ಮೈಸೂರು, ಏಪ್ರಿಲ್ 15, 2020 (www.justkannada.in):
ಎಪಿಎಂಸಿ ಮತ್ತು ಹಾಪ್ ಕಾಮ್ಸ್ ಅವರು ಹಣ್ಣು, ತರಕಾರಿಗಳನ್ನು ರೈತರ ಬಳಿ ಕಡಿಮೆ ಬೆಲೆಗೆ ಖರೀದಿಸಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದರ ಬಗ್ಗೆ ದೂರು ಬಂದಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಎಪಿಎಂಸಿ ಅಧ್ಯಕ್ಷರು, ದಳ್ಳಾಳಿಗಳು, ಹಣ್ಣು ಮತ್ತು ದಿನಸಿ ವರ್ತಕರು ಹಾಗೂ ರೈತರ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ವರ್ತಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದ ಎಲ್ಲಾ ಎಪಿಎಂಸಿ ಮಾರುಕಟ್ಟೆಯಲ್ಲಿ ಕಡ್ಡಾಯವಾಗಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಿ ಸಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮನದಟ್ಟು ಮಾಡಬೇಕು. ಮಾರುಕಟ್ಟೆಗೆ ಬರುವಂತಹ ಎಲ್ಲಾ ರೈತರಿಗೆ ಹಾಗೂ ವರ್ತಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು, ತಿಂಡಿ, ಊಟ ಸೌಲಭ್ಯ ಸಿಗಬೇಕು ಎಂದರು.
ರಾಜ್ಯದ ಎಲ್ಲಾ ಜನರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಎಪಿಎಲ್ ಪಡಿತರ ಚೀಟಿ ಸೇರಿದಂತೆ ಎಲ್ಲಾ ಪಡಿತರ ಚೀಟಿದಾರರಿಗೂ ಎರಡು ತಿಂಗಳ 10 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಆದರೆ ಕೆಲವರು ಅಕ್ಕಿ ಪಡೆದ ಕೆಲ ನಿಮಿಷಗಳಲ್ಲೇ ಬೇರೆಯವರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಿದೆ. ಈ ಬಗ್ಗೆ ಕಟ್ಟುನಿಟ್ಟಿನ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಪಿ. ಶಿವಣ್ಣ ಅವರಿಗೆ ಸೂಚಿಸಿದರು.
ಜಿಲ್ಲೆಯ ಹೆಚ್.ಡಿ.ಕೋಟೆಯ ಬಾವಲಿ ಗಡಿ ಮೂಲಕ ಹೊರ ಹೋಗಿ ಬರುವ ಸರಕು ವಾಹನಗಳಿಂದ ಕೊರೊನಾ ಸೋಂಕು ಹರಡುತ್ತದೆ ಎಂಬ ಆತಂಕದಿಂದ ಅಲ್ಲಿನ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸರಕು ವಾಹನಗಳ ಮೇಲೆ ನಿರ್ಬಂಧ ಏರುವಂತೆ ಮನವಿ ಮಾಡಿದ್ದಾರೆ. ಈ ವಾಹನಗಳಿಗೆ ನಿರ್ಬಂಧ ವಿಧಿಸಿದರ ಎಪಿಎಂಸಿ ಮಾರುಕಟ್ಟೆಯ ವಹಿವಾಟಿಗೆ ತೊಂದರೆ ಉಂಟಾಗುತ್ತದೆ ಎಂದರು.
ಶಾಸಕ ಎಸ್.ಎ.ರಾಮದಾಸ್ ಅವರು ಮಾತನಾಡಿ, ನಗರದಲ್ಲಿ ಹಾಪ್ ಕಾಮ್ಸ್ ಮಳಿಗೆಯವರು ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಎಲ್ಲಾ ಕಡೆ ರೈತರೆ ನೇರವಾಗಿ ವ್ಯಾಪಾರ ಮಾಡುವಂತೆ ಅವಕಾಶ ನೀಡಬೇಕು. ಹಾಪ್ ಕಾಮ್ಸ್ ಅವರು ಎಪಿಎಂಸಿಯಲ್ಲಿ ತರಕಾರಿಗಳನ್ನು ಖರೀದಿಸಿ ಮಾರಾಟ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮಾತನಾಡಿ ಮೈಸೂರು ಎಪಿಎಂಸಿಗೆ ಪ್ರತಿನಿತ್ಯ 8 ಸಾವಿರಕ್ಕೂ ಹೆಚ್ಚು ರೈತರು ಹಗೂ ವರ್ತಕರು ಬರುವುದರಿಂದ ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ತಾತ್ಕಾಲಿಕವಾಗಿ ಬಾಡಿಗೆ ಶೌಚಾಲಯಗಳನ್ನು ಖರೀದಿಸಿ ಈ ಕೂಡಲೇ ಅಳವಡಿಸಬೇಕು ಎಂದು ಎಪಿಎಂಸಿ ಅಧ್ಯಕ್ಷರಿಗೆ ತಿಳಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಶಿವಣ್ಣ, ಎಪಿಎಂಸಿ ಅಧ್ಯಕ್ಷರಾದ ಪ್ರಭುಸ್ವಾಮಿ, ಕಾರ್ಯದರ್ಶಿ ಕುಬೇರ ನಾಯ್ಕ, ತರಕಾರಿ ದಳ್ಳಾಳಿ ಸಂಘದ ಅಧ್ಯಕ್ಷ ಸತೀಶ್, ರೈತ ಮುಖಂಡರು ಉಪಸ್ಥಿತರಿದ್ದರು.