ಮೈಸೂರು, ಡಿ.೦೧,೨೦೨೪ : ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಂಬಂದ ಮೀಸಲು ಪಟ್ಟಿ ಪ್ರಕಟಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಕಾಲಮಿತಿ ನಿಗಧಿಪಡಿಸಿ ಪತ್ರ ಬರೆಯುವುದಾಗಿ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದರು.
“ಲಾಗೈಡ್ ” ಕಾನೂನು ಮಾಸ ಪತ್ರಿಕೆ ವತಿಯಿಂದ ಸೋಮವಾರ ಆಯೋಜಿಸಿದ್ದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರನ್ನು ಬಳಿಕ “ ಜಸ್ಟ್ ಕನ್ನಡ “ ಮಾತನಾಡಿಸಿತು.
ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಮತ್ತು ಮಹಾನಗರ ಪಾಲಿಕೆಗಳಿಗೆ ಕಳೆದ ಒಂದುವರೆ ವರ್ಷದಿಂದ ನಡೆಸಲಾಗಿಲ್ಲ. ಕಾರಣ, ಸರಕಾರ ಈ ಸಂಬಂಧ ಕ್ಷೇತ್ರ ಪುನರ್ ವಿಂಗಡನೆ ಹಾಗೂ ಮೀಸಲು ಪ್ರಕಟಿಸದಿರುವುದು. ನಾನು ರಾಜ್ಯ ಚುನಾವಣಾ ಆಯೋಗದ ಆಯುಕ್ತನಾಗಿ ನಾಲ್ಕು ತಿಂಗಳುಗಳಷ್ಟೆ ಕಳೆದಿದೆ. ಈ ಬಗ್ಗೆ ಈಗಾಗಲೇ ಸರಕಾರಕ್ಕೆ ಪತ್ರ ಬರೆದು ಅಗತ್ಯ ಕ್ರಮಕ್ಕೆ ತಿಳಿಸಿರುವೆ. ಮಾಹಿತಿಗಳ ಪ್ರಕಾರ ರಾಜ್ಯ ಸರಕಾರ ಕ್ಷೇತ್ರ ಪುನರ್ ವಿಂಗಡನೆ ಕಾರ್ಯ ಪೂರ್ಣಗೊಳಿಸಿದ್ದು ಮೀಸಲು ಪಟ್ಟಿಯನ್ನು ಮಾತ್ರ ಪ್ರಕಟಿಸಬೇಕಾಗಿದೆ. ಆದಷ್ಟು ಶೀಘ್ರವಾಗಿ ಇದನ್ನು ಮುಗಿಸುವಂತೆ ಕಾಲಮಿತಿ ನಿಗಧಿಪಡಿಸಿ ಮತ್ತೊಂದು ಪತ್ರವನ್ನು ಸರಕಾರಕ್ಕೆ ಬರೆಯುವುದಾಗಿ ಸಂಗ್ರೇಶಿ ತಿಳಿಸಿದರು.
ಈ ಮೊದಲು ಆಯೋಗವೇ ಪುನರ್ ವಿಂಗಡನೆ ಹಾಗೂ ಮೀಸಲು ಪಟ್ಟಿ ನಿಗಧಿಪಡಿಸುತ್ತಿತ್ತು. ಆದರೆ ಇದೀಗ ರಾಜ್ಯ ಸರಕಾರವೇ ಇದರ ಜವಾಬ್ದಾರಿ ಹೊತ್ತಿದೆ. ಆದ್ದರಿಂದ ಸರಕಾರವೇ ನಿಗಧಿತ ಸಮಯದಲ್ಲಿ ಈ ಕಾರ್ಯ ಪೂರ್ಣಗೊಳಿಸಿ ಪಟ್ಟಿ ಬಿಡುಗಡೆ ಮಾಡಬೇಕಾಗಿದೆ.
ಆಯೋಗ ಸನ್ನದ್ಧವಾಗಿದೆ:
ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಂಪೂರ್ಣವಾಗಿ ಸನ್ನದ್ಧವಾಗಿದೆ. ಸರಕಾರದಿಂದ ಪಟ್ಟಿ ಬಿಡುಗಡೆಗೊಂಡಲ್ಲಿ ಮುಂದಿನ ಮಾರ್ಚ್ – ಏಪ್ರಿಲ್ ತಿಂಗಳಲ್ಲೇ ಚುನಾವಣೆ ನಡೆಸಲಾಗುವುದು ಎಂದು ಆಯುಕ್ತ ಸಂಗ್ರೇಶಿ ಸ್ಪಷ್ಟಪಡಿಸಿದರು.
ಲಾಗೈಡ್ ಬಗ್ಗೆ ಮೆಚ್ಚುಗೆ:
ಇದಕ್ಕು ಮೊದಲು ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಎಸ್. ಸಂಗ್ರೇಶಿ, ಕಾನೂನು ಕ್ಷೇತ್ರದಲ್ಲಿನ ಪ್ರತಿಯೊಂದು ಬೆಳವಣಿಗೆಗಳ ಬಗೆಗೂ ಲಾಗೈಡ್ ಮಾಸ ಪತ್ರಿಕೆ ಸಮಗ್ರ ಮಾಹಿತಿ ನೀಡುತ್ತಿದೆ. ಪ್ರತಿ ತಿಂಗಳು ಪತ್ರಿಕೆಯನ್ನು ನಿರಂತರವಾಗಿ ಹೊರ ತರುವುದು ಸಲಭದ ವಿಷಯವಲ್ಲ. ಅಂಥಹುದರಲ್ಲಿ ವಕೀಲ ಹಾಗೂ ಪತ್ರಿಕೆ ಸಂಪಾದಕರಾದ ಎಚ್. ಎನ್. ವೆಂಕಟೇಶ್ ಅವರು ಕಳೆದ ಹಲವಾರು ವರ್ಷಗಳಿಂದ ಪತ್ರಿಕೆಯನ್ನು ಹೊರ ತರುತ್ತಿದ್ದಾರೆ. ಮಾತ್ರವಲ್ಲದೆ ಮೈಸೂರಿನಿಂದ ಬೇರೆಡೆಗೆ ವರ್ಗಾವಣೆಗೊಂಡ ನ್ಯಾಯಾಧೀಶರು ಹಾಗೂ ಅಧಿಕಾರಗಳ ವಿಳಾಸ ಪಡೆದು ಅವರಿಗೂ ಪತ್ರಿಕೆ ತಲುಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ.
ತಿಳುವಳಿಕೆ ಅಗತ್ಯ :
ಪತ್ರಕರ್ತರು ನ್ಯಾಯಾಲಯಕ್ಕೆ ಸಂಬಂಧಿಸಿದ ಸುದ್ಧಿಗಳನ್ನು ಪ್ರಕಟಿಸುವಾಗ ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಮುನ್ನ ಅದಕ್ಕೆ ಸಂಬಂಧಿಸಿದ ಕನಿಷ್ಠ ಜ್ಞಾನ ಹೊಂದುವುದು ಅತ್ಯಗತ್ಯ. ತಪ್ಪಿದಲ್ಲಿ ಪತ್ರಕರ್ತರು ಮಾಡುವ ವರದಿ ಲೋಪದಿಂದ ಕೂಡಿರುತ್ತದೆ. ಕಾನೂನು ಬಲ್ಲವರ ಎದುರು ನಗೆಪಾಟೀಲಿಗೆ ಈಡಾಗಬೇಕಾಗುತ್ತದೆ ಎಂದು ಸಂಗ್ರೇಶಿ ಕಿವಿಮಾತು ಹೇಳಿದರು.
key words: Local body elections, Letter to government, publish reservation list, time frame, State Chief Election Commissioner
summary:
Local body elections: Letter to government urging it to publish reservation list within time frame: State Chief Election Commissioner