ಮಂಡ್ಯ,ಜೂನ್,4,2022(www.justkannada.in): ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಸಂಬಂಧ ಹಿಂದೂ ಪರ ಸಂಘಟನೆಗಳು ಇಂದು ಶ್ರೀರಂಗಪಟ್ಟಣ ಚಲೋ ನಡೆಸುತ್ತಿದ್ದು ಈ ಹಿನ್ನೆಲೆಯಲ್ಲಿ ಜಾಮಿಯಾ ಮಸೀದಿ ಸುತ್ತಾಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಈ ಬಾರಿಯ ಹನುಮ ಜಯಂತಿಗೆ ಜಿಲ್ಲೆಯ ಶ್ರೀರಂಗಟ್ಟಣದಲ್ಲಿರುವ ಜಾಮಿಯ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಹಿಂದು ಪರ ಸಂಘಟನೆಗಳು ಮನವಿ ಮಾಡಿಕೊಂಡಿದ್ದರು. ಹಾಗಾಗಿ ಜಾಮಿಯ ಮಸೀದಿಯಲ್ಲಿ ವಾಸಿಸುತ್ತಿದ್ದವರನ್ನು ಖಾಲಿ ಮಾಡಿಸುವಂತೆ ಭಜರಂಗದಳದ ಸದಸ್ಯರು ಮನವಿ ಮಾಡಿದ್ದರು. ಆದರೆ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆ, ಇಂದು ಶ್ರೀರಂಗಪಟ್ಟಣ ಚಲೋ ಚಾಲನೆಗೆ ಸಿದ್ಧತೆ ನಡೆಯುತ್ತಿದೆ.
ಹೀಗಾಗಿ ಇಂದು ಶ್ರೀರಂಗಪಟ್ಟಣ ಚಲೋ ನಡೆಸಲು ಹಿಂದೂಪರ ಸಂಘಟನೆಗಳು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಮಂಡ್ಯ ಎಸ್ಪಿ ಯತೀಶ್ ಭೇಟಿ ನೀಡಿ ಭದ್ರತೆಯನ್ನ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಮಸೀದಿ ಬಳಿ ಪ್ರತಿಭಟನೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಆದರೆ ಪ್ರತಿಭಟನೆಗೆ ಅವಕಾಶ ನಿರಾಕರಿಸಿ ಡಿಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಹೀಗಾಗಿ ನಿಷೇಧಾಜ್ಞೆ ಉಲ್ಲಂಘಿಸಿ ಮಸೀದಿ ಪ್ರವೇಶಿಸಲು ಮುಂದಾದರೇ ಬಂಧಿಸಲಾಗುತ್ತದೆ. ಮಸೀದಿ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನ ಬಂದ್ ಮಾಡಲಾಗಿದೆ ಎಂದಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿ ಸುತ್ತ ಜಿಲ್ಲಾಡಳಿತ 5 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದೆ. ನಾಲ್ವರು ಡಿವೈಎಸ್, 11 ಸಿಪಿಐ, 34 ಪಿಎಸ್ಐ, 400 ಕಾನ್ಸ್ಟೇಬಲ್, 2 ಕೆಎಸ್ಆರ್ಪಿ ತುಕಡಿ, 4 ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಗಳನ್ನ ಕೈಗೊಳ್ಳಲಾಗಿದೆ
Key words: Srirangapatna chalo -Hindu organizations-SP -visit – Jamia Mosque