ಬೆಂಗಳೂರು,ಜೂನ್,2,2021(www.justkannada.in): ಕೇಂದ್ರ ಸರ್ಕಾರ ಸಿಬಿಎಸ್ಸಿ ಮತ್ತು ಐಸಿಎಸ್ ಸಿ 12ನೇ ತರಗತಿಯ ಮಕ್ಕಳ ಪರೀಕ್ಷೆಯನ್ನು ರದ್ದುಗೊಳಿಸಿದೆ. ಇದಕ್ಕೆ ಕೊಟ್ಟಿರುವ ಕಾರಣ ಕೋವಿಡ್-19 ಸೋಂಕು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಎಂದು ಪ್ರಧಾನಿ ಮೋದಿಯವರೇ ತಿಳಿಸಿದ್ದಾರೆ. ಸಿಬಿಎಸ್ಸಿ ಮತ್ತು ಐಸಿಎಸ್ಸಿ ವ್ಯಾಸಂಗ ಮಾಡುತ್ತಿರುವ ಬಹತೇಕ ಮಕ್ಕಳು ನಗರಪ್ರದೇಶದವರು, ಅಧಿಕಾರಿಗಳ, ರಾಜಕಾರಿಣಿಗಳ ಹಾಗೂ ಶ್ರೀಮಂತರ ಮಕ್ಕಳೇ ಆಗಿರುತ್ತಾರೆ. ಮಧ್ಯಮ ವರ್ಗದವರ ಮಕ್ಕಳೂ ಸಹ ಕಡಿಮೆಯೇ. ಇವರೆಲ್ಲಾ ಸ್ಮಾರ್ಟ್ ಫೋನ್, ಟ್ಯಾಬ್ ಗಳನ್ನು ಹೊಂದಿರುವವರೇ ಮತ್ತು ಇವರೆಲ್ಲಾ ಲಾಕ್ಡೌನ್ ಅವಧಿಯಲ್ಲಿ ಆನ್ಲೈನ್ ಶಿಕ್ಷಣವನ್ನೂ ಪಡೆದಿರುತ್ತಾರೆ ಇಂತಹವರಿಗೇ ಸುರಕ್ಷತೆ ದೃಷ್ಠಿಯಿಂದ ಕೇಂದ್ರ ಸರ್ಕಾರ ಪರೀಕ್ಷೆ ರದ್ದುಗೊಳಿಸಿದೆ.
ಆದರೆ ರಾಜ್ಯ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುವ ಬಹತೇಕ ಮಕ್ಕಳು ಬಡವರು, ಕೂಲಿಕಾರ್ಮಿಕರು ಮತ್ತು ಬಡರೈತರ ಮಕ್ಕಳೇ ಆಗಿರುತ್ತಾರೆ. ಇವರಲ್ಲಿ ಎಷ್ಟು ಜನಕ್ಕೆ ಆನ್ಲೈನ್ ಶಿಕ್ಷಣ ದೊರೆತಿದೆ? ಸ್ಮಾರ್ಟ್ ಫೋನ್ ತೆಗೆದುಕೊಳ್ಳುವ ಶಕ್ತಿ ಎಷ್ಟು ಜನಕ್ಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್ ಅಷ್ಟೊಂದು ಚೆನ್ನಾಗಿದೆಯೇ ಇವರಿಗೆಲ್ಲಾ ಆನ್ಲೈನ್ ಶಿಕ್ಷಣ ಎಷ್ಟರಮಟ್ಟಿಗೆ ದೊರೆತಿದೆ ಎಂಬುದನ್ನು ಊಹಿಸಬಹುದು.
ಇನ್ನು ಭೌತಿಕ ತರಗತಿಗಳ ನಡೆದಿರುವುದು ಮೂರೇ ತಿಂಗಳು ಇದರ ಜೊತೆಗೆ ಹಾಜರಾತಿಯೂ ಕಡ್ಡಾಯವಿರಲಿಲ್ಲ ಅಂತಹದರಲ್ಲಿ ಇವರಿಗೆ ಎಷ್ಟರಮಟ್ಟಿಗೆ ಪಾಠಪ್ರವಚನಗಳು ನಡೆದಿರಬಹುದು? ಗ್ರಾಮೀಣ ಬಡ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ಸರ್ಕಾರಕ್ಕೆ ಬೇಡವೇ? ಬರೀ ನಗರವಾಸಿಗಳ ಶ್ರೀಮಂತರ ಮಕ್ಕಳ ಆರೋಗ್ಯ ಮಾತ್ರ ಮುಖ್ಯವೇ? ಎಂಬುದು ಗ್ರಾಮೀಣ ಪ್ರದೇಶದ ಪೋಷಕರ ಮತ್ತು ವಿದ್ಯಾರ್ಥಿಗಳ ಅಳಲು. ಈ ಎಲ್ಲಾ ಗೊಂದಲಕ್ಕೆ ತೆರೆ ಎಳೆಯಲು ಸರ್ಕಾರಕ್ಕೆ ಇನ್ನು ಎಷ್ಟು ಕಾಲ ಬೇಕು? ಸರ್ಕಾರ ಈ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನ ತೆಗೆದುಕೊಂಡು ಪೋಷಕರ, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ತಲ್ಲಣಗಳಿಗೆ ಪೂರ್ಣವಿರಾಮ ನೀಡುವುದೇಕಾದು ನೋಡಬೇಕಿದೆ.
Key words: SSLC-PUC exam- – health –poor- farmer- labourers- childrens