ಮೈಸೂರು,ಅಕ್ಟೋಬರ್,12,2020(www.justkannada.in): ಸಚಿವ ಶ್ರೀರಾಮುಲು ಬಳಿ ಇದ್ದ ಆರೋಗ್ಯ ಖಾತೆಯನ್ನ ತಮಗೆ ಹೆಚ್ಚುವರಿಯಾಗಿ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಇದು ಶ್ರೀರಾಮುಲು ಅವರಿಗೆ ಕಳಂಕ ತರುವ ವಿಚಾರವಲ್ಲ. ಇದು ಆಡಳಿತಾತ್ಮಕ ಪ್ರಕ್ರಿಯೆ ಅಷ್ಟೇ. ಇದರಲ್ಲಿ ಇಲಾಖೆ ನಿರ್ವಹಣೆ ವೈಪಲ್ಯ ಪ್ರಶ್ನೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಯಾವ ಕಳಂಕವು ಶ್ರೀರಾಮುಲು ಮೇಲೆ ಇಲ್ಲ. ಎಲ್ಲರು ಕ್ರೀಯಾಶೀಲವಾಗಿ ಕೆಲಸ ಮಾಡಿದ್ದಾರೆ. ನಾವೆಲ್ಲ ಟಾಸ್ಕ್ ಪೋರ್ಸ್ನಲ್ಲಿ ಇದ್ದೇವು. ಎಲ್ಲರೂ ಪರಿಶ್ರಮ ಹಾಕಿದ್ದಾರೆ. ಇಲ್ಲಿ ವೈಯುಕ್ತಿಕ ಪ್ರತಿಷ್ಠೆ ಇಲ್ಲ. ಆ ರೀತಿ ಭಾವನೆ ಅಂದುಕೊಂಡಿದ್ದರೆ ಅದನ್ನ ಬಿಟ್ಟುಬಿಡಿ ಎಂದು ಸ್ಪಷ್ಟನೆ ನೀಡಿದರು.
ಕೇರಳ ಮಾದರಿಯಲ್ಲಿ ಆರೋಗ್ಯ ಇಲಾಖೆಯನ್ನ ಸುಧಾರಣೆ ಮಾಡಬೇಕಿದೆ…..
ಆರೋಗ್ಯ ಇಲಾಖೆ ಸವಾಲಿನ ಇಲಾಖೆ. ಸಿಎಂ ನನ್ನ ಮೇಲೆ ನಂಬಿಕೆ ಇಟ್ಟು ಹೆಚ್ಚುವರಿ ಇಲಾಖೆ ನೀಡಿದ್ದಾರೆ. ಜನರಿಗೆ ಸೇವೆ ಸಿಗುವಂತೆ ಇಲಾಖೆಯಲ್ಲಿ ಮೈಲಿಗಲ್ಲಾಗಿ ಕೆಲಸ ಮಾಡುತ್ತೇನೆ. ಕೇರಳ ಮಾದರಿಯಲ್ಲಿ ಆರೋಗ್ಯ ಇಲಾಖೆಯನ್ನ ಸುಧಾರಣೆ ಮಾಡಬೇಕಿದೆ. ಹಾಗಾಗಿ ಮಾದರಿ ಸೇವೆ ನೀಡುವ ಮಹತ್ವಾಕಾಂಕ್ಷೆ ಇದೆ. ಆರೋಗ್ಯ ಇಲಾಖೆ ಸುಧಾರಣೆಗೆ ಕೇರಳ ನಮಗೆ ಮಾದರಿ ಆಗಬೇಕು ಎಂದು ತಿಳಿಸಿದರು.
ಸಾಮಾಜಿಕ ಆರೋಗ್ಯ ವ್ಯವಸ್ಥೆ ಸಾಕಷ್ಟು ಸುಧಾರಣೆ ಆಗಬೇಕಿದೆ. ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ರಚನಾತ್ಮಕ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ನನಗೆ ಮಹತ್ವದ ಜವಾಬ್ದಾರಿ ಇದೆ. ಕೋವಿಡ್ ಸಂದರ್ಭದಲ್ಲಿ ಸಚಿವನಾಗಿರುವುದರಿಂದ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ಇನ್ನು ಕೋವಿಡ್ ನಿಯಂತ್ರಣ ಕುರಿತು ಇಂದು ಮೈಸೂರಿನಲ್ಲಿ ಸಭೆ ಮಾಡುತ್ತಿದ್ದೇನೆ. ಮೊದಲು ಕೋವಿಡ್ ಸಾವಿನ ಪ್ರಮಾಣ ಇಳಿಸಬೇಕಿದೆ. ಯಾರಿಗೆ ಕೊರೋನಾ ಸೋಂಕು ತಗಲಿದರೂ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನ 24 ಗಂಟೆ ಒಳಗೆ ಪತ್ತೆ ಹಚ್ಚುವ ಕೆಲಸ ಮಾಡಬೇಕು. ಆಗಾದಾಗ ನಾವು ಅಂದುಕೊಂಡಂತೆ ಸಾವಿನ ಪ್ರಮಾಣ ಕಡಿಮೆ ಮಾಡಬೇಕು ಎಂದು ಸಚಿವ ಸುಧಾಕರ್ ತಿಳಿಸಿದರು.
ಆರೋಗ್ಯ ಹಾಗೂ ವೈದ್ಯಕೀಯ ಇಲಾಖೆ ಎರಡು ಒಂದೇ ಇರಬೇಕು…
ಆರೋಗ್ಯ ಹಾಗೂ ವೈದ್ಯಕೀಯ ಇಲಾಖೆ, ತಾಂತ್ರಿಕವಾಗಿ 2 ಇಲಾಖೆ ಒಂದೇ ಇರಬೇಕು. ದೇಶದ ಹಲವು ಕಡೆ ಇದೇ ರೀತಿ ಇದೆ. ಈ ಹಿಂದೆ ಇದು ಬೇರ್ಪಡಿಸಲಾಗಿತ್ತು. ಆದರೆ ಆಡಳಿತಾತ್ಮಕವಾಗಿ ಇದು ಸರಿಯಲ್ಲ. ಯಾಕಂದರೆ ಅದನ್ನು ನಿರ್ವಹಿಸಲು ಕಷ್ಟವಾಗುತಿತ್ತು. ಸ್ಥಳೀಯವಾಗಿ ಒಡಂಬಡಿಕೆ ಪರಿಣಾಮಕಾರಿಯಾಗಿ ಆಗುತ್ತಿರಲಿಲ್ಲ. ಇದನ್ನು ಅರಿತು ಸಿಎಂ ಈ ನಿರ್ಧಾರ ಮಾಡಿದ್ದಾರೆ. ಇದರಲ್ಲಿ ಭಿನ್ನಮತದ ಪ್ರಶ್ನೆಯೇ ಇಲ್ಲ. ಶ್ರೀರಾಮುಲು ಜೊತೆ ಮಾತನಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಅವರು ಮನವಿ ಮಾಡಿದ್ದರು. ಈಗ ಅದನ್ನು ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಯಾರಿಗೂ ಇದರಿಂದ ಬೇಸರವಿಲ್ಲ ಎಂದು ಸುಧಾಕರ್ ಸ್ಪಷ್ಟನೆ ನೀಡಿದರು.
ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಇಂದಿನ ಸಭೆಯಲ್ಲಿ ಸಿಬ್ಬಂದಿ ಕೊರತೆ ಸೇರಿ ಹಲವು ವಿಚಾರ ಚರ್ಚೆ ಮಾಡುತ್ತೇವೆ. ಸರ್ಕಾರಿ ಆಸ್ಪತ್ರೆಯಲ್ಲಿ 600-800 ಬೆಡ್ ವ್ಯವಸ್ಥೆ ಮಾಡಬಹುದಾಗಿದೆ. ಅದನ್ನು ಸಹ ಇಂದಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಕೊರೋನಾ ನಿಯಂತ್ರಣಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಸರಾ ನಾಡಹಬ್ಬ ಸರಳವಾಗಿ ಮಾಡಬೇಕು. ದಸರಾದಿಂದ ಕೋವಿಡ್ ಹೆಚ್ಚಾಗಬಾರದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಅಂತ ಸಲಹೆ ನೀಡಿದ್ದಾರೆ. ಅದಕ್ಕಾಗಿ ಸಭೆ ನಡೆಸುತ್ತಿದ್ದೇವೆ. ಎಲ್ಲರ ಜೊತೆ ಚರ್ಚಿಸಿ ತೀರ್ಮಾನ ಮಾಡ್ತಿವಿ ಎಂದರು.
key words: Sriramulu- health department-Improvement -Kerala Model-Minister -Dr K, Sudhakar.