುವ ಮಾಧ್ಯಮ. ನನ್ನ ಚಲನಚಿತ್ರಗಳು ನನ್ನ ಒಳತೋಟಿಗಳ ಜತೆಗೆ ಸಾಮಾಜಿಕ ಅರಿವು ಮೂಡಿಸಲು ಪ್ರಯತ್ನಿಸಿದೆ. ಶ್ರೀಲಂಕಾದ ಪ್ರಕೃತಿ ಸಿರಿ ಭಾರತದ ಚಿತ್ರ ಉದ್ಯಮವನ್ನು ಸೆಳೆಯುವಂತಿದೆ. ಉದ್ಯಮ ಇಲ್ಲಿನ ಚಲನಚಿತ್ರ ತಾಣಗಳನ್ನು ಬಳಸಿಕೊಳ್ಳಬೇಕು ಎಂದರು.

ಶ್ರೀಲಂಕಾದಲ್ಲಿನ ಭಾರತದ ರಾಯಭಾರಿ ಗೋಪಾಲ ಭಾಗ್ಲೆ, ಭಾರತದ ವಿವೇಕಾನಂದ ಸಾಂಸ್ಕೃತಿಕ ಸಂಸ್ಥೆ  ನಿರ್ದೇಶಕರಾದ ಪ್ರೊ ಅಂಕುರನ್ ದತ್ತ, ಶ್ರೀಲಂಕಾ ಚಲನಚಿತ್ರ ಮಂಡಳಿ ಅಧ್ಯಕ್ಷ ದೀಪಲ್ ಚಂದ್ರರತ್ನೆ, ಪ್ರವಾಸೋದ್ಯಮ ಪ್ರಚಾರ ಬ್ಯೂರೋದ ಉಪ ನಿರ್ದೇಶಕ ಚಮಿಂದ ಮುನಿಸಿಂಘೆ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಚಲನಚಿತ್ರ ನಟರುಗಳಾದ ನಿರೂಪ್ ಭಂಡಾರಿ, ಕಾವ್ಯಾ ಶೆಟ್ಟಿ, ಚಲನಚಿತ್ರ ತಂತ್ರಜ್ಞ ಎಸ್ ಕೆ ರಾವ್, ನಿರ್ಮಾಪಕ ಶಂಕರೇಗೌಡ, ಹಿರಿಯ ಪತ್ರಕರ್ತರುಗಳದ ಜಿ ಎನ್ ಮೋಹನ್ ಹಾಗೂ ಹೆಚ್ ಬಿ ಮದನ ಗೌಡ ಅವರು ಮಾತನಾಡಿದರು.

ಚಲನ ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಅಮೆರಿಕಾ ಅಮೆರಿಕಾ, ಇಷ್ಟಕಾಮ್ಯ, ಮಾತಾಡ್ ಮಾತಾಡ್ ಮಲ್ಲಿಗೆ ಹಾಗೂ ಕೊಟ್ರೇಶಿ ಕನಸು ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು.

Key words Sri Lanka –kannada-film utsav-: Film Academy – collaboration – India.