ಬೆಂಗಳೂರು,ಮಾರ್ಚ್,25,2023(www.justkannada.in): ರಾಜ್ಯ ಸರ್ಕಾರ ಘೋಷಿಸಿರುವ ಪರಿಷ್ಕೃತ ಮೀಸಲಾತಿ ನೀತಿ ‘ಕನ್ನಡಿಯೊಳಗಿನ ಗಂಟು’ಅಷ್ಟೆ. ಚುನಾವಣೆಯಲ್ಲಿ ರಾಜಕೀಯ ಲಾಭದ ದುರುದ್ದೇಶದ ಈ ಮೀಸಲಾತಿ ನೀತಿಯಿಂದ ಯಾವ ಸಮುದಾಯಕ್ಕೂ ಲಾಭ ಇಲ್ಲ. ಇಂತಹ ಗಿಮಿಕ್ ಗಳಿಗೆ ಜನ ಬಲಿಯಾಗಬಾರದು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ರಾಜ್ಯ ಸರ್ಕಾರ ಘೋಷಿಸಿರುವ ಮೀಸಲಾತಿ ನೀತಿ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಹಿಂದುಳಿದ ಜಾತಿಗುಂಪಿನಲ್ಲಿದ್ದ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇಕಡಾ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಲಾಗಿದೆ. ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ನೀಡುವ ಮೂಲಕ ಸಮುದಾಯಗಳ ನಡುವೆ ವೈಮನಸ್ಸು ಬೆಳೆಯುವಂತೆ ಮಾಡುವುದು ಬಿಜೆಪಿಯ ದುರುದ್ದೇಶ ಎಂದು ಕಿಡಿಕಾರಿದರು.
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯ ಅನುಷ್ಠಾನ ಒಂದು ದೀರ್ಘ ಪ್ರಕ್ರಿಯೆ. ಇದಕ್ಕಾಗಿ ಸಂವಿಧಾನದ ಪರಿಚ್ಛೇದ 341ಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಈ ಬಗ್ಗೆ ಸಂಪುಟ ಕೈಗೊಂಡಿದ್ದ ತೀರ್ಮಾನವನ್ನು ಇಲ್ಲಿಯವರೆಗೆ ಕೇಂದ್ರ ಸರ್ಕಾರಕ್ಕೆ ಕಳಿಸದೆ ಇರುವುದು ರಾಜ್ಯ ಸರ್ಕಾರದ ಅಪ್ರಾಮಾಣಿಕತೆಗೆ ಸಾಕ್ಷಿ.
ಮುಸ್ಲಿಮರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗಿರುವ ಮೀಸಲಾತಿಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದರೂ ಇದು ಸುಲಭಸಾಧ್ಯ ಅಲ್ಲ. ಬೇರೆ ರಾಜ್ಯಗಳಲ್ಲಿಯೂ ಮುಸ್ಲಿಂಮರು ಇರುವ ಕಾರಣ ಒಂದು ರಾಜ್ಯದ ವ್ಯಾಪ್ತಿಯಲ್ಲಿ ಮೀಸಲಾತಿ ಮರುಹಂಚಿಕೆ ಮಾಡಲು ಸಾಧ್ಯ ಇಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
Key words: State Government- Reservation- Policy – Community- No Benefited-Siddaramaiah