ಬೆಂಗಳೂರು,ಜನವರಿ,16,2025 (www.justkannada.in): ಬೆಂಗಳೂರು ಅರಮನೆಯನ್ನು ವಶಪಡಿಸಿಕೊಂಡಿರುವ 1996ರ ಕಾಯ್ದೆಯ ಸಿಂಧುತ್ವವನ್ನು ಎತ್ತಿ ಹಿಡಿಯಲು ಸರ್ವೋಚ್ಛ ನ್ಯಾಯಾಲಯದ ಮುಂದೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಸಲ್ಲಿಸಲಾಗಿರುವ ಮಧ್ಯಂತರ ಅರ್ಜಿಯನ್ನು ಪರಿಗಣಿಸಬೇಕೆಂದು ಕೋರಲು ರಾಜ್ಯ ಸಚಿವ ಸಂಪುಟ ಇಂದು ನಿರ್ಧರಿಸಿದೆ.
ಈ ಹಿಂದೆ ಉಚ್ಛ ನ್ಯಾಯಾಲಯ ಅನುಮೋದಿಸಿದ ಕರ್ನಾಟಕ ವಿಧಾನ ಮಂಡಲ ಅಂಗೀಕರಿಸಿದ ಅಧಿನಿಯಮವನ್ನು ಎತ್ತಿಹಿಡಿಯಲು1997ರಲ್ಲಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಈಗಾಗಲೇ ಮಧ್ಯಂತರ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಸಚಿವ ಸಂಪುಟ ಸಭೆಯ ನಂತರ ಸಂಪುಟದ ನಿರ್ಣಯದ ಕುರಿತು ವಿವರಿಸಿದರು.
ಮಾನ್ಯ ಸರ್ವೋಚ್ಛ ನ್ಯಾಯಾಲಯವು ದಿನಾಂಕ: ೧೦.೧೨.೨೦೨೪ರ ತೀರ್ಪಿನಂತೆ ಬೆಂಗಳೂರು ಅರಮನೆ ಮೈದಾನಕ್ಕೆ ಸೇರಿದ ೧೫ ಎಕರೆ ೧೭.೫ ಗುಂಟೆ ಜಮೀನನ್ನು ಉಪಯೋಗಿಸಿಕೊಳ್ಳುವುದಕ್ಕೆ ನಿಗಧಿಪಡಿಸಿದ ಟಿ.ಡಿ.ಆರ್ ದರದ ಬಗ್ಗೆ ಸಚಿವ ಸಂಪುಟವು ಇಂದು ಚರ್ಚಿಸಿತು. ನ್ಯಾಯಾಂಗ ನಿಂದನೆ ಅರ್ಜಿಯ ವಿಷಯದಲ್ಲಿ ಕಾನೂನಿನ ಪ್ರಕಾರ ಅಗತ್ಯ ಕ್ರಮ ವಹಿಸಲು ಸಚಿವ ಸಂಪುಟವು ಸಂಬಂಧಪಟ್ಟ ಇಲಾಖೆಗೆ ನಿರ್ದೇಶಿಸಿತು.
ಸರ್ವೋಚ್ಛ ನ್ಯಾಯಾಲಯದ ದಿನಾಂಕ: ೨೧.೧೨.೨೦೧೪ರ ಆದೇಶಾನುಸಾರ ರೂ.೨,೮೩,೫೦೦ ಪ್ರ.ಚ.ಮೀಟರ್ ಗೆ (ಬಳ್ಳಾರಿ ರಸ್ತೆ) ಮತ್ತು ರೂ.೨,೦೪,೦೦೦ ಪ್ರ.ಚ.ಮೀಟರ್ ಗೆ ವನ್ನು (ಜಯಮಹಲ್ ರಸ್ತೆ) ಮೌಲ್ಯದಂತೆ ಟಿ.ಡಿ.ಆರ್ ವನ್ನು ನೀಡಲು ಅಂದಾಜು ರೂ.೩೦೧೧.೦೦ ಕೋಟಿಗಳ ಆರ್ಥಿಕ ಹೊರೆ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ್ದರೂ ಸಹ ಅದನ್ನು ತಿರಸ್ಕರಿಸಲಾಗಿರುತ್ತದೆ.
ಅಲ್ಲದೇ, ಮಾನ್ಯ ಸರ್ವೋಚ್ಛ ನ್ಯಾಯಾಲಯದ 2001ರ ಆದೇಶವನ್ನು ಉಲ್ಲಂಘಿಸಿ ಸುಮಾರು ಬೆಂಗಳೂರು ಅರಮನೆಯ 2 ಲಕ್ಷ ಚ.ಮೀಟರ್ ವ್ಯಾಪ್ತಿಯಲ್ಲಿ ಖಾಯಂ ಕಟ್ಟಡಗಳನ್ನು ನಿರ್ಮಿಸಿರುವ ಮಹಾರಾಜರ ಉತ್ತರಾಧಿಕಾರಿಗಳ ಮೇಲೆ ನ್ಯಾಯಾಂಗದ ನಿಂದನೆ ಅರ್ಜಿಯನ್ನು ಸಲ್ಲಿಸಲು ಸಹ ಸಚಿವ ಸಂಪುಟ ತೀರ್ಮಾನಿಸಿದೆ. 15 ದಿನಗಳಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ದಿನಾಂಕ: ೦೯.೦೧.೨೦೨೫ ರಂದು ಸರ್ಕಾರದ ವತಿಯಿಂದ ನೋಟಿಸ್ಗಳನ್ನು ಜಾರಿ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.
ಇಂತಹ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರದಿಂದ ಇನ್ನೂ ಮುಂದೆ ಅನುಮತಿ ನೀಡಲು ಸಚಿವ ಸಂಪುಟ ನಿರ್ಬಂಧ ವಿಧಿಸಿದೆ.
ಕರ್ನಾಟಕ ರಾಜ್ಯವು ಬೆಂಗಳೂರು ಅರಮನೆ (ಭೂಸ್ವಾಧಿನ ಮತ್ತು ವರ್ಗಾವಣೆ) ಅಧಿನಿಯಮ, ೧೯೯೬ ಎಂದು ಕರೆಯಲ್ಪಡುವ ಶಾಸನವನ್ನು ಅಧಿನಿಯಮಿಸಿ ದಿನಾಂಕ: ೨೧.೧೧.೧೯೯೬ ರಿಂದ ಜಾರಿಗೆ ಬರುವಂತೆ ಬೆಂಗಳೂರು ಅರಮನೆಗೆ ಸೇರಿದ ಎಲ್ಲಾ ಸ್ಥಿರ ಚರ ಸ್ವತ್ತುಗಳ (ಕಾಯ್ದೆಯಲ್ಲಿ ನಿರ್ಧಿಷ್ಟಪಡಿಸಲಾದ ಸ್ವತ್ತುಗಳು) ಎಲ್ಲಾ ವಿಧವಾದ ಹಕ್ಕು ರಾಜ್ಯ ಸರ್ಕಾರದಲ್ಲಿ ವಿಹಿತವಾಗುತ್ತದೆ ಎಂದು ತಿಳಿಸಲಾಗಿತ್ತು. ಈ ಅಧಿನಿಯಮವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಂಖ್ಯೆ: ೩೩೮೩/೧೯೯೭ ರಲ್ಲಿ ಮತ್ತು ಇತರೆ ಸಂಬಂಧಿತ ವಿಷಯಗಳಲ್ಲಿ ಕರ್ನಾಟಕದ ಉಚ್ಛ ನ್ಯಾಯಾಲಯದ ಮುಂದೆ ಪ್ರಶ್ನಿಸಿದ ಸಂದರ್ಭದಲ್ಲಿ ರಾಜ್ಯದ ಶಾಸನದ ಮಾನ್ಯತೆಯನ್ನು ರಾಜ್ಯ ಉಚ್ಛ ನ್ಯಾಯಾಲಯವು ಎತ್ತಿ ಹಿಡಿದಿತ್ತು. ರಾಜ್ಯ ಉಚ್ಛ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ವಿಶೇಷ ಅನುಮತಿ ಅರ್ಜಿ (ಸಿವಿಲ್) ಸಂಖ್ಯೆ: ೮೬೫೦/೧೯೯೭ ರಲ್ಲಿ ಮತ್ತು ಇತರೆ ಸಂಬಂಧಿತ ವಿಷಯಗಳಲ್ಲಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿರುತ್ತಾರೆ. ಸರ್ವೋಚ್ಛ ನ್ಯಾಯಾಲಯವು ಈ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿದೆ. ಈ ಅರ್ಜಿ ವಿಲೆವಾರಿ ಆಗುವವರೆಗೆ ಮಾಲಿಕತ್ವ ಪ್ರಶ್ನೆಯು ಇತ್ಯರ್ಥವಾಗುವವರೆಗೆ ಟಿ.ಡಿ.ಆರ್ ಪ್ರಕರಣವನ್ನು ಕಾನೂನು ಪ್ರಕಾರ ನಿರ್ವಹಿಸಲು ಸಚಿವ ಸಂಪುಟ ನಿರ್ದೇಶಿಸಿದೆ.
Key words: Palace, TDR case, Petition, state government