ನವದೆಹಲಿ, ಡಿಸೆಂಬರ್.22,2021(www.justkannada.in): ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರ ನೇತೃತ್ವದ ನಿಯೋಗವು ನವದೆಹಲ್ಲಿ ಬುಧವಾರ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಭಾರತದ ಸವೋಚ್ಛ ನ್ಯಾಯಾಲಯವು ಇತ್ತಿಚೆಗೆ ತನ್ನ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲೂ ಪ್ರಕಟಿಸುವುದಾಗಿ ತಿಳಿಸಿರುವುದು ಭಾಷಾ ಒಕ್ಕೂಟ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆ ಎನಿಸಲಿದೆ. ಅದರಂತೆ, ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಾದ, ಪ್ರತಿವಾದ ಹಾಗೂ ತೀರ್ಪುಗಳನ್ನು ಕನ್ನಡದಲ್ಲಿ ದಾಖಲಿಸಬೇಕೆನ್ನುವುದು ಸರ್ಕಾರದ ಹಾಗೂ ಜನರ ಹಕ್ಕೊತ್ತಾಯವಾಗಿದೆ. ಕನ್ನಡ ಭಾಷೆಯಲ್ಲಿ ತೀರ್ಪು ನೀಡಿದರೆ ಕಕ್ಷಿದಾರನಿಗೆ ತೀರ್ಪಿನ ಸಾಧಕ-ಬಾಧಕಗಳ ಬಗ್ಗೆ ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲೂ ಪಾರದರ್ಶಕತೆಯನ್ನು ತರುವ ಜೊತೆಗೆ ಜನರಲ್ಲಿ ನ್ಯಾಯಾಂಗದ ಬಗ್ಗೆ ವಿಶ್ವಾಸ ಮೂಡುತ್ತದೆ. ಆಂಗ್ಲ ಭಾಷೆಯಲ್ಲಿ ತೀರ್ಪು ಹೊರಬಿದ್ದಾಗ ಅದನ್ನು ಅರ್ಥೈಸಿಕೊಳ್ಳುವುದು ಕಷ್ಟ ಹಾಗೂ ನ್ಯಾಯದಾನ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ಎನ್ನುವುದನ್ನು ಜನಸಾಮಾನ್ಯ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. 2021ರ ಬಜೆಟ್ ಭಾಷಣದಲ್ಲಿ “National Languages Translation Mission” ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆ ಮೂಲಕ ಈ ಕಾರ್ಯವನ್ನು ಸಾಧಿಸಬಹುದಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದೈನಂದಿನ ಪತ್ರ ವ್ಯವಹಾರ, ವಾದ-ಪ್ರತಿವಾದ, ನ್ಯಾಯಾಲಯಗಳ ಕಲಾಪಗಳು, ತೀರ್ಪು ಕನ್ನಡದಲ್ಲಿ ಹೊರಬರಲು ಸಂವಿಧಾನದಲ್ಲಿರುವ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು 2014 ರಲ್ಲಿ ರಾಜ್ಯದ ವಿಧಾನಮಂಡಲದ ಎರಡೂ ಸದನಗಳಲ್ಲಿ ನಿರ್ಣಯವನ್ನು ಅಂಗೀಕರಿಸಿ ಈಗಾಗಲೇ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಲಾಗಿದೆ. ಸದರಿ ಪ್ರಸ್ತಾವನೆಗೆ ಅನುಮೋದನೆ ನೀಡಲು ಸಂಬಂಧಪಟ್ಟವರಿಗೆ ಶಿಫಾರಸ್ಸು ಮಾಡಲು ಕೋರಿದೆ.
ಮಧ್ಯಪ್ರದೇಶ, ಉತ್ತರಪ್ರದೇಶ, ಉತ್ತರಾಖಂಡ, ಬಿಹಾರ ರಾಜ್ಯಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿಯನ್ನು ಅಧಿಕೃತವಾಗಿ ಉಚ್ಚ ನ್ಯಾಯಾಲಯಗಳಲ್ಲಿ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಉಚ್ಚ ನ್ಯಾಯಾಲಯದಲ್ಲಿ ಕಲಾಪ ನಡೆಸಲು ಅವಕಾಶ ಕಲ್ಪಿಸಿರುವಂತೆ ಕನ್ನಡ ಭಾಷೆಯಲ್ಲೂ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕಲಾಪ ನಡೆಸಲು ಅವಕಾಶ ಮಾಡಿಕೊಡಬೇಕು ಎಂಬ ಅಂಶಗಳ ಕುರಿತ ಮನವಿ ಸಲ್ಲಿಸಿದರು.
ಈ ನಿಯೋಗದಲ್ಲಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್, ಸಿ.ಮಂಜುಳ,ಎಚ್.ಜಿ.ಶೋಭಾ, ಅಶ್ವಿನಿ ಶಂಕರ್ ಎನ್.ಎಸ್, ಡಾ. ಸಿ.ಎ.ಕಿಶೋರ್, ಸುರೇಶ್ ಬಡಿಗೇರ್ ಹಾಗೂ ಪ್ರಾದಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ ಅವರು ಇದ್ದರು.
Key words: state -High Court – allowed – conduct – Kannada -Appeal -Union Minister -Prahlad Joshi