ಬೆಂಗಳೂರು:ಆ-2: ತೀವ್ರ ಮಳೆ ಕೊರತೆಯಿಂದಾಗಿ ಸತತ ಆರನೇ ವರ್ಷ ಬರದತ್ತ ಹೊರಳುತ್ತಿರುವ ರಾಜ್ಯದಲ್ಲಿ ರೈತಾಪಿ ವರ್ಗ ಸುಮಾರು 1 ಲಕ್ಷ ಕೋಟಿ ರೂ. ಗಳಿಗೂ ಹೆಚ್ಚಿನ ನಷ್ಟ ಅನುಭವಿಸಿರುವ ಆತಂಕಕಾರಿ ಸಂಗತಿ ಬಹಿರಂಗವಾಗಿದೆ. ರಾಜ್ಯ ಸರ್ಕಾರ 2020ರ ವೇಳೆಗೆ ಕೃಷಿಯನ್ನು ಲಾಭದಾಯಕ ಹಾಗೂ ಸುಸ್ಥಿರವಾಗಿ ಮಾಡಲು ಯೋಜನೆ ರೂಪಿಸಿಕೊಂಡಿದ್ದರೂ ಸತತ ಬರ ಸರ್ಕಾರದ ಆಶಯಕ್ಕೆ ಧಕ್ಕೆ ತಂದಿರುವುದು ವಾಸ್ತವ.
ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನದ ಮೇಲೆ ಬರದ ಕಾಮೋಡ ಕವಿದು ರೈತರು ಕಂಗಾಲಾಗಿರುವ ನಡುವೆಯೇ ಈ ವರ್ಷವೂ ಮಳೆ ಕೈಕೊಡುವ ಸಾಧ್ಯತೆ ಗೋಚರಿಸಿರುವುದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರ ಸ್ವರೂಪ ತಾಳುವುದು ನಿಚ್ಚಳವಾಗಿದೆ. ಉತ್ತಮ ಮಳೆಯಾಗದೆ ಬರ ಕಾಡುತ್ತಿರುವ ಕಾರಣದಿಂದಾಗಿ ಕೃಷಿ ಕ್ಷೇತ್ರ ಶೇ.4.8 ನಕಾರಾತ್ಮಕ ಬೆಳವಣಿಗೆ ದರ ದಾಖಲಿಸಿರುವುದು ರಾಜ್ಯದ ಒಟ್ಟಾರೆ ಅಭಿವೃದ್ಧಿ ದರದ ಮೇಲೆ ಪರಿಣಾಮ ಬೀರುತ್ತಿದೆ.
ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 70 ಸಾವಿರ ಕೋಟಿ ರೂ. ಮೌಲ್ಯದ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನ ಬೆಳೆಯಲಾಗುತ್ತದೆ. ಅದರಲ್ಲಿ ಶೇ.30 ರಿಂದ 40 ರೈತರಿಗೆ ದಕ್ಕಿದರೆ ಉಳಿದದ್ದು ಮಧ್ಯವರ್ತಿಗಳ ಪಾಲಾಗುತ್ತದೆ. ಈ ಲೆಕ್ಕದಲ್ಲಿ ರೈತರು ಕಳೆದ ಆರು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ನಷ್ಟ ಅನುಭವಿಸಿದ್ದಾರೆ ಎಂಬುದು ಒಂದು ಅಂದಾಜು.
ರಾಜ್ಯದಲ್ಲಿ ಪ್ರಮುಖವಾಗಿ ಕಬ್ಬು, ಭತ್ತ, ಶೇಂಗಾ, ದ್ವಿದಳ ಧಾನ್ಯಗಳು ವಾಣಿಜ್ಯ ಬೆಳೆಗಳಾಗಿವೆ. ದ್ರಾಕ್ಷಿ, ಮಾವು, ತೆಂಗು ವಾಣಿಜ್ಯ ಬೆಳೆಗಳಾಗಿವೆ. ಆರು ವರ್ಷಗಳ ಅವಧಿಯಲ್ಲೂ ಗುರಿಯಷ್ಟು ಉತ್ಪನ್ನ ಬಂದಿಲ್ಲ. ಈ ವರ್ಷ ಜೂನ್ನಲ್ಲಿ ಶೇ 49, ಜುಲೈನಲ್ಲಿ ಶೇ. 27 ಮಳೆ ಕೊರತೆಯಾಗಿದ್ದು, ಆಗಸ್ಟ್ನಲ್ಲೂ ಕೊರತೆಯಾಗುವ ಅಂದಾಜಿದೆ. 2019-20ನೇ ಸಾಲಿನ ನಷ್ಟವನ್ನು ಈಗಲೇ ಅಂದಾಜು ಮಾಡಲು ಸಾಧ್ಯವಿಲ್ಲ. ಹಿಂಗಾರು ಹಾಗೂ ಬೇಸಿಗೆಯನ್ನು ಗಮನಿಸಿದ ನಂತರವೇ ಅಂತಿಮವಾಗುತ್ತದೆ. 2014-15ರಿಂದ ಸತತವಾಗಿ ಬರ ರಾಜ್ಯವನ್ನು ಕಾಡುತ್ತಿದೆ.
2017-18ರಲ್ಲಿ ಸ್ವಲ್ಪ ಮಟ್ಟಿನ ಮಳೆಯಾಗಿತ್ತಾದರೂ ಆ ನಂತರದ ಎರಡು ವರ್ಷ ಮತ್ತೆ ಬರ ಆವರಿಸಿದ್ದರಿಂದಾಗಿ ಪೂರ್ಣ ಪ್ರಮಾಣದಲ್ಲಿ ಬಿತ್ತನೆ ಆಗಲಿಲ್ಲ, ಬಿತ್ತನೆಯಾದ ಪ್ರದೇಶದಲ್ಲಿ ತೇವಾಂಶ ಕೊರತೆ ಉಲ್ಬಣಿಸಿದ್ದರಿಂದ ಪೂರ್ಣ ಪ್ರಮಾಣದ ಬೆಳೆಯೂ ಬರಲಿಲ್ಲ.
ಕೇಂದ್ರದತ್ತ ದೃಷ್ಟಿ: ಬರ ಎದುರಿಸಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದೆ. ಕೇಂದ್ರ ನೀಡಿದ್ದ 946 ಕೋಟಿ ರೂ.ಗಳನ್ನು ರೈತರಿಗೆ ಇನ್ಪುಟ್ ಸಬ್ಸಿಡಿಯಾಗಿ ನೀಡಲಾಗಿದೆ. ಇನ್ನೂ ಹೆಚ್ಚಿನ ನೆರವು ಕೋರಿ ನಿಯೋಗ ಕೊಂಡೊಯ್ಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದಾರೆ. ಆ ನಿಟ್ಟಿನಲ್ಲಿ ಸಿದಟಛಿತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ನಷ್ಟದ ಅಂದಾಜು ಮಾಡುವುದು ಕಷ್ಟ, ಇನ್ನೂ ಒಂದು ವಾರ ಬಿತ್ತನೆಗೆ ಅವಕಾಶ ಇದೆ. ಉತ್ತಮ ಮಳೆ ನಿರೀಕ್ಷೆಯಲ್ಲಿದ್ದೇವೆ.
| ಡಾ. ಶ್ರೀನಿವಾಸ್ ನಿರ್ದೇಶಕರು, ಕೃಷಿ ಇಲಾಖೆ
ಲೆಕ್ಕಾಚಾರ ಹೇಗೆ?
ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆ ಗುರಿ ಹಾಕಿಕೊಂಡು, ಅಂದಿನ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಎಷ್ಟು ಮೊತ್ತದ ಉತ್ಪನ್ನ ಬರಬಹುದೆಂದು ಲೆಕ್ಕ ಹಾಕಲಾಗುತ್ತದೆ. ಉತ್ತಮ ಮಳೆಯಾದರೆ ಉತ್ಪನ್ನ ಹೆಚ್ಚಬಹುದು, ಕಡಿಮೆಯಾದರೆ ಇಳಿಕೆಯಾಗಬಹುದೆಂದು ಮೂಲಗಳು ಹೇಳುತ್ತವೆ.
ಕೊಂಚ ನೆರವಾಯ್ತು ಸಾಲಮನ್ನಾ
ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೊಂಡ ಸಾಲಮನ್ನಾ ಸ್ವಲ್ಪ ಮಟ್ಟಿಗೆ ರೈತರಿಗೆ ನೆರವಾಗಿದೆ. ಆದರೂ ಇನ್ನೂ ಬ್ಯಾಂಕ್ಗಳ ಕಿರುಕುಳ ತಪ್ಪಿಲ್ಲ. ಸಾಲಮನ್ನಾ ಜಾರಿಗೆ ಬಂದ ನಂತರವೂ ರಾಜ್ಯದಲ್ಲಿ 800ಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಎಷ್ಟು ಬಿತ್ತನೆ?
ರಾಜ್ಯದಲ್ಲಿ ಉತ್ತಮ ಮಳೆಯಾದರೆ ಮುಂಗಾರಿನಲ್ಲಿ 121 ಲಕ್ಷ ಹೆಕ್ಟೇರ್ ತನಕ ಬಿತ್ತನೆ ಗುರಿ ಹಾಕಿಕೊಳ್ಳಲಾಗುತ್ತದೆ. 78.32 ಲಕ್ಷ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾರೆ. 2019-20ರಲ್ಲಿ 74.69 ಲಕ್ಷ ಹೆಕ್ಟೇರ್ ಗುರಿ ಹೊಂದಿದ್ದು, ಅದರಲ್ಲಿ 46.27 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಆದರೆ 70ಕ್ಕೂ ಹೆಚ್ಚು ತಾಲೂಕುಗಳಲ್ಲಿ ತೇವಾಂಶ ಕೊರತೆಯಿದೆ. ಉತ್ತಮ ಮಳೆಯಾದರೆ ರಾಜ್ಯದಲ್ಲಿ 140 ಲಕ್ಷ ಟನ್ ತನಕ ಕೃಷಿ ಉತ್ಪನ್ನಗಳನ್ನು ನಿರೀಕ್ಷೆ ಮಾಡಲಾಗುತ್ತದೆ.
ಕೆರೆಗಳಲ್ಲಿ ನೀರಿಲ್ಲ
ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ 3611 ಕೆರೆಗಳಿವೆ. ಅವುಗಳಲ್ಲಿ ಶೇ. 2ರಲ್ಲಿ ಮಾತ್ರವೇ ಶೇ. 50ಕ್ಕೂ ಹೆಚ್ಚಿನ ನೀರಿದೆ. ಶೇ. 68 ಕೆರೆಗಳು ಒಣಗಿವೆ. ಶೇ. 30 ಕೆರೆಗಳಲ್ಲಿ ಶೇ.30 ರಿಂದ 50 ಮಾತ್ರ ನೀರಿದೆ.
ಜಲಾಶಯಗಳ ಸ್ಥಿತಿ ಗಂಭೀರ!
ಲಿಂಗನಮಕ್ಕಿ, ವಾರಾಹಿ, ಹಾರಂಗಿ, ಹೇಮಾವತಿ, ಕೆಆರ್ಎಸ್, ಕಬಿನಿ, ಭದ್ರಾ, ತುಂಗಭದ್ರಾ, ಘಟಪ್ರಭಾ ಜಲಾಶಯಗಳಲ್ಲಿ ಹದಿನೈದು ವರ್ಷಗಳಲ್ಲಿಯೇ ಕಡಿಮೆ ನೀರಿದೆ. ಸೂಪಾ, ಮಲಪ್ರಭಾ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ನೀರಿದೆ.
ಸತತ ಮಳೆಯ ಕೊರತೆಯಿಂದ ರೈತರು ತೊಂದರೆಯಲ್ಲಿದ್ದಾರೆ. ಕೂಡಲೇ ಕೇಂದ್ರ, ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಮುಂದಾಗಬೇಕಾಗಿದೆ. ರೈತರ ಉಳಿದ ಸಾಲಮನ್ನಾ ಆಗಲಿ.
| ಮಾರುತಿ ಮಾನ್ಪಡೆ ಅಧ್ಯಕ್ಷರು, ಪ್ರಾಂತ ರೈತ ಸಂಘ
ಉತ್ಪಾದನೆ ನಿರೀಕ್ಷೆ (ಅಂದಾಜು ಕೋಟಿ ರೂ.ಗಳಲ್ಲಿ )
2014-15- 78 ಸಾವಿರ
2015-16-73 ಸಾವಿರ
2016-17- 72 ಸಾವಿರ
2018-19-72 ಸಾವಿರ
2019-20-ಬಿತ್ತನೆ ಅವಧಿ ಮುಗಿದಿಲ್ಲ
(2017-18ರಲ್ಲಿ ಮಳೆಯಾಗಿದ್ದರಿಂದ ಬಂದ ಉತ್ಪನ್ನಗಳ ಮೌಲ್ಯ 88 ಸಾವಿರ ಕೋಟಿ ರೂ.)