ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಒಪಿಎಸ್ ಗೆ ಒಳಪಡುವ ಸಂಬಂಧ ಮಹತ್ವದ ಆದೇಶ

ಬೆಂಗಳೂರು,ಜುಲೈ,8,2024 (www.justkannada.in): ಹೊಸ ಪಿಂಚಣಿ ಯೋಜನೆ(NPS) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ(OPS) ಜಾರಿಗೆ ಆಗ್ರಹಿಸಿದ್ದ ಸರ್ಕಾರಿ ನೌಕರರಿಗೆ  ಸಿಎಂ ಸಿದ್ದರಾಮಯ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, 2006ಕ್ಕೂ ಮುನ್ನ ನೇಮಕಾತಿಯಾದ ನೌಕರರನ್ನು ಹಳೆಯ ಡಿಫೈನ್ಡ್‌ ಪಿಂಚಣಿ ಯೋಜನೆಗೆ(ಒಪಿಎಸ್‌) ಒಳಪಡಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಅರುಳ್‌ ಕುಮಾರ್‌ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.. ಅರ್ಹ ನೌಕರರನ್ನು ಖಚಿತಪಡಿಸಿಕೊಂಡು ಜುಲೈ 31ರೊಳಗಾಗಿ ಹಿಂದಿನ ಡಿಫೈನ್ಡ್‌ ಪಿಂಚಣಿ ಯೋಜನೆಗೆ ಒಳಪಡಿಸಲು ಶಿಫಾರಸಿನೊಂದಿಗೆ ಇಲಾಖಾ ಮುಖ್ಯಸ್ಥರಿಗೆ ಕ್ರೋಡೀಕೃತ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಆದೇಶದಲ್ಲಿ ಏನಿದೆ..

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ದಿನಾಂಕ: 01.04.2006ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗಾಗಿ ಹೊರಡಿಸಿದ ನೇಮಕಾತಿ ಅಧಿಸೂಚನೆಗಳ ಮೇರೆಗೆ ಆಯ್ಕೆ ಹೊಂದಿ ದಿನಾಂಕ: 01.04.2006ರಂದು ಅಥವಾ ಆ ದಿನಾಂಕದ ನಂತರ ಸೇವೆಗೆ ಸೇರಿರುವ ಕಾರಣದಿಂದ ನೂತನ ಅಂಶದಾಯಿ ಕೊಡುಗೆ ಯೋಜನೆಯ (ರಾಷ್ಟ್ರೀಯ ಪಿಂಚಣಿ ಯೋಜನೆ) ವ್ಯಾಪ್ತಿಗೊಳಪಟ್ಟಿರುವ ಸರ್ಕಾರಿ ನೌಕರರನ್ನು ಸರ್ಕಾರವು ಅವರ ಅಭಿಮತದ ಮೇರೆಗೆ ಕೆಲವು ಷರತ್ತುಗಳಿಗೊಳಪಟ್ಟು ಒಂದು ಬಾರಿಯ ಕ್ರಮವಾಗಿ ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡಿಸಲು ಒಪ್ಪಿಗೆ ನೀಡಿ ಆದೇಶಿಸಲಾಗಿದೆ.

ಸದರಿ ಆದೇಶದನ್ವಯ ನೌಕರರು ತಮ್ಮ ಅಭಿಮತವನ್ನು ಚಲಾಯಿಸಲು ಕೊನೆಯ ದಿನಾಂಕ: 30.06.2024 ಆಗಿರುತ್ತದೆ. ನೌಕರರ ಆಯ್ಕೆಗನುಸಾರ ಅವರು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೊಳಪಡಲು ನಿಗಧಿತ ಅರ್ಹತೆಯನ್ನು ಹೊಂದಿರುವುದನ್ನು ಸಕ್ಷಮ ನೇಮಕಾತಿ ಪ್ರಾಧಿಕಾರವು ಖಚಿತಪಡಿಸಿಕೊಂಡು ದಿನಾಂಕ: 31.07.2024 ರೊಳಗಾಗಿ ಅಂತಹ ನೌಕರರನ್ನು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೊಳಪಡಿಸಲು ತಮ್ಮ ಶಿಫಾರಸ್ಸಿನೊಂದಿಗೆ ಇಲಾಖಾ ಮುಖ್ಯಸ್ಥರಿಗೆ ಕ್ರೋಢೀಕೃತ ಪ್ರಸ್ತಾವನೆಯನ್ನು ಸಲ್ಲಿಸತಕ್ಕದ್ದು ಎಂದು ತಿಳಿಸಲಾಗಿದೆ.

ಆದರೆ, ಪ್ರಸ್ತುತ ಕೆಲವು ಇಲಾಖೆಗಳು ನೌಕರರು ಒಪಿಎಸ್ ಗೆ ಒಳಪಡುತ್ತಾರೆ ಎಂದು ಶಿಫಾರಸ್ಸು ಮಾಡದೇ, ಕ್ರೋಢೀಕೃತ ಪ್ರಸ್ತಾವನೆಯನ್ನು ಸಲ್ಲಿಸದೇ, ಸ್ವೀಕೃತವಾಗಿರುವ ನೌಕರರ ಮನವಿಗಳನ್ನು ಮತ್ತು ಕೇವಲ ಒಂದು ಶಾಖೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಮಾತ್ರ ಆರ್ಥಿಕ ಇಲಾಖೆಯ ಅಭಿಪ್ರಾಯ ಕೋರುತ್ತಿರುವುದು ಕಂಡುಬಂದಿರುತ್ತದೆ.

ನಂತರ ಇಲಾಖಾ ಮುಖ್ಯಸ್ಥರು ತಮ್ಮ ಅಧೀನದ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಂದ ಸ್ವೀಕೃತವಾದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಲು ಅರ್ಹ ನೌಕರರ ಪಟ್ಟಿಯನ್ನು ದಿನಾಂಕ: 31.08.2024ರೊಳಗೆ ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಸಲ್ಲಿಸತಕ್ಕದ್ದು ಎಂದು ತಿಳಿಸಲಾಗಿದೆ.

Key words: State, Govt Employees, Order, OPS