ಮೈಸೂರು, ಮೇ.11.2021(www.justkannada.in): ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನೈಟೆಡ್ ಬೆಡ್ ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.
ಹೆಚ್.ಡಿ.ಕೋಟೆ ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಖಾಸಗಿ ಆಸ್ಪತ್ರೆಗಳು ಶೇ.50 ರಷ್ಟು ಬೆಡ್ ಗಳನ್ನು ನೀಡಬೇಕು ಎಂದು ಈಗಾಗಲೇ ತಿಳಿಸಲಾಗಿದೆ. ಇದಕ್ಕಾಗಿ ನಿನ್ನೆ ಸುತ್ತೂರು ಸ್ವಾಮೀಜಿಗಳೊಂದಿಗೆ ಸಭೆ ನಡೆಸಲಾಗಿದ್ದು, ಅವರು ಸಹ 300 ಆಕ್ಸಿಜನೈಟೆಡ್ ಬೆಡ್ ಗಳನ್ನು ನೀಡಲು ಒಪ್ಪಿಗೆ ನೀಡಿದ್ದಾರೆ ಎಂದರು.
ಕೋವಿಡ್ 2ನೇ ಅಲೆಯು ಹೆಚ್ಚು ಅಪಾಯಕಾರಿಯಾದ್ದು, ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸಾವುನೋವುಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇದಕ್ಕಾಗಿ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಹೆಚ್.ಡಿ.ಕೋಟೆ ತಾಲ್ಲೂಕಿನ ಪಿಡಿಒಗಳ ಮೇಲೆ ಸಾಕಷ್ಟು ದೂರುಕೇಳಿ ಬರುತ್ತಿದೆ. ವೈದ್ಯರಂತೆ ಇವರು ಪಿಪಿಪಿ ಕೀಟ್ ಧರಿಸಿ ಕೆಲಸ ಮಾಡುತ್ತಿಲ್ಲ. ಸರಿಯಾಗಿ ಅವರು ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸಚಿವ ಎಸ್.ಟಿ ಸೋಮಶೇಖರ್ ಸೂಚಿಸಿದರು.
ಅನಿಲ್ ಚಿಕ್ಕಮಾದು ಅವರು ಮಾತನಾಡಿ, ಇಲ್ಲಿನ ಆಸ್ಪತ್ರೆಗಳಲ್ಲಿ ನುರಿತವಾದ ಪಿಜಿಷಿಯನಿಷ್ಟ್ ಇಲ್ಲ. ಇದರ ಬಗ್ಗೆ ಕೆ.ಡಿ.ಪಿ ಸಭೆಯಲ್ಲೂ ಪ್ರಸ್ತಾಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅವುಗಳಲ್ಲಿ ವೈದ್ಯರನ್ನು ನೇಮಿಸಿಲ್ಲ. ಪ್ರಸ್ತುತ 3ಅಂಬ್ಯುಲೇನ್ಸ್ ಇದ್ದು, ಅವುಗಳು ದುರಸ್ಥಿಗೊಂಡಿದ್ದು, ಕೇವಲ ಒಂದು ಅಂಬ್ಯುಲೇನ್ಸ್ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಶೀಘ್ರವಾಗಿ ವೈದ್ಯರನ್ನು ಹಾಗೂ ನುರಿತ ಸಿಬ್ಬಂದಿಗಳನ್ನು ನೇಮಿಸಿಕೊಡಬೇಕೆಂದು ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾತನಾಡಿ, ಜನರಿಗೆ ಕೊವಿಡ್ ಬಗ್ಗೆ ಸ್ವತಃ ಅರಿವು ಬರಬೇಕು. ಮೊದಲ ಅಲೆಯಲ್ಲಿ ಕಡಿಮೆ ಕೊವಿಡ್ ಪ್ರಕರಣಗಳು ಕಡಿಮೆ ಪ್ರಕರಣಗಳು ಬರುತ್ತಿದ್ದವು. ಆದರೆ 2 ನೇ ಅಲೆಯು ಪರಿಣಾಮವಾಗಿ ಹಬ್ಬುತ್ತಿದ್ದು, ಹೀಗಾಗಿ ಜನರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೇಳಿದರು.
ಸಭೆಗು ಮುನ್ನ ಹೆಚ್.ಡಿ.ಕೋಟೆ ತಾಲ್ಲೂಕಿನ ಪ್ರಾಥಮಿಕ ಆಸ್ಪತ್ರೆಗೆ ಭೇಟಿ ನೀಡಿ ನೂತನವಾಗಿ ಸಿದ್ದಗೊಂಡಿರುವ ಆಕ್ಸಿಜನೈಟೆಡ್ ಬೆಡ್ ಗಳನ್ನು ಉದ್ಘಾಟಿಸಿದರು.
ಹೆಚ್.ಡಿ.ಕೋಟೆ ತಾಲ್ಲೂಕಿನ ಗಡಿಗಳನ್ನು ಮುಚ್ಚಲಾಗಿದ್ದು, ಹೊರಗಿನಿಂದ ಬರುವವರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಅನವಶ್ಯಕವಾಗಿ ಓಡಾಡುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಶಾಸಕ ಅನೀಲ್ ಚಿಕ್ಕಮಾದು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎ.ಎಂ.ಯೋಗೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ತಹಶಿಲ್ದಾರ್ ನರಗುಂದ್, ಅಪ್ಪಣ್ಣ, ಟಿ.ಎಚ್.ಓ ರವಿ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.
Key words: Steps – increase – number -oxygen beds – Mysore-Minister -ST Somashekhar.