ಬೆಂಗಳೂರು:ಜೂ-18: 4ನೇ ಶನಿವಾರದ ರಜೆ ಕೊಡದಿರುವುದು ಹಾಗೂ ಔರಾದ್ಕರ್ ಸಮಿತಿ ವರದಿ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡದಿದ್ದಕ್ಕೆ ಆಕ್ರೋಶಗೊಂಡಿದ್ದ ಪೊಲೀಸರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ಕೊಟ್ಟಿದೆ. ಎಸ್ಸಿ-ಎಸ್ಟಿ ಮೀಸಲಾತಿ ವಿವಾದದಿಂದಾಗಿ 2 ವರ್ಷದಿಂದ ಸ್ಥಗಿತಗೊಂಡಿದ್ದ ಮುಂಬಡ್ತಿ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಪೊಲೀಸ್ ಇಲಾಖೆಯಲ್ಲಿ ಖಾಲಿ ಉಳಿದಿರುವ 4442 ಹುದ್ದೆಗಳು ಮುಂಬಡ್ತಿ ಮುಖಾಂತರ ಭರ್ತಿ ಮಾಡಲು ಸರ್ಕಾರ ಅನುಮತಿ ಕೊಟ್ಟಿದೆ. ಪೊಲೀಸ್ ಇಲಾಖೆಯಲ್ಲಿ 2017ರಲ್ಲಿ ಬಡ್ತಿ ನೀಡಲಾಗಿತ್ತು. ಎಸ್ಸಿ-ಎಸ್ಟಿ ಮೀಸಲಾತಿ ವಿವಾದ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದರಿಂದ ಬಡ್ತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. ಹೀಗಾಗಿ 2018ರಲ್ಲಿ ಯಾರಿಗೂ ಬಡ್ತಿ ಸಿಕ್ಕಿರಲಿಲ್ಲ.
ಬಡ್ತಿ ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರ ಎಲ್ಲ ಇಲಾಖೆಗಳಿಗೆ ಆದೇಶ ಹೊರಡಿಸಿದೆ. ಅದರಂತೆ ಪೊಲೀಸ್ ಇಲಾಖೆಯಲ್ಲಿ ಬಡ್ತಿ ಪ್ರಕ್ರಿಯೆ ಶುರುವಾಗಿದ್ದು, ಈಗಾಗಲೇ ಆಯಾ ಘಟಕಗಳ ಎಲ್ಲ ವೃಂದದ ಅಧಿಕಾರಿ ಮತ್ತು ಸಿಬ್ಬಂದಿ ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸಲಾಗಿದೆ. ಸೇವಾ ಹಿರಿತನ ಆಧಾರದ ಮೇಲೆ 4442 ಸಿಬ್ಬಂದಿಗೆ ಮುಂಬಡ್ತಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಆದೇಶ ಹೊರಡಿಸಿದ್ದಾರೆ. ಈಗ ಮುಂಬಡ್ತಿ ಪಡೆಯುತ್ತಿರುವ 4442 ಮಂದಿ ಪೈಕಿ 2142 ಹೆಡ್ ಕಾನ್ಸ್ ಟೇಬಲ್ಗಳಿಗೆ ಬಡ್ತಿ ಸಿಗಲಿದೆ. ಉಳಿದಂತೆ 1221 ಸಹಾಯಕ ಸಬ್ ಇನ್ಸ್ಪೆಕ್ಟರ್ಗಳು ಎಸ್ಐ ಹುದ್ದೆಗೆ ಬಡ್ತಿ ಪಡೆಯಲಿದ್ದಾರೆ.
ಒಂದೆರಡು ದಿನದಲ್ಲಿ ಬಡ್ತಿ: ಖಾಲಿ ಉಳಿದಿರುವ ಹುದ್ದೆಗಳಿಗೆ ನೇಮಕಾತಿ ಪ್ರಾಧಿಕಾರಿಗಳು ಶೀಘ್ರವಾಗಿ ಮುಂಬಡ್ತಿ ಕೊಟ್ಟು ಪಾಲನಾ ವರದಿಯನ್ನು ಪ್ರಧಾನ ಕಚೇರಿಗೆ ಕಳುಹಿಸುವುದು ಕಡ್ಡಾಯ ಎಂದು ಡಿಜಿಪಿ ಲಿಖಿತ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಒಂದೆರಡು ದಿನದಲ್ಲಿ ಬಡ್ತಿ ಈ ಕಾರ್ಯ ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಲವರ ಕನಸು ನನಸಾಗಲಿಲ್ಲ!: ಎಸ್ಸಿ-ಎಸ್ಟಿ ಮೀಸಲಾತಿ ವಿವಾದದ ಹಿನ್ನೆಲೆಯಲ್ಲಿ 2 ವರ್ಷ ಬಡ್ತಿ ಪ್ರಕ್ರಿಯೆ ಸ್ಥಗಿತ ವಾಗಿದ್ದರಿಂದ ಬಡ್ತಿ ಪಡೆದು ನಿವೃತ್ತಿಯಾಗಬೇಕು ಎಂದು ಕೊಂಡಿದ್ದ ಹಲವು ಪೊಲೀಸರ ಕನಸು ಈಡೇರಲೇ ಇಲ್ಲ. ಪೊಲೀಸ್ ಇಲಾಖೆಯಲ್ಲಿ ಪ್ರತಿ ತಿಂಗಳು ಅಂದಾಜು 200 ಮಂದಿ ನಿವೃತ್ತಿ ಹೊಂದುತ್ತಾರೆ. ಇದರಲ್ಲಿ ಶೇ.10 ಮಂದಿಗೆ ಬಡ್ತಿ ಸಿಗುತ್ತಿತ್ತು. ಮುಖ್ಯಪೇದೆಯಿಂದ ಎಸ್ಐ ಅಥವಾ ಇನ್ಸ್ಪೆಕ್ಟರ್ನಿಂದ ಡಿವೈಎಸ್ಪಿ ಹುದ್ದೆಗೆ ಬಡ್ತಿ ಹೊಂದಿ ನಿವೃತ್ತಿಯಾಗುವ ಕನಸು ಕಂಡಿದ್ದವರು ತಾವಿದ್ದ ಹುದ್ದೆ ಯಿಂದಲೇ ನಿವೃತ್ತಿ ಪಡೆದಿದ್ದರು.
ಹಿಂಬಡ್ತಿಯಾಗಿದ್ದವರಿಗೆ ಮುಂಬಡ್ತಿ
ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಹಿಂಬಡ್ತಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ಮತ್ತೆ ಮುಂಬಡ್ತಿ ನೀಡುವ ಪ್ರಕ್ರಿಯೆಯೂ ಪ್ರತ್ಯೇಕವಾಗಿ ನಡೆಯುತ್ತಿದ್ದು, ಅದರ ಜತೆಯಲ್ಲೇ ಸಾಮಾನ್ಯ ಬಡ್ತಿ ಪ್ರಕ್ರಿಯೆಗೂ ಚಾಲನೆ ದೊರೆತಿದೆ. ಡಿಡಬ್ಲ್ಯುಡಿ ಇಲಾಖೆ ಸೇರಿ ಕೆಲ ಇಲಾಖೆಗಳಲ್ಲಿ ಈಗಾಗಲೇ ಹಿಂಬಡ್ತಿಯಾಗಿದ್ದವರಿಗೆ ಮತ್ತೆ ಮುಂಬಡ್ತಿ ಕೊಡಲಾಗಿದೆ. ಉಳಿದ ಇಲಾಖೆಗಳಲ್ಲಿ ಜೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದು, ಮುಂಬಡ್ತಿ ಪ್ರಕ್ರಿಯೆ ನಡೆಯುತ್ತಿದೆ.
19 ಐಪಿಎಸ್ ಅಧಿಕಾರಿಗಳ ವರ್ಗ
ಬೆಂಗಳೂರು: ಬೆಂಗಳೂರು ನಗರದ 34ನೇ ಪೊಲೀಸ್ ಕಮಿಷನರ್ ಆಗಿ ಅಲೋಕ್ಕುಮಾರ್ ನೇಮಕವಾಗಿದ್ದು, ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದರು.
ಭಾನುವಾರ ರಾತ್ರೋರಾತ್ರಿ ಆದೇಶ ಹೊರಡಿಸಿದ ಸರ್ಕಾರ, ಪೊಲೀಸ್ ಕಮಿಷನರ್ ಆಗಿದ್ದ ಟಿ. ಸುನೀಲ್ಕುಮಾರ್ ಅವರನ್ನು ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರನ್ನಾಗಿ ಮಾಡಿದೆ. ಐಎಂಎ ಧೋಖಾ ಪ್ರಕರಣದ ತನಿಖೆಗಾಗಿ ನೇಮಿಸಿರುವ ಎಸ್ಐಟಿ ಮುಖ್ಯಸ್ಥರಾದ ಡಾ.ಬಿ.ಆರ್. ರವಿಕಾಂತೇಗೌಡ ಅವರನ್ನು ಅಲೋಕ್ಕುಮಾರ್ ಅವರಿಂದ ತೆರವಾಗಿದ್ದ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರ ಹುದ್ದೆಗೆ, ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಉಮೇಶ್ಕುಮಾರ್ ಅವರನ್ನು ನೇಮಿಸಿದೆ. ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಿದ್ದು, ಇವರ ಜಾಗಕ್ಕೆ ಬಿ. ರಮೇಶ್ ಅವರನ್ನ ನೇಮಿಸಿದೆ.
ವರ್ಗಾವಣೆಗೊಂಡವರು: ಅಮೃತ್ ಪಾಲ್- ಐಜಿಪಿ, ಪೂರ್ವ ವಲಯ (ದಾವಣಗೆರೆ); ಉಮೇಶ್ಕುಮಾರ್- ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ(ಪಶ್ಚಿಮ); ಬಿ.ಕೆ. ಸಿಂಗ್- ಕಾರ್ಯದರ್ಶಿ, ಗೃಹ ಇಲಾಖೆ; ಸೌಮೆಂದು ಮುಖರ್ಜಿ-ಐಜಿಪಿ, ಆಂತರಿಕ ಭದ್ರತಾ ವಿಭಾಗ; ರಾಘವೇಂದ್ರ ಸುಹಾಸ್-ಐಜಿಪಿ, ದಕ್ಷಿಣ ವಲಯ(ಮೈಸೂರು); ಅಮಿತ್ ಸಿಂಗ್-ಎಸ್ಪಿ, ಹೋಂ ಗಾರ್ಡ್ ಮತ್ತು ಸಿವಿಲ್ ಡಿಫೆನ್ಸ್ ಅಕಾಡೆಮಿ; ಡಾ.ರಾಮ್ ವಿಲಾಸ್ ಸೆಪಟ್-ಎಸ್ಪಿ, ಎಸಿಬಿ(ಬೆಂಗಳೂರು); ಎಂ.ಎ.ಅನುಚೇತ್- ಎಸ್ಪಿ, ರೈಲ್ವೆ ಪೊಲೀಸ್; ಬಿ. ರಮೇಶ್- ಡಿಸಿಪಿ, ಪಶ್ಚಿಮ ವಿಭಾಗ(ಬೆಂಗಳೂರು); ಡಾ.ಭೀಮಾ ಶಂಕರ್ ಗುಳೇದ್- ಡಿಸಿಪಿ, ಈಶಾನ್ಯ ವಿಭಾಗ(ಬೆಂಗಳೂರು); ಸಿ.ಬಿ.ರಿಷ್ಯಂತ್- ಎಸ್ಪಿ, ಮೈಸೂರು ಜಿಲ್ಲೆ; ಎಂ.ಎಸ್. ಮೊಹಮ್ಮದ್ ಸುಚೇತ್- ಎಸ್ಪಿ, ಕೆಜಿಎಫ್; ಟಿ.ಪಿ.ಶಿವಕುಮಾರ್-ಎಸ್ಪಿ, ಬೆಂ.ಗ್ರಾಮಾಂತರ; ಎನ್. ವಿಷ್ಣುವರ್ಧನ್- ಡಿಸಿಪಿ, ಆಡಳಿತ ಬೆಂಗಳೂರು ಕಮಿಷನರ್; ಕಲಾ ಕೃಷ್ಣಮೂರ್ತಿ- ನಿರ್ದೇಶಕಿ, ವಿಧಿವಿಜ್ಞಾನ ಪ್ರಯೋಗಾಲಯ.
ಬಿಡಿಎ ಆಯುಕ್ತರ ಎತ್ತಂಗಡಿ
ಬೆಂಗಳೂರು: ಬಿಡಿಎ ಅಧ್ಯಕ್ಷ ಹಾಗೂ ಆಯುಕ್ತರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಆಯುಕ್ತರ ವರ್ಗಾವಣೆಯೊಂದಿಗೆ ತೆರೆ ಬಿದ್ದಿದ್ದು, ಆಯುಕ್ತರಾಗಿ ಡಾ.ಎನ್. ಮಂಜುಳಾ ಅವರನ್ನು ನೇಮಕ ಮಾಡುವುದರೊಂದಿಗೆ ಎಂಟು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆಯುಕ್ತರಾಗಿದ್ದ ರಾಕೇಶ್ಸಿಂಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಪ್ರಭಾರ ನೀಡುವ ಮೂಲಕ ಈಗಲೂ ಮೂರು ಹುದ್ದೆಗಳಲ್ಲಿ ಮುಂದುವರಿಸಲಾಗಿದೆ. ಯಾರು? ಎಲ್ಲಿಗೆ ವರ್ಗ?: ಪಿ. ರವಿ
ಕುಮಾರ್- ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ; ಮಹೇಂದ್ರ ಜೈನ್- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ (ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯ ಪ್ರಭಾರ). ಬಿ.ಎಚ್. ಅನಿಲ್ಕುಮಾರ್- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ (ಪ್ರಭಾರ ಎಸಿಎಸ್ ಆಹಾರ ಮತ್ತು ನಾಗರಿಕ ಸರಬರಾಜು); ಡಾ. ಎನ್. ಮಂಜುಳಾ-ಪ್ರಭಾರ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ; ಪ್ರಿಯಾಂಕ ಮೇರಿ ಪ್ರಾನ್ಸೀಸ್- ನಿರ್ದೇಶಕರು, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ; ಎಸ್.ಎಸ್. ನಕುಲ್- ಜಿಲ್ಲಾಧಿಕಾರಿ ಬಳ್ಳಾರಿ; ಡಾ.ವಿ.ರಾಮ ಪ್ರಶಾಂತ್ ಮನೋಹರ್- ಆಯುಕ್ತರು, ಉದ್ಯೋಗ ಮತ್ತು ತರಬೇತಿ; ಜಿ.ಸಿ. ವೃಷಬೇಂದ್ರಮೂರ್ತಿ-ಆಯುಕ್ತ, ರೇಷೆ ಇಲಾಖೆ; ಕೆ.ಯಾಲಕ್ಕಿಗೌಡ- ಮಂಡ್ಯ ಜಿಪಂ ಸಿಇಒ.
ಕೃಪೆ:ವಿಜಯವಾಣಿ