ಮೈಸೂರು, ಫೆ.07, 2023 : ( justkannada.in ) SSLC ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ಒಂದು ‘ ಪೂರ್ವ ಸಿದ್ಧತಾ ಪರೀಕ್ಷೆ’ ನಡೆಸಲು ಸಾಧ್ಯವಾಗದಷ್ಟು ಅಸಮರ್ಥವಾಯಿತೇ ಹೊಸದಾಗಿ ರಚನೆಯಾಗಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ..?
ಈ ಮೊದಲು ಎಸ್.ಎಸ್.ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ರಾಜ್ಯಮಟ್ಟದಲ್ಲಿ ನಡೆಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಲಾಗುತ್ತಿತ್ತು. ಇದು ಪರೀಕ್ಷಾ ಫಲಿತಾಂಶದ ಮೇಲೆ ಸಾಕಷ್ಟು ಪ್ರಯೋಜನ ಸಹ ಬೀರುತ್ತಿತ್ತು.
ಆದರೆ ಈಗ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನೆಪ ಮಾತ್ರಕ್ಕೆ ನಡೆಸಲಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಕಾರಣ, ರಾಜ್ಯಮಟ್ಟದಲ್ಲಿ ವೇಳಾಪಟ್ಟಿ ಪ್ರಕಟಿಸಿ, ಪ್ರಶ್ನೆ ಪತ್ರಿಕೆ ತಯಾರಿಸಿ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ತಾಲ್ಲೂಕು ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಕಾರಿಗೆ (ಬಿಒಒ) ವಹಿಸಿ ಆದೇಶ ಹೊರಡಿಸಿರುವುದು.
ಪರೀಕ್ಷೆ ನಡೆಸುವ ಕಾರ್ಯವನ್ನು ತಾಲ್ಲೂಕು ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಕಾರಿಗಳಿಗೇ ವಹಿಸಲಿ, ಕನಿಷ್ಠ ಪಕ್ಷ ರಾಜ್ಯ ಮಟ್ಟದ ಒಂದು ಪ್ರಶ್ನೆ ಪತ್ರಿಕೆಯನ್ನಾದರೂ ಸಿದ್ಧಪಡಿಸಿ ಅದನ್ನೇ BEO ಲಾಗಿನ್ ಗೆ ಕಳುಹಿಸಿ ಗೌಪ್ಯತೆ ಕಾಪಾಡುವ ಮೂಲಕ ಪರೀಕ್ಷಾ ಪಾವಿತ್ರತೆಯನ್ನು ಕಾಪಾಡಬಾರದೇ ಎಂದು ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ.
ಪರೀಕ್ಷಾ ಮಂಡಳಿಯವರಿಗೆ, ಒಂದು ರಾಜ್ಯ ಮಟ್ಟದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ನಡೆಸುವುದಕ್ಕೆ ಇರುವ ಸಮಸ್ಯೆ ಏನು? ಎಲ್ಲಾ ಕಾರ್ಯಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಹಾಕಿ, ಕೈ ತೊಳೆದುಕೊಳ್ಳುವ ಪರೀಕ್ಷಾ ಮಂಡಳಿ ಈ ಕಾರ್ಯ ಎಷ್ಟು ಸಮಂಜಸ ಎಂಬುದು ಶಿಕ್ಷಕರ ಪ್ರಶ್ನೆ.
ಇದು ರಾಜ್ಯದ ಮಕ್ಕಳಿಗೆ ಇಲಾಖೆ ಮಾಡುತ್ತಿರುವ ಅನ್ಯಾಯ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ ಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ನಡೆಸಿದರೆ ಅದು ಹೇಗೆ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ ಆಗುತ್ತದೆ?. ಪ್ರತಿ ತಾಲೂಕಿನಲ್ಲಿ ಒಂದೊಂದು ಬಗೆಯ ಪ್ರಶ್ನೆಗಳನ್ನು ಕೇಳಿದರೆ ಮಕ್ಕಳಿಗೆ ಅದು ರಾಜ್ಯ ಮಟ್ಟದ ಪ್ರಶ್ನೆ ಪತ್ರಿಕೆ ಹೇಗಾಗುತ್ತದೆ.
ಈಗಲಾದರೂ ಶಿಕ್ಷಣ ಇಲಾಖೆ ನಿರ್ದೇಶಕರು, ಎಸಗಿರುವ ಪ್ರಮಾವನ್ನು ಸರಿಪಡಿಸಿಕೊಂಡು, ರಾಜ್ಯ ಮಟ್ಟದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ನಡೆಸಲಿ ಎಂಬುದು ಆಗ್ರಹ.
Key words: SSLC-Preliminary-Exam- State level – names- local exam