ಬೆಂಗಳೂರು,ಫೆ,11,2020(www.justkannada.in): ಉದ್ಯಮಶೀಲತೆ ಹೆಚ್ಚಿದಾಗ ಉದ್ಯೋಗಾವಕಾಶವೂ ಹೆಚ್ಚುವುದು, ಸದ್ಯ 9 ಸಾವಿರ ನವೋದ್ಯಮಗಳಿದ್ದು ಮುಂದಿನ 2-3 ವರ್ಷಗಳಲ್ಲಿ ಈ ಸಂಖ್ಯೆ 20 ಸಾವಿರಕ್ಕೆ ಏರಲಿದೆ. ಅದಕ್ಕೆ ಬೇಕಿರುವ ಅಗತ್ಯ ಸೌಲಭ್ಯ ಒದಗಿಸಲು ನಮ್ಮ ಸರ್ಕಾರ ಬದ್ಧ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.
ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರ ಹಾಗೂ ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಜಂಟಿಯಾಗಿ ಆಯೋಜಿಸಿದ್ದ’ಉದ್ಯೋಗದಾತರ ಅಗತ್ಯಕ್ಕೆ ಅನುಗುಣವಾಗಿ ಕೌಶಲ ತರಬೇತಿ’ ಕುರಿತ ವಿಶೇಷ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಡಾ. ಅಶ್ವತ್ಥನಾರಾಯಣ್, “ಕೌಶಲ ಅಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಮರುದಿನವೇ ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ,”ಎಂದರು.
“ಯುವ ಜನರಿಗೆ ಉದ್ಯೋಗಾವಕಾಶಗಳ ಸೃಷ್ಟಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದ್ಯತೆ ನೀಡುವುದು. ಉದ್ಯೋಗಾವಕಾಶಗಳು ಸಾಕಷ್ಟಿವೆ. ಆದರೆ, ನಮ್ಮ ಯುವ ಜನರಿಗೆ ಅದರ ಬಗ್ಗೆ ಮಾಹಿತಿ ಇರುವುದಿಲ್ಲ. ಉದ್ಯೋಗಕ್ಕಾಗಿ ಯಾರ ಕಾಲು ಹಿಡಿಯಬಾರದು, ಉದ್ಯೋಗದ ಮಾಹಿತಿ ಒಂದೇ ವೇದಿಕೆಯಡಿ ಸಿಗುವಂತಾಗಬೇಕು ಈ ನಿಟ್ಟಿನಲ್ಲಿ ಕಾಲೇಜು ಮಟ್ಟದಲ್ಲೇ ಮಾಹಿತಿ ಒದಗಿಸುವ ಕೆಲಸಗಳಾಗುತ್ತಿವೆ. ಜತೆಗೆ, ಐಟಿಐ ಹಾಗೂ ಎಂಜನಿಯರಿಂಗ್ ಪಠ್ಯಕ್ರಮಗಳನ್ನು ಪರಿಷ್ಕರಿಸಿ, ಸರಳಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು,”ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
ಯುವ ಸಬಲೀಕರಣ ಕೇಂದ್ರ
“ನಮ್ಮ ಸರ್ಕಾರ ಆರಂಭಿಸಿರುವ ಯುವ ಸಬಲೀಕರಣ ಕೇಂದ್ರದ ಮೂಲಕ ಪ್ರತಿ ಪ್ರೌಢ ಶಾಲೆಯಲ್ಲೂ ಒಬ್ಬ ಸಮಾಲೋಚಕರನ್ನು ನಿಗದಿಪಡಿಸಿ, ಅವರಿಗೆ ಭತ್ಯೆ ನೀಡಲಾಗುವುದು. ಪ್ರೌಢಶಾಲೆ ಮಟ್ಟದಲ್ಲೇ ಮುಂದಿನ ಓದು, ಕೌಶಲ ತರಬೇತಿ, ಶಿಕ್ಷಣ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು. ಇಂಟರ್ನ್ಶಿಪ್, ಅಪ್ರೆಂಟಿಸ್ಶಿಪ್, ಪ್ರಾಜೆಕ್ಟ್ ಹಾಗೂ ಮುಂದಿನ ವೃತ್ತಿ ಜೀವನದ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲಾಗುತ್ತಿದೆ. ವಿದೇಶಗಳಲ್ಲಿ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ಔದ್ಯೋಗಿಕ ಮಾಹಿತಿ ನೀಡುವ ವ್ಯವಸ್ಥೆ ಇದೆ. ಆದರೆ, ನಮ್ಮಲ್ಲಿ ಪದವಿ ಮುಗಿಸಿ ಕೆಲಸಕ್ಕಾಗಿ ಕೌಶಲ್ಯ ಕಲಿಯುವವರಿದ್ದಾರೆ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲೇ ಮುಂದಿನ ಉದ್ಯೋಗಕ್ಕೆ ಅಗತ್ಯ ಕೌಶಲ್ಯ ಕಲಿಯುಲು ಅವಕಾಶ ಕಲ್ಪಿಸಲಾಗಿದೆ,”ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
ನಮ್ಮ ಸರ್ಕಾರ ಕನ್ನಡಿಗರ ಪರ
ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಕರೆ ನೀಡಿರುವ ಬಂದ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅಶ್ವಥ್ ನಾರಾಯಣ್, “ನಮ್ಮ ಸರ್ಕಾರ ಕನ್ನಡಿಗರ ಪರವಾಗಿ ಕೆಲಸ ಮಾಡುತ್ತಿದೆ. ಅದಕ್ಕಿಂತ ಮುಖ್ಯವಾಗಿ ನಾವು ಭಾರತೀಯರು ಎಂಬುದನ್ನು ಮರೆಯವಂತಿಲ್ಲ. ಬೆಂಗಳೂರು ಈ ಮಟ್ಟಕ್ಕೆ ಬೆಳೆಯಲು ಕಾರಣ ನಮ್ಮ ಔದಾರ್ಯತೆ, ಎಲ್ಲರನ್ನು ಪ್ರೀತಿಯಿಂದ ಒಪ್ಪಿಕೊಳ್ಳುವ ಗುಣ. ಈ ವೈವಿಧ್ಯತೆಯನ್ನು ನಾವು ಉಳಿಸಿಕೊಳ್ಳಬೇಕು. ನಾವಿಂದು ವಿಶ್ವ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕಿದ್ದು, ಈ ವಿಚಾರದಲ್ಲಿ ಓಲೈಕೆ ರಾಜಕಾರಣ ಮಾಡುವುದಲ್ಲ,”ಎಂದು ಹೇಳಿದರು.
ಕೈಗಾರಿಕೆಗಳಿಗೆ ಬೇಕಾದ ಕೌಶಲ್ಯ ಕಲಿಕೆ
“5 ಟ್ರಿಲಿಯನ್ ಎಕಾನಮಿ ಸಾಧಿಸಲು ಹೆಚ್ಚಿನ ಕೈಗಾರಿಕೆಗಳು ಬರಬೇಕು, ಉದ್ಯೋಗ ಅವಕಾಶ ಹೆಚ್ಚಬೇಕು, ಈ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಬಹಳ ಮುಖ್ಯ. ಉದ್ದಿಮೆಗಳಿಗೆ ಬೇಕಾದ ಮಾನವ ಸಂಪನ್ಮೂಲ ಒದಗಿಸಲು ಸೂಕ್ತ ತರಬೇತಿ ಅಗತ್ಯ ಈ ನಿಟ್ಟಿನಲ್ಲಿ ಕೌಶಲ ತರಬೇತಿ ಕೇಂದ್ರಗಳ ಜತೆ ಕೈಗಾರಿಕೆಗಳು ಕೈ ಜೋಡಿಸಿದರೆ ಉತ್ತಮ. ಕಾರ್ಪೊರೇಟ್ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್ಆರ್) ಐಟಿ ಬಿಟಿ ವಲಯಗಳು ಉದ್ಯೋಗ ಸೃಷ್ಟಿಗೆ ಪೂರಕ ಕೌಶಲ್ಯ ತರಬೇತಿ ನೀಡಬಹುದು,”ಎಂದು ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ರತ್ನಪ್ರಭಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ರತ್ನಪ್ರಭಾ, ಕರ್ನಾಟಕ ಉದ್ಯೋಗ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗದ ನಿರ್ದೇಶಕ ರಾಘವೇಂದ್ರ ಉಪಸ್ಥಿತರಿದ್ದರು.
Key words: startup – expected – rise – 20 thousand – next 2-3 years- DCM -Dr. Ashwath narayan.