ಮೈಸೂರು, ಮೇ,4,2019(www.justkannada.in): ರೈತರು ಮತ್ತಷ್ಟು ಕಷ್ಟಕ್ಕೆ ಒಳಗಾಗಿದ್ದರೂ ರಾಜ್ಯ ಸರ್ಕಾರ ರೈತರ ಸಾಲಮನ್ನಾ ಸರಿಯಾಗಿ ಮಾಡಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ರೈತರಿಗೆ ನೀಡಿದ ಬೇಡಿಕೆಗಳ ಈಡೇರದ ಹಿನ್ನಲೆ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಮೈಸೂರಿನ ಗನ್ ಹೌಸ್ ನಲ್ಲಿರುವ ಕುವೆಂಪು ಉದ್ಯಾನವನದಲ್ಲಿ ತುರ್ತು ಸಭೆ ನಡೆಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದರ ಕುರಿತು ಚರ್ಚೆ ನಡೆಸಲಾಯಿತು.
ಸಭೆ ನಂತರ ಅಲ್ಲೆ ರಾಜ್ಯ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ,ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆ ಕೂಗಿ ಕೂಡಲೇ ರೈತರ ಸಾಲಾಮನ್ನಾ ಮಾಡುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್, ಯಾವುದೇ ಸರ್ಕಾರ ಬಂದ್ರು ರೈತರ ಸಮಸ್ಯೆ ಕೇಳುತ್ತಿಲ್ಲ. ರೈತರು ಮೊದಲು ಎಚ್ಚೆತ್ತುಕೊಳ್ಳಬೇಕು. ರೈತರು ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು. ಇಲ್ಲವಾದರೆ ಸರ್ಕಾರಗಳು ರೈತರನ್ನ ಕಡೆಗಣಿಸುತ್ತವೆ ಎಂದು ರೈತರಿಗೆ ಕಿವಿಮಾತು ಹೇಳಿದರು.
ರಾಜ್ಯ ಸರ್ಕಾರ ಸರಿಯಾಗಿ ಸಾಲಮನ್ನಾ ಮಾಡಿಲ್ಲ. ರೈತರ ಕಬ್ಬು, ಭತ್ತದ ಹಣವನ್ನ ಬ್ಯಾಂಕುಗಳು ಸಾಲಕ್ಕಾಗಿ ಜಮಾ ಮಾಡಿಕೊಳ್ಳುತ್ತಿದ್ದಾವೆ. ಯಾವುದೆ ಬ್ಯಾಂಕುಗಳು ಸರ್ಕಾರದ ನೀತಿಯನ್ನ ಪಾಲಿಸುತ್ತಿಲ್ಲ. ರೈತರ ಕಬ್ಬುಗೆ ಎಫ್ ಆರ್ ಪಿ ದರ ಸಿಗುತ್ತಿಲ್ಲ. ರಾಜ್ಯದ ವಿವಿಧ ಕಾರ್ಖಾನೆಗಳಿಂದ 4 ಸಾವಿರ ಕೋಟಿ ರೂ. ಹಣ ರೈತರಿಗೆ ಬರಬೇಕು. ಹಣ ಬರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಬರಗಾಲ ಬೇರೆ ಬಂದಿದೆ. ರೈತರು ಮತ್ತಷ್ಟು ಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಹಣ ಕೊಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
Key words: state government -not done – Debt relief-Kurubur Shanthakumar – outrage – protest