ಜಿಲ್ಲೆಗಳಲ್ಲಿ ಇಂಟೆರ್‌ ನೆಟ್ ಸಂಪರ್ಕ ಸುಧಾರಣೆಗೆ ರಾಜ್ಯ ಸರ್ಕಾರದ ಪ್ರಯತ್ನ.

ಬೆಂಗಳೂರು, ಸೆಪ್ಟೆಂಬರ್ 11, 2021 (www.justkannada.in): ಕರ್ನಾಟಕದ ಗ್ರಾಮೀಣ ಪ್ರದೇಶಗಳು ಹಾಗೂ ಜಿಲ್ಲೆಗಳಿಂದ ಕೆಲಸ ನಿರ್ವಹಿಸುತ್ತಿರುವಂತಹ ಐಟಿ ಕಂಪನಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಅಸಮರ್ಪಕ ಇಂಟೆರ್‌ನೆಟ್ ಸಮಸ್ಯೆಯನ್ನು ಸರಿಪಡಿಸಲು ರಾಜ್ಯ ಸರ್ಕಾರ ಕಾರ್ಯಕ್ರಮವನ್ನು ರೂಪಿಸಿದೆ. ಇದರ ಅಂಗವಾಗಿ ಐಟಿ ಇಲಾಖೆಯು ರಾಜ್ಯದ ಜಿಲ್ಲೆಗಳಲ್ಲಿ ಇಂಟೆರ್‌ ನೆಟ್ ಸಂಪರ್ಕ ಸೇವೆಗಳನ್ನು ಸುಧಾರಿಸಲು ಒಂದು ಕಾರ್ಯಪಡೆಯನ್ನು ರಚಿಸಿದೆ.

ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ನಿವಾಸಿಗಳಿಗೆ ಸಮರ್ಪಕ ಇಂಟೆರ್‌ ನೆಟ್ ಸಂಪರ್ಕ ಸಾಧ್ಯವಾಗದೆ ಬಹಳ ತೊಂದರೆ ಅನುಭವಿಸುತ್ತಿದ್ದರು. ಇದೇ ಮೊದಲ ಬಾರಿಗೆ ಸಮರ್ಪಕ ಇಂಟೆರ್‌ ನೆಟ್ ಸಂಪರ್ಕವನ್ನು ಕೋರಿ ಇತ್ತೀಚೆಗೆ ಶಿವಮೊಗ್ಗದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ಈ ರೀತಿ ತಡೆರಹಿತ ಇಂಟೆರ್‌ ನೆಟ್ ಸಂಪರ್ಕದ ಕೊರತೆಯ ಕುರಿತು ಮಾಧ್ಯಮಗಳಲ್ಲಿ ಹಲವಾರು ಬಾರಿ ಸುದ್ದಿಗಳು ಪ್ರಕಟವಾಗಿದ್ದವು.

ಬೆಂಗಳೂರಿನಲ್ಲಿ ನೆಲೆಸಿದ್ದಂತಹ ಸಿಂಧು ಎಂಬ ಹೆಸರಿನ ಓರ್ವ ಚಾರ್ಟೆರ್ಡ್ ಅಕೌಂಟೆಂಟ್ ಕೋವಿಡ್ ಸೋಂಕಿನ ನಂತರ ತಮ್ಮ ತವರು ಜಿಲ್ಲೆಯ ಶಿವಮೊಗ್ಗದ ತಮ್ಮ ಸ್ವಂತ ಊರಾದ ಹೊಸನಗರ ತಾಲ್ಲೂಕಿಗೆ ಸ್ಥಳಾಂತರಗೊಂಡರು. ಆದರೆ ಅಲ್ಲಿ ಇಂಟೆರ್‌ ನೆಟ್ ಸಂಪರ್ಕ ಸರಿಯಿಲ್ಲದ ಕಾರಣದಿಂದಾಗಿ ಬಹಳ ತೊಂದರೆ ಎದುರಿಸಬೇಕಾಯಿತು. ಅವರಿಗೆ ಸರಿಯಾಗಿ ದೂರವಾಣಿ ಕರೆಗಳನ್ನೂ ಸಹ ಮಾಡುವುದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಅವರು ತಮ್ಮ ಕೆಲಸದ ಸ್ಥಳದಲ್ಲಿ ಬೂಸ್ಟರ್ ಕೇಬಲ್ ಅಳವಡಿಸುವುದು ಸೇರಿದಂತೆ ಹಲವು ಪ್ರಯತ್ನಗಳನ್ನು ಕೈಗೊಂಡರು. ಆದರೆ ಯಾವುದೂ ಫಲಕೊಡಲಿಲ್ಲ. ಹಾಗಾಗಿ ಆಕೆ ಕೇವಲ ಇಂಟೆರ್‌ ನೆಟ್ ಸಂಪರ್ಕಕ್ಕಾಗಿ ಪ್ರತಿ ದಿನ ಒಂದು ಕಿ.ಮೀ. ದೂರದ ಒಂದು ಜಮೀನಿನ ಬಳಿ ಹೋಗಿ ಒಂದು ಮರದ ಕೆಳಗೆ ಒಂದು ಟೆಂಟ್ ಸಿದ್ಧಪಡಿಸಿಕೊಂಡು ಅಲ್ಲಿ ಕುಳಿತು ಕೆಲಸ ಮಾಡಬೇಕಾಗುತಿತ್ತು.

ಇತ್ತೀಚೆಗೆ ರಾಜ್ಯದ ಆರು ಜಿಲ್ಲೆಗಳಲ್ಲಿ ಕೇಂದ್ರದ ರಾಜ್ಯ ಐಟಿ ಸಚಿವರಾದ ರಾಜೀವ್ ಚಂದ್ರಶೇಖರ್ ಅವರ ಮುಂದಾಳತ್ವದಲ್ಲಿ ಜನ ಆಶೀರ್ವಾದ ಯಾತ್ರೆಯನ್ನು ಕೈಗೊಳ್ಳಲಾಯಿತು. ಆಗ ಯಾತ್ರೆ ಕೈಗೊಂಡ ಎಲ್ಲಾ ಜಿಲ್ಲೆಗಳಿಂದಲೂ ಬಂದ ಪ್ರಮುಖ ಬೇಡಿಕೆ ಏನೆಂದರೆ ಇಂಟೆರ್‌ ನೆಟ್ ಸಂಪರ್ಕ ಸುಧಾರಣೆ.

ಈ ಹಿನ್ನೆಲೆಯಲ್ಲಿ ಮಾನ್ಯ ಸಚಿವರು ಇಂಟೆರ್‌ ನೆಟ್ ಸಂಪರ್ಕ ಸುಧಾರಣೆಯ ಸಂಬಂಧ ಕಾರ್ಯಪಡೆಯೊಂದನ್ನು ರಚಿಸಲಾಗುವುದು. ಈ ಕಾರ್ಯಪಡೆಯು ಪ್ರತಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸುವುದು ಎಂದು ತಿಳಿಸಿದ್ದರು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ನ್ಯಾಷನಲ್ ಇಂಟೆರ್‌ ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ (ಎನ್‌ಐಎಕ್ಸ್ಐ) ಮತ್ತು ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾದ (ಎಸ್‌ಟಿಪಿಐ) ಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ಈ ಕಾರ್ಯಪಡೆಯ ಕುರಿತು ಮಾಹಿತಿ ನೀಡಿರುವ ಸಚಿವರು ಈ ಕಾರ್ಯಪಡೆ ಅತೀ ಶೀಘ್ರದಲ್ಲೇ ಈ ಸಂಬಂಧ ಜಿಲ್ಲೆಗಳಿಗೆ ಭೇಟಿ ನೀಡಿ ಕೆಲಸವನ್ನು ಆರಂಭಿಸಲಿದೆ,” ಎಂದು ತಿಳಿಸಿದ್ದಾರೆ. ಈ ಕಾರ್ಯಪಡೆ ತಂಡ, ಜನರನ್ನೂ ಸಹ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ ನಂತರ, ಸಂಬಂಧಪಟ್ಟ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸುತ್ತದೆ,” ಎಂದು ತಿಳಿಸಿದ್ದಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key  words: State government- effort –improve- Internet connectivity – districts.