ಬೆಂಗಳೂರು, ಆಗಸ್ಟ್,5, 2021(www.justkannada.in): ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇನ್ನೂ ಬರಬೇಕಿದೆ. ಆದರೆ ರಾಜ್ಯದಲ್ಲಿ ಹಲವು ಪಿಯು ಕಾಲೇಜುಗಳು ಈಗಾಗಲೇ ಪ್ರವೇಶಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಪಾಠಗಳನ್ನೂ ಸಹ ಆರಂಭಿಸಿಬಿಟ್ಟಿವೆ. ಇದು ಸರ್ಕಾರದ ನಿಯಮ ಉಲ್ಲಂಘನೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರವೇಶಾತಿ ಪ್ರಕ್ರಿಯೆ ಫಲಿತಾಂಶ ಘೋಷಣೆ ಆಗುವವರೆಗೂ ಆರಂಭಿಸುವMತಿಲ್ಲ ಎಂದು ಆದೇಶಿಸಿತ್ತು. ಆದರೂ ಸಹ ಕಾಲೇಜುಗಳು ವಾರ್ಷಿಕ ಶುಲ್ಕದ ‘ಮೊದಲ ಕಂತನ್ನು’ ಸಂಗ್ರಹಿಸಿ, ಉಳಿದ ಶುಲ್ಕವನ್ನು ಫಲಿತಾಂಶ ಬಂದ ನಂತರ ಸಂಗ್ರಹಿಸುವುದಾಗಿ ತಿಳಿಸಿವೆ.
ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಚರಿತ್ರೆಯಲ್ಲೇ ಮೊದಲಾಗಿದೆ. ಮೊದಲ ಬಾರಿಗೆ ಕೇವಲ ಎರಡು ದಿನಗಳ ಪರೀಕ್ಷೆಯನ್ನು ನಡೆಸಲಾಯಿತು. ಚರಿತ್ರೆಯಲ್ಲೇ ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿಸಲಾಗುವುದಾಗಿ ಘೋಷಿಸಲಾಯಿತು. ಕೋವಿಡ್ ಮಹಾಮಾರಿಯಿಂದಾಗಿ ಆರು ದಿನಗಳ ಪರೀಕ್ಷೆಯನ್ನು ಕೇವಲ ಎರಡು ದಿನಗಳಿಗೆ ಇಳಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು, ಹಿಂದಿನ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿಸಲಾಗುವುದಾಗಿ ಘೋಷಿಸಿದರು. ಹಿಂದಿನ ವರ್ಷಗಳಂತಲ್ಲದೆ, ಕಾಲೇಜುಗಳು ಪ್ರವೇಶಾತಿಯನ್ನು ಆರಂಭಿಸಲು ಎಸ್ ಎಸ್ ಎಲ್ ಸಿ ಫಲಿತಾಂಶಗಳಿಗೆ ಕಾಯಬೇಕಾಗಲಿಲ್ಲ. ಏಕೆಂದರೆ ಎಸ್.ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ ಪ್ರತಿಯೊಬ್ಬ ವಿದ್ಯಾರ್ಥಿಯೂ ಖಂಡಿತವಾಗಿಯೂ ಉತ್ತೀರ್ಣನಾಗುತ್ತಾನೆ ಎಂದು ಖಾತ್ರಿ ಇತ್ತು. ಹಾಗಾಗಿ, ಅಧಿಕೃತ ಫಲಿತಾಂಶಕ್ಕಾಗಿ ಕಾಯದೆ ಕಾಲೇಜುಗಳು ಪ್ರವೇಶಾತಿಯನ್ನು ಆರಂಭಿಸಿವೆ.
ವಿದ್ಯಾರ್ಥಿನಿ ದೇವಿಕಾ ಕೆ. ಅವರು ಹೇಳುವಂತೆ, “1ನೇ ಪಿಯುಸಿ ತರಗತಿಗಳು ಆರಂಭವಾಗಿ ಒಂದು ವಾರವೇ ಆಯಿತು. ನಾನು ಕಾಲೇಜಿಗೆ ಮೊದಲನೇ ಕಂತಾಗಿ ರೂ.1 ಲಕ್ಷ ಪಾವತಿಸಿದ್ದೇನೆ. ಮತ್ತೊಂದು ಕಂತಿನ ಶುಲ್ಕದ ಮೊತ್ತವೂ ಘೋಷಣೆಯಾಗಿದ್ದು, ಅದನ್ನೂ ಪಾವತಿಸಬೇಕಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ, ಈ ಕಾಲೇಜಿನವರು ನಿಗದಿಪಡಿಸಿರುವ ಅಂಕಗಳಿಗಿಂತ ಕಡಿಮೆ ಬಂದರೆ ಹೆಚ್ಚಿನ ಶುಲ್ಕ ಪಾವತಿಸಬೇಕು, ಒಂದು ಪಕ್ಷ ಹೆಚ್ಚು ಅಂಕಗಳು ಬಂದರೆ, ಶುಲ್ಕದಲ್ಲಿ ರಿಯಾಯಿತಿ ನೀಡುವುದಾಗಿ ನನಗೆ ತಿಳಿಸಿದ್ದಾರೆ,” ಎಂದರು.
1ನೇ ಪಿಯುಸಿಗೆ ಪ್ರವೇಶ ಪಡೆದಿರುವ ಮತ್ತೋರ್ವ ವಿದ್ಯಾರ್ಥಿ ಮಂಜುನಾಥ್ ಆರ್. ಅವರು ಹೇಳುವಂತೆ, “ಪಿಯುಸಿಗೆ ಪ್ರವೇಶಾತಿ ಪಡೆಯದೇ ಬೇರೆ ಆಯ್ಕೆ ಇರಲಿಲ್ಲ. ಈ ವರ್ಷ ಎಸ್ ಎಸ್ ಎಲ್ ಸಿಯಲ್ಲಿ ಎಲ್ಲಾ ವಿದ್ಯಾರ್ಥಿಗಳೂ ತಪ್ಪದೇ ಉತ್ತೀರ್ಣರಾಗುವ ಕಾರಣದಿಂದಾಗಿ ಪಿಯುಸಿ ಪ್ರವೇಶಾತಿಗೆ ಹೆಚ್ಚು ಬೇಡಿಕೆ ಇರುತ್ತದೆ. ಹಾಗಾಗಿ, ನಾವು ಹೆಚ್ಚಿನ ಶುಲ್ಕ ಕೊಡುವುದು ಅನಿವಾರ್ಯವಾಯಿತು. ಇಲ್ಲವಾದರೆ ನಮಗೆ ಸೀಟು ದೊರಕುತ್ತಿರಲಿಲ್ಲ.”
ಖಾಸಗಿ ಕಾಲೇಜಿನ ಓರ್ವ ಸಿಬ್ಬಂದಿ ತಿಳಿಸಿದಂತೆ, “ಪ್ರತಿ ವರ್ಷ ನಾವು 1ನೇ ಪಿಯುಸಿ ತರಗತಿಯನ್ನು ಜೂನ್-ಜುಲೈ ತಿಂಗಳಲ್ಲಿ ಆರಂಭಿಸುತ್ತಿದ್ದೆವು. ಆದರೆ ಈ ವರ್ಷ ಆಗಸ್ಟ್ ತಿಂಗಳಾದರೂ ಸಹ ಇನ್ನೂ ಅನೇಕ ಕಾಲೇಜುಗಳು ಮುಚ್ಚಿವೆ. ಎಸ್ ಎಸ್ ಎಲ್ ಸಿ ಫಲಿತಾಂಶಗಳನ್ನು ಆಗಸ್ಟ್ ಎರಡನೇ ವಾರದಲ್ಲಿ ಘೋಷಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿತ್ತು. ಅಂದರೆ ಅದರ ಪ್ರಕಾರ ಪಿಯುಸಿ ತರಗತಿಗಳು ಆಗಸ್ಟ್ ತಿಂಗಳ ಅಂತ್ಯದಲ್ಲಿ ಅಥವಾ ಸೆಪ್ಟೆಂಬರ್ ತಿಂಗಳ ಮೊದಲನೇ ವಾರದಲ್ಲಿ ಆರಂಭವಾಗಬೇಕು. ಹಾಗಾಗಿ, ಈ ಶೈಕ್ಷಣಿಕ ವರ್ಷದಲ್ಲಿ ನಮಗೆ ಕಡಿಮೆ ದಿನಗಳು ದೊರಕುತ್ತವೆ. ಇದರಿಂದಾಗಿ ಪಠ್ಯವನ್ನು ಪೂರ್ತಿಗೊಳಿಸುವುದು ಕಷ್ಟವಾಗುತ್ತದೆ. ಹಾಗಾಗೇ ಸಾಧ್ಯವಾದಷ್ಟೂ ಬೇಗ ತರಗತಿಗಳನ್ನು ಆರಂಭಿಸುವುದೇ ಉತ್ತಮ,” ಎನ್ನುತ್ತಾರೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: SSLC-result-Waiting – Book – seat first.