ಡಿ.23 ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ ರೈತ ಸಮಾವೇಶ

ಮೈಸೂರು,ಡಿಸೆಂಬರ್,20,2024 (www.justkannada.in):  ಡಿಸೆಂಬರ್ 23 ರಂದು ವಿಶ್ವ ರೈತ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ರೈತರ ಹಬ್ಬ , ರಾಜ್ಯಮಟ್ಟದ ರೈತ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳು ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್,  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ, ಶಿಕ್ಷಕರ, ವೈದ್ಯರ,  ಪತ್ರಕರ್ತರ ದಿನಗಳನ್ನು ಆಚರಿಸುತ್ತಾರೆ. ವಿವಿಧ ಜಾತಿಗಳ ಸಂದೇಶ ಸಾರುವ ಮಹನೀಯರ ದಿನಾಚರಣೆಗಳನ್ನು ಆಚರಿಸುತ್ತಾರೆ. ಆದರೆ ದೇಶದ 145 ಕೋಟಿ ಜನರಿಗೆ ಆಹಾರ ಬೆಳೆದು ಕೊಡುವ ಶ್ರಮಜೀವಿ ಕಾಯಕಯೋಗಿ ರೈತರನ್ನ ನೆನೆಯುವ ದಿನ ಡಿಸೆಂಬರ್ 23 ವಿಶ್ವ ರೈತ ದಿನ. ಈ ದಿನವನ್ನು ವಿಶೇಷವಾಗಿ ಆಚರಿಸಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ,  ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮುಂದಾಗಿದ್ದೇವೆ. ಡಿಸೆಂಬರ್ 23 ವಿಶ್ವ ರೈತ ದಿನಾಚರಣೆ ಹಿನ್ನೆಲೆಯಲ್ಲಿ ಅಂದು  ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ರಾಜ್ಯ ಮಟ್ಟದ ರೈತ ಸಮಾವೇಶ ನಡೆಸಲಿದೆ.  ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಹಾಗೆಯೇ  ಕೇಂದ್ರ ಸಚಿವ ವಿ ಸೋಮಣ್ಣ ಸಮಾರೋಪ ಮಾಡಲಿದ್ದಾರೆ. ವಿಶ್ವ ಪರಿಸರ ವಿಜ್ಞಾನಿ ಚಂದ್ರಶೇಖರ್ ಬಿರದಾರ್,  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಶರಣಪ್ಪ ಹಲಸೆ,  ಸಾವಯುವ ಪ್ರಗತಿಪರ ಕೃಷಿಕ ಕಲ್ಮೇಶ ಯಲ್ಲದಗಿ,  ತಮಿಳುನಾಡಿನ ರೈತ ಮುಖಂಡರಾದ ಪಿ ಆರ್ ಪಾಂಡ್ಯನ್,  ರಾಮನಗೌಂಡರ್,  ತೆಲಂಗಾಣದ ವೆಂಕಟೇಶ್ವರ ರಾವ್,  ಕೇರಳದ ಕೆ ವಿ ಬಿಜು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಪ್ರಗತಿಪರ ಸಾಧಕ ರೈತರು, ಕೃಷಿ ಕಾರ್ಮಿಕ ಮಹಿಳೆಗೆ ಸಮಾವೇಶದಲ್ಲಿ ಪುರಸ್ಕಾರ ನೀಡಲಾಗುವುದು ಎಂದರು.

ಬೆಳಿಗ್ಗೆ 10:00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಆರಂಭವಾಗಿ 11ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ಮಾಡಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಲಿದ್ದಾರೆ. ರೈತರು ಸ್ವಾಭಿಮಾನಿ,  ಸ್ವಾವಲಂಬಿಗಳಾಗಿ ಸ್ವಯಂ ಪ್ರೇರಿತರಾಗಿ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್. ಜಿಲ್ಲಾ ಕಾರ್ಯದರ್ಶಿ ಬರಡನಪುರ ನಾಗರಾಜ್. ಪೈಲ್ವಾನ್ ವೆಂಕಟೇಶ.ಸುನಿಲ್. ಸೂರಿ ಉಪಸ್ಥಿತರಿದ್ದರು.

Key words: State level farmers’ conference, Mysore, December 23