ಬೆಂಗಳೂರು:ಜೂ-14: ರೈತರ ಕೃಷಿ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಬ್ಯಾಂಕ್ಗಳು ಮಹಾರಾಷ್ಟ್ರಕ್ಕೆ ಬೆಣ್ಣೆ ನೀಡಿದ್ದರೆ, ರಾಜ್ಯಕ್ಕೆ ಸುಣ್ಣ ನೀಡಿವೆ. ಮಹಾರಾಷ್ಟ್ರ ಮಾದರಿಯನ್ನೇ ರಾಜ್ಯಕ್ಕೂ ಅನ್ವಯಿಸುವಂತೆ ಸರ್ಕಾರ, ಬ್ಯಾಂಕರ್ಗಳ ಮುಂದೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.
ರಾಜ್ಯ ಸರ್ಕಾರ ಆರಂಭದಲ್ಲಿ ಸಾಲಮನ್ನಾ ಘೋಷಣೆ ಮಾಡಿದಾಗ 43 ಸಾವಿರ ಕೋಟಿ ರೂ. ಆಗಬಹುದೆಂದು ಅಂದಾಜು ಮಾಡಲಾಗಿತ್ತು. ಷರತ್ತುಗಳಿಂದಾಗಿ ಆ ಮೊತ್ತ 18ರಿಂದ 20 ಸಾವಿರ ಕೋಟಿ ರೂ.ಗೆ ಇಳಿದಿದೆ. ಮಹಾರಾಷ್ಟ್ರದಲ್ಲಿ ನೀಡಿರುವಂತೆ ರಿಯಾಯಿತಿಗೆ ಬ್ಯಾಂಕ್ಗಳು ಒಪ್ಪಿದರೆ ಇನ್ನಷ್ಟು ಕಡಿಮೆಯಾಗಲಿದೆ. ಒಂದು ಅವಧಿ ತೀರುವಳಿಗೆ ಬಡ್ಡಿ ಮನ್ನಾ ಮಾಡುವುದಾಗಿ ಬ್ಯಾಂಕ್ಗಳು ಬಾಕಿ ಉಳಿಸಿಕೊಂಡ ರೈತರಿಗೆ ಆಹ್ವಾನ ನೀಡಿದ್ದವು. ಸರ್ಕಾರವೇ ಬೆಳೆಸಾಲ ಮನ್ನಾಕ್ಕೆ ಮುಂದಾದ ನಂತರ ಈ ನಿರ್ಧಾರದಿಂದ ಬ್ಯಾಂಕ್ಗಳು ಹಿಂದೆ ಸರಿದವು. ಬಡ್ಡಿ ಮನ್ನಾ ಮಾಡಿದ್ದರೆ, ಸರ್ಕಾರಕ್ಕೆ ಸುಮಾರು 1,000 ಕೋಟಿ ರೂ.ಗೂ ಹೆಚ್ಚಿನ ಮೊತ್ತ ಉಳಿತಾಯವಾಗುತ್ತಿತ್ತು.
ಏನಿದು ಮಹಾ ಮಾದರಿ?
ಮಹಾರಾಷ್ಟ್ರ ಸರ್ಕಾರ ಕೂಡ ಸಾಲಮನ್ನಾ ಘೋಷಿಸಿದ್ದು, ಅಲ್ಲಿ ಎನ್ಪಿಎ ಸಾಲಕ್ಕೆ ಬ್ಯಾಂಕ್ಗಳು ಶೇ.25 ರಿಯಾಯಿತಿ ನೀಡಿವೆ. ಇದರಿಂದ ನೂರಾರು ಕೋಟಿ ರೂ. ಉಳಿತಾಯವಾಗಿದೆ. ಅದೇ ಮಾದರಿಯನ್ನು ಕರ್ನಾಟಕಕ್ಕೂ ಅನ್ವಯಿಸುವಂತೆ ಸರ್ಕಾರ ಒಂದು ವರ್ಷದಿಂದ ಪ್ರಯತ್ನ ಮಾಡುತ್ತಿದ್ದರೂ ಬ್ಯಾಂಕ್ಗಳು ಒಪ್ಪಿಲ್ಲ.
ರಾಜ್ಯದಲ್ಲಿ ಎಷ್ಟಿದೆ ಎನ್ಪಿಎ
ರಾಜ್ಯದಲ್ಲಿ ವಾಣಿಜ್ಯ ಬ್ಯಾಂಕ್ಗಳಲ್ಲಿ 1,08,136 ರೈತರ 965.7 ಕೋಟಿ ರೂ ಎನ್ಡಿಎ ಸಾಲ ಇದೆ. ಸರ್ಕಾರ ಆರಂಭದಲ್ಲಿ ಬ್ಯಾಂಕ್ಗಳಿಂದ ಮಾಹಿತಿ ಕೇಳುತ್ತಿದ್ದಂತೆ ಎನ್ಪಿಎ ಹೆಚ್ಚಿರುವುದಾಗಿ ತಿಳಿಸಿದ್ದವು. ಬೆಳೆಸಾಲ ಮಾತ್ರ ಮಾಹಿತಿ ಪಡೆದಾಗ ಈ ಮೊತ್ತ ಲಭ್ಯವಾಗಿದೆ. ಎನ್ಪಿಎ ಸಾಲವನ್ನು ಸಹ 2 ಲಕ್ಷ ರೂ. ತನಕ ತೀರಿಸಲು ಸರ್ಕಾರ ಸಿದ್ಧವಿದೆ. ಮಹಾರಾಷ್ಟ್ರ ರೀತಿಯಲ್ಲಿ ರಾಜ್ಯಕ್ಕೂ ಬ್ಯಾಂಕ್ಗಳು ನೆರವಾಗಿದ್ದರೆ ಎನ್ಪಿಎ ಸಾಲದಲ್ಲಿಯೇ 242 ಕೋಟಿ ರೂ. ಉಳಿತಾಯವಾಗುತ್ತಿತ್ತು. ಸಾಲಮನ್ನಾಕ್ಕಾಗಿ ಸರ್ಕಾರ ಬಹುತೇಕ ಇಲಾಖೆಗಳಲ್ಲಿ ಅನುದಾನ ಕಡಿತ ಮಾಡಿದೆ. ಬಜೆಟ್ನಲ್ಲಿಯೇ ಕಡಿತ ಮಾಡಿರುವ ಪರಿಣಾಮ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿವೆ. ಬಡ್ಡಿ ಮನ್ನಾ ಹಾಗೂ ರಿಯಾಯಿತಿಗೆ ಒಪ್ಪಿದ್ದರೆ ಸರ್ಕಾರದ ಆರ್ಥಿಕ ಸ್ಥಿತಿಗೆ ಅನುಕೂಲವಾಗುತ್ತಿತ್ತು ಎಂದು ಮೂಲಗಳು ಹೇಳುತ್ತವೆ.
ಹಣ ಬಿಡುಗಡೆ
ಸರ್ಕಾರ ಸಾಲಮನ್ನಾ ಘೋಷಣೆ ಮಾಡಿದಂತೆ 9 ತಿಂಗಳ ಅವಧಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳ ಬೆಲೆ ಸಾಲಮನ್ನಾ ಮಾಡಿದೆ. ಕೊನೇ ಕಂತಿನಲ್ಲಿ 7.49 ಲಕ್ಷ ರೈತರ ಸಾಲಮನ್ನಾಕ್ಕಾಗಿ 5,323 ಕೋಟಿ ರೂ. ಅನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿದೆ. ಇದಕ್ಕಾಗಿ 2018-19ನೇ ಸಾಲಿನ ಬಜೆಟ್ನಲ್ಲಿ 6,500 ಕೋಟಿ ರೂ., 2019-20ರ ಬಜೆಟ್ನಲ್ಲಿ ವಾಣಿಜ್ಯ ಬ್ಯಾಂಕ್ಗಳ ಸಾಲಕ್ಕೆ 6,500 ಕೋಟಿ ರೂ. ಹಾಗೂ ಸಹಕಾರ ವಲಯಕ್ಕೆ 6,150 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು.
ಇಂದು ಬ್ಯಾಂಕರ್ ಸಭೆ
ಸಾಲಮನ್ನಾ ಗೊಂದಲ ರ್ಚಚಿಸಲು ಶುಕ್ರವಾರ ಬ್ಯಾಂಕರ್ಗಳ ಸಭೆ ಕರೆಯಲಾಗಿದೆ. ಬ್ಯಾಂಕರ್ಗಳ ಸಮಿತಿ ಮುಂದೆ ಸರ್ಕಾರ ಮತ್ತೆ ಮಹಾರಾಷ್ಟ್ರದಂತೆ ಕರ್ನಾಟಕಕ್ಕೂ ನೆರವು ನೀಡುವಂತೆ ಮನವಿ ಮಾಡಲಿದೆ. ಬ್ಯಾಂಕ್ಗಳು ಒಪ್ಪಲಿವೆ ಎಂಬ ವಿಶ್ವಾಸದಲ್ಲಿ ಸರ್ಕಾರವಿದೆ.
ಮಹಾರಾಷ್ಟ್ರ ಮಾದರಿಯಲ್ಲಿ ಎನ್ಪಿಎ ಸಾಲಕ್ಕೆ ಶೇ.25 ರಿಯಾಯಿತಿ ನೀಡುವಂತೆ ಬ್ಯಾಂಕರ್ಗಳ ಜತೆ ಮಾತುಕತೆ ಇನ್ನೂ ಮುಂದುವರೆದಿದೆ. ಬ್ಯಾಂಕರ್ಗಳು ಒಪ್ಪಿದರೆ ಸರ್ಕಾರಕ್ಕೆ ಅನುಕೂಲವಾಗಲಿದೆ.
| ಮನೀಷ್ ಮೌದ್ಗಿಲ್, ಸಾಲಮನ್ನಾ ನೋಡಲ್ ಅಧಿಕಾರಿ
ಕೃಪೆ:ವಿಜಯವಾಣಿ