ಜೇಬು ಭರ್ತಿಗೆ ಲೋಕೋಪಯೋಗಿ ಬಡ್ತಿ?

ಬೆಂಗಳೂರು:ಜೂ-27: ಲೋಕೋಪಯೋಗಿ ಇಲಾಖೆಯ 270 ಕಾರ್ಯಪಾಲಕ ಇಂಜಿನಿಯರ್​ಗಳಿಗೆ ಒಂದು ತಿಂಗಳಿನಿಂದ ಸ್ಥಳ ನಿಯುಕ್ತಿ ಇಲ್ಲದೆ, ಖಾಲಿ ಕುಳಿತಿದ್ದಾರೆ. ಹೀಗಿರುವಾಗ ಮತ್ತೆ 325 ಸಹಾಯಕ ಕಾರ್ಯಪಾಲಕ ಇಂಜಿನಿಯರ್​ಗಳಿಗೆ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಬಡ್ತಿ ನೀಡಲು ಸರ್ಕಾರ ಮುಂದಾಗಿದ್ದು, ಹಣ ಹರಿದಾಟದ ಶಂಕೆ ವ್ಯಕ್ತವಾಗಿದೆ.

ಗುರುವಾರ ಇಲಾಖಾ ಪದೋನ್ನತಿ ಸಭೆ ನಡೆಯಲಿದ್ದು, ಬಡ್ತಿಗೆ ಅರ್ಹರಾಗುವವರ ಆಯ್ಕೆ ನಡೆದು ಸರ್ಕಾರಕ್ಕೆ ಶಿಫಾರಸಾಗಲಿದೆ. ಇದೇ ವೇಳೆ ಕಾರ್ಯಪಾಲಕ ಇಂಜಿನಿಯರ್ ತರಾತುರಿ ಬಡ್ತಿ ವಿಚಾರದಲ್ಲಿ ಹಣದ ಹರಿದಾಟದ ಶಂಕೆ ವ್ಯಕ್ತವಾಗಿದೆ. ವಿಜಯವಾಣಿಗೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ‘ನನಗೆ ಕರೆ ಬಂದಿದ್ದು, 6 ಲಕ್ಷ ರೂ. ರೆಡಿ ಮಾಡಿಕೊಳ್ಳಿ ಬಡ್ತಿ ಕೊಡಿಸುತ್ತೇವೆಂದು ಕೋರಿಕೆ ಇಟ್ಟರು. ನಾನು ಸಾಧ್ಯವಿಲ್ಲ ಎಂದೆ. ಆ ಹಣವನ್ನು ಬಡ್ತಿ ಕೊಡಿಸುವ ಮಂದಿ ಅಧಿಕಾರಿಗಳಿಗೆ ಕೊಡುತ್ತಾರೋ, ಮಂತ್ರಿಗಳಿಗೆ ಕೊಡುತ್ತಾರೋ ಗೊತ್ತಿಲ್ಲ’ ಎಂದರು. ‘ಇಲಾಖೆ ಪದೋನ್ನತಿ ಸಭೆಯಲ್ಲಿ ಹೆಸರು ಪರಿಗಣಿಸಲು 3 ಲಕ್ಷ ರೂ., ಬಳಿಕ ಇಲಾಖೆ (ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ) ಅನುಸಾರ 10ರಿಂದ 15 ಲಕ್ಷ ರೂ.ಗೆ ಬೇಡಿಕೆ ಇಡಲಾಗುತ್ತಿದೆ. ಜಿಲ್ಲೆ ಮಟ್ಟದಿಂದಲೇ ಬಡ್ತಿ ಕೊಡಿಸಲು ಕೆಲವರು ನಿಯೋಜನೆಗೊಂಡಿದ್ದಾರೆ’ ಎಂದು ಇಂಜಿನಿಯರ್ ಒಬ್ಬರು ವಿವರಿಸಿದರು.

ಇದೇ ರೀತಿ ಕೆಲವು ಇಂಜಿನಿಯರ್​ಗಳನ್ನು ವಿಜಯವಾಣಿ ಮಾತಿಗೆಳೆದಾಗ, ಹಣದ ಹರಿದಾಟದ ಬಗ್ಗೆ ಮಾಹಿತಿ ನೀಡಿದರು. ಕೆಲವು ಬಡ್ತಿ ಕೊಡಿಸುವುದಕ್ಕಾಗಿಯೇ ದಲ್ಲಾಳಿಗಳ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಮಾಹಿತಿ ಮತ್ತು ಆಡಿಯೋ ದಾಖಲೆಗಳನ್ನು ನೀಡಿದರು.

ಅನುಮಾನವೇಕೆ?: ಈ ತರಾತುರಿ ಬಡ್ತಿ ಮೇಲೆ ಹಲವು ಸಂಶಯ ಮೂಡಿದೆ. ಇಂಜಿನಿಯರ್​ಗಳಿಗೆ ಮಾತೃಸಂಸ್ಥೆಯಾದ ಲೋಕೋಪಯೋಗಿ ಇಲಾಖೆ ಸೇರಿ, ನಗರಾಭಿವೃದ್ಧಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗಳಲ್ಲಿ ಕಾರ್ಯಪಾಲಕ ಇಂಜಿನಿಯರ್ ಒಟ್ಟು ಹುದ್ದೆ 520. ಈಗಾಗಲೇ 470 ಮಂದಿ ಕಾರ್ಯನಿರತರಾಗಿದ್ದಾರೆ. ಇದರಲ್ಲಿ 270 ಮಂದಿ ಒಂದು ತಿಂಗಳಿಂದ ಸ್ಥಳ ನಿಯೋಜನೆ ನಿರೀಕ್ಷಣೆಯಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಹೊಸದಾಗಿ 325 ಮಂದಿಗೆ ಯಾವ ಆಧಾರದಲ್ಲಿ ಬಡ್ತಿ ನೀಡಲಾಗುತ್ತಿದೆ? ಅವರನ್ನು ಬಡ್ತಿ ನೀಡಿದ ಬಳಿಕ ಎಲ್ಲಿ ನಿಯೋಜಿಸಲಾಗುತ್ತದೆ? ಎಂಬುದು ಪ್ರಶ್ನಾರ್ಹ.

ಒಂದು ವಾರದ ಹಿಂದೆ ಲೋಕೋಪಯೋಗಿ ಇಲಾಖೆಯು ನಗರಾಭಿವೃದ್ಧಿ ಇಲಾಖೆಗೆ ಕಳಿಸಿದ್ದ 15 ಕಾರ್ಯಪಾಲಕ ಇಂಜಿನಿಯರ್​ಗಳನ್ನು ಮುಲಾಜಿಲ್ಲದೆ ಆ ಇಲಾಖೆ ವಾಪಾಸು ಕಳಿಸಿದೆ. ತನ್ನಲ್ಲಿ ಹುದ್ದೆಯೇ ಇಲ್ಲ, ಈ ಇಂಜಿನಿಯರ್​ಗಳ ಸೇವೆ ಅಗತ್ಯವಿಲ್ಲ ಎಂದಿದೆ. ಇದೇ ರೀತಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕೂಡ ವಾಪಸ್ ಕಳಿಸುತ್ತಿದೆ. ಹೀಗಿರುವಾಗ ಸ್ಥಳವೇ ಇಲ್ಲದೆ ಬಡ್ತಿ ಏತಕ್ಕಾಗಿ ಎಂಬ ಪ್ರಶ್ನೆ ಎದ್ದಿದೆ.

ಇಂದು ಪದೋನ್ನತಿ ಸಭೆ

ಜೂನ್ 20ರಂದು ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅವರಿಂದ ಬಡ್ತಿಗೆ ಮಾಹಿತಿ ಒದಗಿಸಲು ಅಧೀನ ಕಚೇರಿಗೆ ನಿರ್ದೇಶನ ಬಂದಿದೆ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೃಂದದಿಂದ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಪದೋನ್ನತಿ ನೀಡಲು ಪರಿಶೀಲಿಸಲಾಗುತ್ತಿದ್ದು, ಸೇವಾ ವಿವರ, ಇತ್ತೀಚಿನ ಇಲಾಖಾ ವಿಚಾರಣೆ ಮಾಹಿತಿ ಕಳಿಸುವಂತೆ ನಿರ್ದೇಶನ ನೀಡಲಾಗಿತ್ತು. ಇದೀಗ 1 ವಾರದೊಳಗೆ ದಾಖಲೆ ಪರಿಶೀಲನೆ ನಡೆಸಿ ಗುರುವಾರ ಇಲಾಖಾ ಪದೋನ್ನತಿ ಸಭೆ ಕರೆಯಲಾಗಿದೆ.

ಎಸ್ಸಿ-ಎಸ್ಟಿ ಕಾರ್ಯಪಾಲಕ ಇಂಜಿನಿಯರ್​ಗಳಿಗೆ ಸ್ಥಳ ನೀಡದೆ ಸತಾಯಿಸಲಾಗುತ್ತಿದೆ. ಮತ್ತೆ ಮುನ್ನೂರಕ್ಕೂ ಹೆಚ್ಚು ಜನರಿಗೆ ಬಡ್ತಿ ನೀಡಲು ಹೊರಟಿರುವುದು ಅನುಮಾನ ತರಿಸಿದೆ. ವಿಟಮಿನ್ ‘ಎಂ’ ಇಲ್ಲದೆ ಇದೆಲ್ಲ ಸಾಧ್ಯವೇ ಇಲ್ಲ. ಹಣಕಾಸಿನ ವ್ಯವಹಾರ ನಡೆಯುತ್ತಿರುವುದು ಸ್ಪಷ್ಟ. ಮೊದಲು ದಲಿತ ವಿರೋಧಿ ನೀತಿ ಬಿಟ್ಟು ಸ್ಥಳಕ್ಕೆ ಕಾಯುತ್ತಿರುವವರಿಗೆ ನಿಯೋಜನೆ ಮಾಡಲಿ.

| ಚಂದ್ರಶೇಖರ್ ಕಾನೂನು ಸಲಹೆಗಾರ, ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ

ಬಡ್ತಿ ಆದ್ರೆ ಮುಂದೇನು?

ಒಂದು ವೇಳೆ ಸರ್ಕಾರ ಹಠಕ್ಕೆ ಬಿದ್ದು 325 ಮಂದಿಗೆ ಬಡ್ತಿ ನೀಡಿದ್ದೇ ಆದಲ್ಲಿ ಬಡ್ತಿ ಪಡೆದವರಿಗೆ ಸ್ಥಳಾವಕಾಶ ಇರುವುದಿಲ್ಲ. ಲೋಕೋಪಯೋಗಿ ಇಲಾಖೆಯಿಂದ ಬೇರೆ ಇಲಾಖೆಗೆ ಕಳಿಸಿದರೆ ಅಲ್ಲೂ ಇವರನ್ನು ಇಟ್ಟುಕೊಳ್ಳುವುದಿಲ್ಲ. ಹೀಗಾಗಿ ಇಂಜಿನಿಯರ್​ಗಳ ಜ್ಞಾನವೂ ಸರ್ಕಾರಕ್ಕೆ ನಷ್ಟವಾಗುತ್ತದೆ ಮತ್ತು ಅವರನ್ನು ಮನೆಯಲ್ಲಿ ಕೂರಿಸಿ ಸಂಬಳ ಕೊಡಬೇಕಾಗುತ್ತದೆ. ಲೋಕೋಪಯೋಗಿ ಇಲಾಖೆಯು ಯಾವುದೇ ಹಂತದ ಇಂಜಿನಿಯರ್​ಗಳನ್ನು ವಿವಿಧ ಇಲಾಖೆಗೆ ನಿಯೋಜಿಸುವ ಮುನ್ನ ಆ ಇಲಾಖೆ ಜತೆ ಕಡ್ಡಾಯವಾಗಿ ಸಮಾಲೋಚನೆ ಮಾಡಬೇಕೆಂದಿದೆ. ಆದರೂ ಲೋಕೋಪಯೋಗಿ ಇಲಾಖೆ ತನಗಿಷ್ಟ ಬಂದಂತೆ ಬೇರೆ ಬೇರೆ ಇಲಾಖೆಗೆ ಹುದ್ದೆ ಇಲ್ಲದಿದ್ದರೂ ಸ್ಥಳ ನಿಯುಕ್ತಿ ಮಾಡುತ್ತಿರುವ ಬೆಳವಣಿಗೆಗಳು ಇಲಾಖೆ ನಡುವಿನ ಅಸಮಾಧಾನಕ್ಕೂ ಕಾರಣವಾಗಿದೆ.
ಕೃಪೆ:ವಿಜಯವಾಣಿ

ಜೇಬು ಭರ್ತಿಗೆ ಲೋಕೋಪಯೋಗಿ ಬಡ್ತಿ?
state-government-planning-to-give-promotion-to-325-engineers-in-pwd-department