ಎಸ್‌ ಎಸ್‌ ಎಲ್‌ ಸಿ ಬಾಲಕಿ ಹತ್ಯೆ ಪ್ರಕರಣ; ವಿಶೇಷ ನ್ಯಾಯಾಲಯ ತೆರೆಯಲು ಕ್ರಮ- ಡಾ. ಜಿ.ಪರಮೇಶ್ವರ್

ಮಡಿಕೇರಿ, ಮೇ,17,2024 (www.justkannada.in):  ಎಸ್‌ಎಸ್‌ಎಲ್‌ಸಿ ಬಾಲಕಿಯನ್ನು ಹತ್ಯೆ ಮಾಡಿರುವ ಕೃತ್ಯ ಸಹಿಸಲಾಗುವುದಿಲ್ಲ. ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ  ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.

ಸೋಮವಾರಪೇಟೆಯ ಸೂರ್ಲಬ್ಬಿ ಬಳಿಯ ಕುಂಬಾರಗಡಿಗೆ ಗ್ರಾಮದಲ್ಲಿ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿನಿ ಹತ್ಯೆಯಾದ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ, ಮಾಧ್ಯಮದವರೊಂದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿದರು.

ಕೊಲೆಯಾದ ವಿದ್ಯಾರ್ಥಿನಿ ಮೀನಾ 16 ವರ್ಷ.‌ ಆರೋಪಿ ಪ್ರಕಾಶ್ ಎಂಬುವನಿಗೆ 32 ವರ್ಷ. ಬಾಲಕಿಯ ತಂದೆ-ತಾಯಿಗೆ ಒತ್ತಾಯ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಗೊತ್ತಾದ ಕೂಡಲೇ ತಿಳಿಹೇಳಿ ತಡೆದಿದ್ದರು. ವಿದ್ಯಾರ್ಥಿನಿಗೆ 18 ವರ್ಷ ತುಂಬಿದ ನಂತರ ಮದುವೆಯಾಗುವಂತೆ ಬುದ್ಧಿಹೇಳಿದ್ದಾರೆ. ಇದಾದ ಬಳಿಕ ಬಾಲಕಿಯ ಮನೆ ಬಳಿ ಹೋಗಿ ಆಕೆಯ ತಂದೆ-ತಾಯಿ ಜೊತೆ ಜಗಳ ತೆಗೆದಿದ್ದಾನೆ.  ತನ್ನ ಜೊತೆ ಮದುವೆ ಮಾಡಿಕೊಡುವಂತೆ ಒತ್ತಾಯಿಸಿ, ಬಾಲಕಿಯ ತಾಯಿಗೆ ಹೊಡೆದು, ಬಾಲಕಿಯನ್ನು ಎಳೆದೊಯ್ದು ಕೃತ್ಯ ಎಸಗಿದ್ದಾನೆ ಎಂಬುದು ಈವರೆಗಿನ ತನಿಖೆಯಲ್ಲಿ ಗೊತ್ತಾಗಿದೆ ಎಂದರು‌.

ಇದನ್ನು ನಿಜಕ್ಕು ಮನುಷ್ಯರು ಒಪ್ಪಿಕೊಳ್ಳುವ ಕೃತ್ಯವಲ್ಲ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ಕಾನೂನಿನ ಪ್ರಕಾರ ಶಿಕ್ಷೆ ಆಗಬೇಕೆನ್ನುವ ನಿಟ್ಟಿನಲ್ಲಿ ಪೊಲೀಸರು ಕೆಲಸ‌ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಾಲಕಿಯನ್ನು ಮತ್ತೆ ವಾಪಸ್ ಕರೆದುಕೊಂಡು ಬರಲು ಆಗುವುದಿಲ್ಲ.‌ ಆದರೆ, ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಅಭಿಯೋಜಕರನ್ನು ನೇಮಿಸಲಾಗುವುದು. ಸ್ಪೆಷಲ್ ಕೋರ್ಟ್ ತೆರೆಯಲಾಗುವುದು ಎಂದು ತಿಳಿಸಿದರು.

ಕುಟುಂಬವನ್ನು ನೋಡಿದರೆ ಬಹಳ ನೋವಾಗುತ್ತದೆ. ಬಡತನದ ಕುಟುಂಬ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪರಿಹಾರದ ಬಗ್ಗೆ ಮಾತನಾಡಲು ಆಗುವುದಿಲ್ಲ. ನೀತಿ ಸಂಹಿತೆ ಮುಗಿದ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಪರಮೇಶ್ವರ್ ಹೇಳಿದರು.

ತನಿಖೆಯ ವರದಿ ಆಧರಿಸಿ ಅಧಿಕಾರಿಗಳ ತಪ್ಪಿದ್ದರೆ ಕ್ರಮ‌ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳಲ್ಲಿ ನಿರ್ಲಕ್ಷ್ಯ ಮಾಡಲಾಗುವುದಿಲ್ಲ. ತನಿಖೆ ಮುಗಿಯುವವರೆಗೂ ಯಾವುದೇ ಹೇಳಿಕೆ ಕೊಡಲು ಆಗುವುದಿಲ್ಲ. ಇದರಿಂದ ತನಿಖೆಗೆ ಅಡ್ಡಿಯಾಗುತ್ತದೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಶೆಟ್ಟರ್‌ನಿಂದ ಸರ್ಟಿಫಿಕೇಟ್ ಬೇಕಿಲ್ಲ

ಜಗದೀಶ್ ಶೆಟ್ಟರ್  ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ಶೆಟ್ಟರ್ ಅವರ ಅಧಿಕಾರವಧಿಯಲ್ಲಿನ ಅಂಕಿ-ಅಂಶಗಳನ್ನು ತೆಗೆಸಿ ತೋರಿಸಿದರೆ ಅವರಿಗೆ ಗೊತ್ತಾಗುತ್ತದೆ. ಅವರ ಕಾಲದಲ್ಲಿ ಎಷ್ಟು ಕೊಲೆ, ರೇಪ್, ಅಪರಾಧ ಚಟುವಟಿಕೆಗಳಿತ್ತು ಎಂಬುದು ಗೊತ್ತಾಗುತ್ತದೆ. ಆಗ ಅವರಿಗೆ ಅರ್ಥವಾಗುತ್ತದೆ. ಜಗದೀಶ್ ಶೆಟ್ಟರ್ ಅವರಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಿಲ್ಲ. ಜನಗಳಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕು. ಜನಗಳೇ ನಮಗೆ ಸರ್ಟಿಫಿಕೇಟ್ ಕೊಡುತ್ತಾರೆ, ಜಗದೀಶ್ ಶೆಟ್ಟರ್ ಅಲ್ಲ ಎಂದು ಹೇಳಿದರು.

ಈ ವೇಳೆ ಶಾಸಕ ಡಾ.ಮಂಥರ್ ಗೌಡ, ಐಜಿಪಿ ಅಮಿತ್ ಸಿಂಗ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇದ್ದರು.

Key words: SSLC, girl, murder case, special court