ಬೆಂಗಳೂರು:ಏ-4: ಕೊನೆಗೂ ಪಾಲಕರು ಮತ್ತು ಶಾಲಾ ವಿದ್ಯಾರ್ಥಿಗಳು ಸಂಭ್ರಮಿಸುವ ಕಾಲ ಬಂದಿದೆ. ಕಳೆದ ಮೂರು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಶಾಲಾ ಬ್ಯಾಗ್ ಹೊರೆ ಇಳಿಸುವ ವರದಿಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಇದರಿಂದಾಗಿ ಶಾಲಾ ಮಕ್ಕಳ ಬ್ಯಾಗ್ನ ಭಾರ ಇಳಿಯಲಿದೆ. 2016-17ನೇ ಸಾಲಿನಲ್ಲಿ ಭಾರ ಇಳಿಸುವ ಬಗ್ಗೆ ತಜ್ಞರು ಸಮೀಕ್ಷೆ ಮಾಡಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (ಡಿಎಸ್ಇಆರ್ಟಿ)ಕ್ಕೆ ವರದಿ ನೀಡಿತ್ತು. ಈ ವರದಿ ರಾಜ್ಯ ಸರ್ಕಾರಕ್ಕೆ ತಲುಪಿತ್ತು. ಆದರೆ, ಕಾರ್ಯರೂಪಕ್ಕೆ ಬಂದಿರಲಿಲ್ಲ.
ಈಗ ರಾಜ್ಯ ಸರ್ಕಾರ ತರಗತಿ ಆಧಾರದ ಮೇಲೆ ಬ್ಯಾಗ್ ತೂಕವನ್ನು ನಿಗದಿ ಮಾಡಿ 2019-20ನೇ ಸಾಲಿನಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ. ಹೀಗಾಗಿ ಈ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳು ಆರಾಮಾಗಿ ಶಾಲೆಗಳಿಗೆ ಹೋಗಬಹುದಾಗಿದೆ.
1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ತೂಕವನ್ನು ತರಗತಿಯ ಆಧಾರದ ಮೇಲೆ ನಿಗದಿ ಮಾಡಿದೆ. ವಿದ್ಯಾರ್ಥಿಯ ಬ್ಯಾಗ್ ದೇಹದ ಸರಾಸರಿ ತೂಕದ ಶೇ.10 ಮೀರದಂತೆ ಎಚ್ಚರವಹಿಸಿದೆ.
ಬ್ಯಾಗ್ ರಹಿತ ದಿನ: ಶಿಕ್ಷಣ ಇಲಾಖೆ ಬ್ಯಾಗ್ ರಹಿತ ದಿನ ಕುರಿತು ವಿವರಣೆ ನೀಡಿದೆ. ತಿಂಗಳಲ್ಲಿ ಮೂರನೇ ಶನಿವಾರ ಶಾಲೆಗಳು ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಬೇಕಿದೆ. ಆ ದಿನದಂದು ಮಕ್ಕಳಿಗೆ ಕ್ಷೇತ್ರ ಸಂಚಾರ, ವಾರ್ತಾಪತ್ರಿಕೆಗಳ ಚಟುವಟಿಕೆ, ಗಣಿತದ ವಿನೋದ, ಮಣ್ಣಿನಲ್ಲಿ ವಸ್ತು ತಯಾರಿಸುವುದು, ಚಿತ್ರಕಲೆ, ಭಕ್ತಿಗೀತೆಗಳನ್ನು ಕಲಿಸುವುದು, ಹಾಡಿಸುವುದು, ಕ್ರೀಡೆ, ಆಶುಭಾಷಣ, ಚರ್ಚಾಸ್ಪರ್ಧೆ ಸೇರಿ ಹಲವಾರು ಚಟುವಟಿಕೆ ನಡೆಸುವಂತೆ ಸೂಚಿಸಿದೆ.
ವರದಿ ನೀಡಿದ ಬಹಳ ವರ್ಷಗಳ ನಂತರ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ಮುಂದಾಗಿರುವುದು ಖುಷಿ ವಿಚಾರ. ಇದರಿಂದ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಲಿದೆ. ಇದು ಪರಿಪೂರ್ಣವಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕಿದೆ.
| ವಿ.ಪಿ.ನಿರಂಜನಾರಾಧ್ಯ, ಪುಸ್ತಕ, ಬ್ಯಾಗ್ ಹೊರೆ ಕಡಿಮೆ ಮಾಡುವ ತಂಡದ ಸದಸ್ಯ
ಬ್ಯಾಗ್ ತೂಕದ ಕುರಿತು ಸೂಚನೆಗಳು
ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂವರ್ಕ್ ನೀಡುವಂತಿಲ್ಲ
ವೇಳಾಪಟ್ಟಿಗೆ ಅನುಗುಣವಾಗಿ ಪಠ್ಯಪುಸ್ತಕ ತರುವಂತೆ ಸೂಚನೆ ನೀಡಬೇಕು
ಬ್ಯಾಗ್ ಹೊರೆಯಿಂದ ಆರೋಗ್ಯದ ಮೇಲಿನ ಪ್ರಭಾವ ಕುರಿತು ಅರಿವು ಮೂಡಿಸುವುದು
ಹುಗುರವಾದ ಬ್ಯಾಗ್ ಮತ್ತು ಇತರ ಸಾಮಗ್ರಿಗಳನ್ನು ಹೆಚ್ಚಾಗಿ ಬಳಸುವಂತೆ ಸೂಚನೆ
ಪುಸ್ತಕ ಇಟ್ಟುಕೊಳ್ಳಲು ಶಾಲೆಯಲ್ಲಿ ಅವಕಾಶ ಕಲ್ಪಿಸುವುದು
ಕುಡಿಯವ ನೀರಿಗಾಗಿ ಶುದ್ಧ ಘಟಕ ಸ್ಥಾಪಿಸುವುದು
ಕೃಪೆ:ವಿಜಯವಾಣಿ