ಬೆಂಗಳೂರು,ಫೇಬ್ರವರಿ,7,2022(www.justkannada.in): ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು,ಮಂಡಳಿಗಳು, ನಿಗಮ ಇತ್ಯಾದಿ ಕಚೇರಿಗಳಲ್ಲಿ ಪಾರದರ್ಶಕತೆಯನ್ನು ತರಲು ಸರ್ಕಾರ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳಲ್ಲಿ ನಗದು ಘೋಷಣೆ ವಹಿಯನ್ನು ನಿರ್ವಹಿಸುವಂತೆ ಸೂಚನೆ ನೀಡಿದೆ.
ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಪಿಟಿಷನ್ ಸಂಖ್ಯೆ: 79/2021(GM-KLA) ರಲ್ಲಿ ದಿನಾಂಕ 10.11.2021 ರಂದು ನೀಡಿರುವ ನಿರ್ದೇಶನದನ್ವಯ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು/ ಮಂಡಳಿಗಳು/ ನಿಗಮಗಳು ಈ ಕೆಳಗಿನ ಕಾರ್ಯ ವಿಧಾನವನ್ನು ಅನುಸರಿಸಿ, ಈ ಸುತ್ತೋಲೆಗೆ ಲಗತ್ತಿಸಲಾದ ನಿಗದಿತ ನಮೂನೆಯಲ್ಲಿ “ನಗದು ಘೋಷಣೆ ವಹಿಯನ್ನು ನಿರ್ವಹಣೆ ಮಾಡುವಂತೆ ನಿರ್ದೇಶಿಸಲಾಗಿದೆ.
“ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು/ಮಂಡಳಿಗಳು/ನಿಗಮ ಇತ್ಯಾದಿ ಕಚೇರಿಗಳಲ್ಲಿ ಪಾರದರ್ಶಕತೆಯನ್ನು ತರಲು, ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಗಿನ ಸೂಚನೆಗಳನ್ನು ಪಾಲಿಸಬೇಕು.
- ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ನೌಕರರ ವೈಯಕ್ತಿಕ ನಗದನ್ನು ಗಮನಿಸಲು ಪ್ರತಿ ಕೆಲಸದ ದಿನದ ಪ್ರಾರಂಭದಲ್ಲಿ “ನಗದು ಘೋಷಣೆ ವಹಿ”ಯನ್ನು ತೆರೆಯತಕ್ಕದ್ದು.
- ಸರ್ಕಾರಿ ನೌಕರರು ಅಧಿಕೃತ ಸಹಿ ಹಾಜರಾತಿ ವಹಿ/ಎಎಂಎಸ್ ನಲ್ಲಿ ಕೆಲಸದ ದಿನದಂದು ಕರ್ತವ್ಯಕ್ಕೆ ವರದಿ ಮಾಡಿದ ತಕ್ಷಣ, ಅವನು/ಅವಳು ಕಚೇರಿಗೆ ತಂದ ನಗದು ಮೊತ್ತವನ್ನು ನಗದು ಘೋಷಣೆ ವಹಿಯಲ್ಲಿ ತನ್ನ ಸಹಿಯೊಂದಿಗೆ ಘೋಷಿಸತಕ್ಕದ್ದು.
- ನಗದು ಘೋಷಣೆ ವಹಿಯು ಸಂಬಂಧಪಟ್ಟ ವಿಭಾಗ/ಶಾಖೆಯ ಗ್ರೂಪ್-ಬಿ ಅಧಿಕಾರಿಯ ವಶದಲ್ಲಿರತಕ್ಕದ್ದು ಮತ್ತು ಸದರಿ ಅಧಿಕಾರಿಯು ನೌಕರರು ಮಾಡಿದ ನಮೂದುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿರುತ್ತಾರೆ.
- ಯಾವುದೇ ನೌಕರರು ನಗದು ಘೋಷಣೆ ವಹಿಯಲ್ಲಿ ಘೋಷಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಹೊಂದಿರುವುದು ಕಂಡು ಬಂದರೆ, ಅಂತಹ ಹೆಚ್ಚುವರಿ ಹಣವನ್ನು ಅಕ್ರಮ ಸಂಪಾದನೆ ಎಂದು ಅರ್ಥೈಸಲಾಗುತ್ತದೆ. ಹಾಗೂ ಅಂತಹ ಹೆಚ್ಚುವರಿ ಹಣವನ್ನು ಸಕ್ರಮ ಹಣ ಎಂದು ಸಾಬೀತುಪಡಿಸುವುದು ನೌಕರರ ಹೊಣೆಯಾಗಿರುತ್ತದೆ.
- ನಗದು ಘೋಷಣೆ ವಹಿಯನ್ನು ಕಚೇರಿ ವೇಳೆಯ ಎಲ್ಲಾ ಸಮಯದಲ್ಲಿ ಯಾವುದೇ ಉನ್ನತ/ಸಕ್ಷಮ ಪ್ರಾಧಿಕಾರ/ಘಟಕದ ಮುಖ್ಯಸ್ಥರು ವಿಭಾಗದ ಮುಖ್ಯಸ್ಥರ ತಪಾಸಣೆಗಾಗಿ ತೆರೆದಿರತಕ್ಕದ್ದು.
ಮೇಲಿನ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಇವುಗಳ ಪಾಲನೆಯಲ್ಲಿ ಯಾವುದೇ ಲೋಪವುಂಟಾದರೇ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಸಿಎಸ್ ರವಿ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.
Key words: state government- all departments – cash declaration.