ಮೈಸೂರು,ಏಪ್ರಿಲ್,5,2023(www.justkannada.in): ಶಾದಿ ಮಹಲ್ ನಿರ್ಮಾಣಕ್ಕೆ ನಂಜನಗೂಡಿನ ಶ್ರೀಕಂಠೇಶ್ವಸ್ವಾಮಿ ದೇಗುಲದ ಹುಂಡಿ ಹಣ ಬಳಕೆ ಮಾಡುವುದು ಖಂಡನೀಯ ಕೂಡಲೇ ಈ ನಿರ್ಧಾರ ಕೈಬಿಡಿ ಎಂದು ಸರ್ಕಾರಕ್ಕೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದ್ ಮುತಾಲಿಕ್, ನಂಜನಗೂಡಿನ ಶ್ರೀಕಂಠೇಶ್ವಸ್ವಾಮಿ ದೇಗುಲದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣವನ್ನು ಸ್ಥಳೀಯ ಶಾಸಕರು, ಶಾದಿ ಮಹಲ್ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯ. ಶಾದಿ ಮಹಲ್ ನಿರ್ಮಾಣಕ್ಕೆ ದೇಗುಲದ ಹುಂಡಿ ಹಣ ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಶಾಸಕರ ನಿಲುವು ಸರಿಯಾದ ಕ್ರಮವಲ್ಲ. ಹೀಗಾಗಿ ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದರು.
ಧಾರ್ಮಿಕ ದತ್ತಿ ಇಲಾಖೆಯ ನಿಯಮಕ್ಕೆ ವಿರುದ್ಧವಾಗಿ ದೇಗುಲದ ಹುಂಡಿ ಹಣವನ್ನು ಶಾದಿ ಮಹಲ್ ನಿರ್ಮಾಣಕ್ಕೆ ನೀಡಬಾರದು. ದೇಗುಲದ ಹುಂಡಿ ಹಣವನ್ನು ಹಿಂದೂಗಳ ದೇವಾಲಯಗಳ ಅಭಿವೃದ್ಧಿಗೆ ಮಾತ್ರ ಬಳಸಿಕೊಳ್ಳಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ನಾನು ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇನೆ. ಹಿಂದುತ್ವದ ರಕ್ಷಣೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಲುವಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕಾರ್ಕಳ ಕ್ಷೇತ್ರದಲ್ಲಿ ನನಗೆ ನಿಶ್ಚಿತವಾಗಿಯೂ ಗೆಲುವು ಸಿಗಲಿದೆ. ಶಿಷ್ಟರ ರಕ್ಷಣೆಯಾಗಲಿ, ದುಷ್ಟರಿಗೆ ಶಿಕ್ಷೆಯಾಗಲಿ ಎಂದು ಬೇಡಿಕೊಳ್ಳಲು ಚಾಮುಂಡಿ ಬೆಟ್ಟಕ್ಕೆ ಹೋಗಿ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಆದರೂ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಲಾಗುತ್ತಿದೆ. ಅಕ್ರಮ ಗೋ ಸಾಗಾಟ ತಡೆಗಟ್ಟಲು ಮುಂದಾದ ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ ಐಆರ್ ದಾಖಲಿಸಿರುವುದು ಸರಿಯಾದ ಕ್ರಮವಲ್ಲ. ಈ ವಿಚಾರದಲ್ಲಿ ವಿರೋಧ ಪಕ್ಷದ ನಾಯಕರು ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ಧವರ ಪರ ನಿಂತಿರುವುದು ಸರಿಯಲ್ಲ. ಅಕ್ರಮ ಗೋ ಸಾಗಾಟ ತಡೆಯಲು ಮುಂದಾದವರ ಪರ ನಿಲ್ಲಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
Key words: Srikantheswaswamy temple money- Shadi Mahal construction – Pramod Muthalik