ಮಾ.21ರಿಂದ SSLC ಪರೀಕ್ಷೆ: ವ್ಯವಸ್ಥಿತ, ನ್ಯಾಯಸಮ್ಮತವಾಗಿ ನಡೆಸಲು ಕ್ರಮವಹಿಸಿ –ಮೈಸೂರು ಜಿಲ್ಲಾಧಿಕಾರಿ ಸೂಚನೆ

ಮೈಸೂರು ಫೆಬ್ರವರಿ,28,2025 (www.justkannada.in):  ಮಾರ್ಚ್ 21 ರಿಂದ ಆರಂಭವಾಗುವ ಎಸ್ ಎಸ್ ಎಲ್ ಸಿ  ಪರೀಕ್ಷೆಗಳನ್ನು ವ್ಯವಸ್ಥಿತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ ಅವರು  ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳ ಸಂಬಂಧ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ  ಮಾತನಾಡಿದರು.

ಎಲ್ಲಾ ಪರೀಕ್ಷಾ ಕೇಂದ್ರಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಯಾವುದೇ ರೀತಿಯಿಂದ ಲೋಪದೋಷ ಆಗದಂತೆ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ವ್ಯಾಪ್ತಿಯ 133 ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದ್ದು, ಪರೀಕ್ಷಾ ಕೇಂದ್ರದ 200 ಮೀ. ಸುತ್ತ ಸಾರ್ವಜನಿಕರು ಮತ್ತು ಪಾಲಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಜೆರಾಕ್ಸ್‌ ಅಂಗಡಿಗಳನ್ನು ಕೂಡ ತೆರೆಯುವಂತಿಲ್ಲ ಎಂದರು.

ಮಾರ್ಚ್ 21 ರಿಂದ ಏಪ್ರಿಲ್ 04 ಪರೀಕ್ಷೆಗಳು ನಡೆಯಲಿವೆ. ಈ ಬಾರಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಯಲಿದ್ದು 133 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲ್ಲಿದೆ. ಜಿಲ್ಲೆಯಲ್ಲಿ 19,114 ಬಾಲಕರು ಹಾಗೂ 18,790 ಬಾಲಕಿಯರು ಸೇರಿದಂತೆ ಒಟ್ಟು 37,904 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ಸರ್ಕಾರ ನೀಡುವ ಎಲ್ಲಾ ಆದೇಶಗಳನ್ನು ಪರಿಪಾಲನೆ ಮಾಡುವ ಮೂಲಕ ಪರೀಕ್ಷೆ ಸುವ್ಯವಸ್ಥೆ ನಡೆಯುವಂತೆ ನೋಡಿಕೊಳ್ಳಬೇಕು ಹಾಗೂ  ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಪರೀಕ್ಷಾ ಕೇಂದ್ರಗಳು

ಜಿಲ್ಲೆಯ ಹೆಚ್.ಡಿ.ಕೋಟೆ 12, ಹುಣಸೂರು 15, ಕೆ.ಆರ್.ನಗರ 11,  ಮೈಸೂರು ಉತ್ತರ 19, ಮೈಸೂರು ದಕ್ಷಿಣ 15, ಮೈಸೂರು ಗ್ರಾಮಾಂತರ 18, ನಂಜನಗೂಡು 1, ಪಿರಿಯಾಪಟ್ಟಣ 12, ಟಿ.ನರಸೀಪುರ 13 ಸೇರಿದಂತೆ  ಜಿಲ್ಲೆಯಲ್ಲಿ ಒಟ್ಟು 133 ಪರೀಕ್ಷಾ ಕೇಂದ್ರಗಳಿವೆ.

ಪರೀಕ್ಷೆ ಕೇಂದ್ರಕ್ಕೆ ನೇಮಕಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿವರ

ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ವಿವರ: ಮುಖ್ಯ ಅಧೀಕ್ಷಕರು 133, ಉಪಮುಖ್ಯ ಅಧೀಕ್ಷಕರು 24, ಮಾರ್ಗಾಧಿಕಾರಿಗಳು 54,  ಸ್ಥಾನಿಕ ಜಾಗೃತ ದಳದ ಕಾರ್ಯಕ್ಕೆ ಅಧಿಕಾರಿಗಳು 133, ಮೊಬೈಲ್ ಫೋನ್ ಸ್ವಾಧಿನಾಧಿಕಾರಿಗಳು 133, ತಾಲ್ಲೂಕು ಹಂತದ ಜಾಗೃತಿ ದಳ 03 ಹಾಗೂ ಜಿಲ್ಲಾ ಹಂತದ ಜಾಗೃತ ದಳ 03  ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ತೆಗೆದುಕೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳು

ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಸೂಕ್ತ ಸೂಚನಾ ಫಲಕಗಳ ವ್ಯವಸ್ಥೆ ಮಾಡಲಾಗಿದೆ, ಅಭ್ಯರ್ಥಿಗಳಿಗೆ ಅಗತ್ಯ ಅಸನದ ವ್ಯವಸ್ಥೆ ಮಾಡಲಾಗಿದ್ದು, ಕುಡಿಯುವ ನೀರು, ಶೌಚಾಲಯ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಮೊಬೈಲ್ ಸ್ವಾಧೀನಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಹಾಗೂ ಪ್ರಶ್ನಾಪತ್ರಿಕೆ ಪಾಲಕರನ್ನು ಆಯೋಜಿಸಲಾಗಿದೆ.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಹುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು, ಡಿಸಿಪಿ ಮುತ್ತು ರಾಜ್, ಡಿಡಿಪಿಐ ಜವರೇಗೌಡ ಹಾಗೂ ಡಿಡಿ ಪಿಯು ಮರಿಸ್ವಾಮಿ ಹಾಗೂ ಶಾಲೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Key words: SSLC exam, March 21, Mysore, DC