ಮೈಸೂರು,ಮಾರ್ಚ್,21,2024(www.justkannada.in): ಮೈಸೂರಿನಲ್ಲಿ ಮಾರ್ಚ್ 24 ರಂದು ಎಸ್ಟಿ ಮೋರ್ಚಾ ಮುನ್ನಡೆ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮೈಸೂರು, ಚಾಮರಾಜನಗರ ಬಿಜೆಪಿ ಅಭ್ಯರ್ಥಿಗಳು, ಶಾಸಕರು, ಸಂಸದರು, ಸಮುದಾಯದ ನಾಯಕರು ಭಾಗಿಯಾಗಲಿದ್ದಾರೆ ಎಂದು ಪಾಲಿಕೆ ಮಾಜಿ ಮೇಯರ್ ಶಿವಕುಮಾರ್ ತಿಳಿಸಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮೈಸೂರು ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿತು. ಈ ವೇಳೆ ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್, ಎಸ್ಟಿ ಸಮುದಾಯದವನ್ನ ಬಿಜೆಪಿ ಸದಾ ಬೆಂಬಲಿಸಿಕೊಂಡು ಬಂದಿದೆ. ಎಸ್ಟಿ ಸಮುದಾಯಕ್ಕೆ ಸಾಕಷ್ಟು ಕೊಡುಗೆಯನ್ನ ನೀಡಿದೆ. ವಾಲ್ಮೀಕಿ ಜಯಂತಿ ಆಚರಣೆ, ಪರಿಶಿಷ್ಟ ಪಂಗಡ ಆಯೋಗ ಮಾಡಿದ್ದು ಬಿಜೆಪಿ. ಎಸ್ಟಿ ಸಮುದಾಯದ ಮೀಸಲಾತಿಯನ್ನ ಏರಿಕೆ ಮಾಡಿದ್ದು ಬಿಜೆಪಿ. ಪರಿವಾರ, ತಳವಾರ ಸಮುದಾಯವನ್ನ ಎಸ್ಟಿ ಗೆ ಸೇರಿಸಿದ್ದು ಬಿಜೆಪಿ. ಹೀಗೆ ಹಲವು ಕೊಡುಗೆಯನ್ನ ಸಮುದಾಯಕ್ಕೆ ನೀಡಿರುವುದು ಬಿಜೆಪಿ. ಹೀಗಾಗಿ ಸಮುದಾಯಕ್ಕೆ ಬಿಜೆಪಿ ಕೊಡುಗೆ ಏನೆಂದು ತಿಳಿಸುವ ಜವಾಬ್ದಾರಿ ನಮ್ಮದಾಗಿದೆ. ಇದೇ 24 ರಂದು ಮೈಸೂರಿನಲ್ಲಿ ಎಸ್ಟಿ ಮೋರ್ಚಾ ಮುನ್ನಡೆ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದರು.
ಪಕ್ಷದ ಮೇಲೆ ನನಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷ ನನಗೆ ಎಲ್ಲವನ್ನು ನೀಡಿದೆ. ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಮೇಯರ್ ಹುದ್ದೆಯನ್ನ ಎಸ್ಟಿ ಸಮುದಾಯಕ್ಕೆ ನೀಡಿದೆ. ಮೇಯರ್ ಆಗಿ ನಾನು ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಇಷ್ಟೆಲ್ಲಾ ನೀಡಿರುವ ಪಕ್ಷಕ್ಕೆ ಮೋಸ ಮಾಡಲಿಕ್ಕೆ ಆಗುತ್ತಾ. ಪಕ್ಷ ನನಗೆ ತಾಯಿ ಸಮಾನ ಇದ್ದಂಗೆ. ಶಿವಕುಮಾರ್ ಬಿಜೆಪಿಯಿಂದ ದೂರ ಆಗ್ತಿದ್ದಾರೆ, ಬೇರೆ ಕಡೆ ಮುಖ ಮಾಡಿದ್ದಾರೆ ಅನ್ನೋದು ಸತ್ಯಕ್ಕೆ ದೂರವಾದದ್ದು ಎಂದು ಮಾಜಿ ಮೇಯರ್ ಶಿವಕುಮಾರ್ ಸ್ಪಷ್ಟನೆ ನೀಡಿದರು.
Key words: ST Morcha leadership conference – Mysore – March 24- Former Mayor- Shivakumar.