ಮೈಸೂರು,ಮೇ,20,2024 (www.justkannada.in): ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ನೆರವೇರಿದ್ದು ಸಾವಿರಾರು ಭಕ್ತರು ಭಾಗವಹಿಸಿದ್ದರು.
ನಿನ್ನೆ ಬೆಳಿಗ್ಗೆ ಗಣಪತಿ ಹೋಮ ನಂತರ ಸತ್ಯನಾರಾಯಣ ವ್ರತವನ್ನು ಪ್ರಾರಂಭಿಸಲಾಯಿತು. ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ಅವರು ಜ್ಯೋತಿ ಬೆಳಗಿಸಿ ಈ ಸಾಮೂಹಿಕ ಸತ್ಯನಾರಾಯಣ ಪೂಜಾಕಾರ್ಯಕ್ಕೆ ಚಾಲನೆ ನೀಡಿದರು, ಸಂತೋಷ್ ಘನಪಾಟಿ ಮತ್ತು ಅವರ ಶಿಷ್ಯರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ವ್ರತ ನೆರವೇರಿತು.
ಮೈಸೂರು ಸೇರಿದಂತೆ ರಾಜ್ಯ,ಹೊರ ರಾಜ್ಯಗಳಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ದಂಪತಿಗಳು ಸತ್ಯನಾರಾಯಣ ವ್ರತದಲ್ಲಿ ಪಾಲ್ಗೊಂಡು ಪುನೀತರಾದರು. ಅವಧೂತ ದತ್ತಪೀಠದ ವತಿಯಿಂದಲೇ ಉಚಿತವಾಗಿ ಸತ್ಯನಾರಾಯಣ ವ್ರತವನ್ನು ಶಾಸ್ತ್ರೋಕ್ತವಾಗಿ ಏರ್ಪಡಿಸಿದ್ದಲ್ಲದೆ ಈ ವ್ರತಕ್ಕೆ ಬೇಕಾದಂತಹ ಸಕಲ ಪೂಜಾ ಸಾಮಗ್ರಿಗಳು ಮತ್ತು ಪ್ರಸಾದವನ್ನು ಕೂಡಾ ಉಚಿತವಾಗಿ ನೀಡಿದ್ದುದು ವಿಶೇಷವಾಗಿತ್ತು.
ಈ ವೇಳೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 82 ನೇ ಜನ್ಮದಿನೋತ್ಸವ ಮತ್ತು ನಾದಮಂಟಪದ 26 ನೇ ವಾರ್ಷಿಕೋತ್ಸವ ಕೂಡಾ ನಡೆಯಲಿದ್ದು ಇದರ ಪ್ರಯುಕ್ತ ಅವಧೂತ ದತ್ತ ಪೀಠದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ಮೇ.20 ರಿಂದ 28 ರವರೆಗೂ ಆಶ್ರಮದಲ್ಲಿ ಪ್ರತಿದಿನ ಶ್ರೀಚಕ್ರಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Key words: Sri Satyanarayan Vratha, Sri Ganapati Satchidananda Ashram, Mysore