ಬೆಂಗಳೂರು,ನವೆಂಬರ್,12,2022(www.justkannada.in): ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನ ಆಹ್ವಾನಿಸದ ವಿಚಾರ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಈ ಕುರಿತು ಟ್ವೀಟ್ ಮಾಡಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಚಾಟಿ ಬೀಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್, ಸಿಎಂ ಬೊಮ್ಮಾಯಿ ಅವರೇ ಪ್ರಧಾನಿಮೋದಿ ಅವರಿಂದ ಕೆಂಪೇಗೌಡರ ಪ್ರತಿಮೆ ಅನಾವರಣ, ಸಂತ ಕನಕದಾಸರು, ವಾಲ್ಮೀಕಿ ಮಹರ್ಷಿಗಳ ಪ್ರತಿಮೆಗಳಿಗೆ ಮಾಲೆ ಹಾಕಿಸಿದ್ದರಿಂದ ಈ ಮಹನೀಯರ ಸಮುದಾಯದವರ ಹೊಟ್ಟೆ ತುಂಬುವುದಿಲ್ಲ, ಅವರ ಸಮಸ್ಯೆ ಬಗೆಹರಿಯುವುದಿಲ್ಲ, ಕಣ್ಣೀರು ಕೊನೆಯಾಗುವುದಿಲ್ಲ.
ಚುನಾವಣೆ ಸಮಯದಲ್ಲಿ ಟ್ರಬಲ್ ಇಂಜಿನ್ ಸರಕಾರ ತನ್ನ ಭ್ರಷ್ಟಾಚಾರ, ಹಗರಣ, ಕರ್ತವ್ಯಲೋಪಗಳನ್ನು ಮುಚ್ಚಿಕೊಳ್ಳಲು ಮಹನೀಯರ ಪ್ರತಿಮೆಯ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಆದರೆ ಬಿಜೆಪಿಯ ಭ್ರಷ್ಟಾಚಾರದ ಸಾಧನೆ ಹಾಗೂ ಅಸಲಿಯತ್ತು ಈಗಾಗಲೇ ರಾಜ್ಯದ ಜನರ ಮುಂದೆ ಬಯಲಾಗಿದೆ ಎಂದು ಗುಡುಗಿದ್ದಾರೆ.
ಮೋದಿ ಅವರು ಹೇಳಿದಂತೆ ರೈತರ ಆದಾಯ ಡಬಲ್ ಆಗಲಿಲ್ಲ. ಬದಲಿಗೆ ವೆಚ್ಚ ತ್ರಿಬಲ್ ಆಗಿದೆ. ಕೋವಿಡ್ ಸಂತ್ರಸ್ತರಿಗೆ ನೀಡಿದ ಪರಿಹಾರದ ಭರವಸೆ ಇನ್ನೂ ಈಡೇರಿಲ್ಲ. ಅಚ್ಚೇ ದಿನ್‌ಗಾಗಿ ಎದುರು ನೋಡುತ್ತಿದ್ದ ಬಡವರ ಕಷ್ಟ ಇನ್ನೂ ನೀಗಿಲ್ಲ. ಬಿಜೆಪಿಗರೇ ಪ್ರತಿಮೆ ರಾಜಕೀಯ ಬಿಡಿ. ಪ್ರಗತಿ ಎಲ್ಲಿದೆ ತೋರಿಸಿ? ಎಂದು ಸರ್ಕಾರಕ್ಕೆ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
Key words: statue -politics -BJP -people – progress-DK Shivakumar