ಮೈಸೂರು,ಸೆ,24,2019(www.justkannada.in): ನಿನ್ನೆಯಷ್ಟೆ ಸುದ್ದಿಗೋಷ್ಠಿ ನಡೆಸಿ ಸಿಡಿ ಬಿಡುಗಡೆ ಮಾಡಿ ಹೆಚ್.ವಿಶ್ವನಾಥ್ ಬ್ಲೂಬಾಯ್ ಎಂದು ವಾಗ್ದಾಳಿ ನಡೆಸಿದ್ದ ಮಾಜಿ ಸಚಿವ ಸಾ.ರಾ ಮಹೇಶ್ ಗೆ, ವೈಯಕ್ತಿಕ ಟೀಕೆ ಮಾಡುವುದನ್ನ ನಿಲ್ಲಿಸುವಂತೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನರ್ಹ ಶಾಸಕ ಹೆಚ್.ವಿಶ್ವನಾಥ್, ಇಬ್ಬರು ಗಾಜಿನ ಮನೆಯಲ್ಲಿ ಇದ್ದೇವೆ. ವೈಯುಕ್ತಿಕ ಟೀಕೆ ಮಾಡುವುದನ್ನ ಇಲ್ಲಿಗೆ ನಿಲ್ಲಿಸಿ. ಜನರು ನಮ್ಮನ್ನ ನೋಡುತ್ತಿದ್ದಾರೆ. ಅವರ ಮುಂದೆ ನಾವು ಜಾರಿ ಬಿಳುವುದು ಬೇಡ. ಇಬ್ಬರು ತಪ್ಪು ಮಾಡುತ್ತಿದ್ದೇವೆ ಅಂತ ನನಗೆ ಅನಿಸಿದೆ. ನಾವಿಬ್ಬರು ಒಂದೆ ಊರಿನವರು ಪರಸ್ಪರ ಈ ರೀತಿ ಮಾತನಾಡಿವುದು ಬೇಡ. ನೀವೇನೋ ಮಾಡುತ್ತೀರ ಅಂತ ಹೆದರಿ ಈ ಮಾತುಗಳನ್ನ ಹೇಳುತ್ತಿಲ್ಲ. ನೀವು ಬೆಳೆಯಬೇಕಿರುವ ರಾಜಕಾರಣಿ. ನನ್ನದು ನಿವೃತ್ತಿಯ ರಾಜಕಾರಣ. ಇಂತಹ ಪರಸ್ಪರ ವೈಯುಕ್ತಿಕ ಮಾತುಗಳ ನಮಗೆ ಒಳ್ಳೆದಲ್ಲ ಎಂದು ಹೇಳಿದರು.
ಅಭಿವೃದ್ಧಿ ಹಾಗೂ ವಿಷಯಾಧಾರಿತವಾಗಿ ಮಾತನಾಡೋಣ. ಇಬ್ಬರು ಮಂತ್ರಿಗಳಾಗಿದ್ದವರು ಈ ರೀತಿ ಮಾತನಾಡಿದ್ರೆ ಜನ ನೋಡ್ತಾರೆ. ಎಲ್ಲವನ್ನು ನಿಲ್ಲಿಸೋಣ. ವೈಯುಕ್ತಿಕ ಟೀಕೆಗಳು ಬೇಡ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ಗೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮನವಿ ಮಾಡಿದರು.
ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ನೀಡಿದ ಹೆಚ್.ವಿಶ್ವನಾಥ್
ಇನ್ನು 15 ಕ್ಷೇತ್ರಗಳಿಗೆ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಉಪಚುನಾವಣೆಯಲ್ಲಿ ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ನೀಡಿರುವ ಚುನಾವಣಾ ಆಯೋಗದ ನಿರ್ಧಾರ ಸ್ವಾಗತ. ಆದ್ರೆ ಚುನಾವಣೆ ಮುಂದೂಡಿ ಅನ್ನೋದೇ ನಮ್ಮ ಮನವಿ ಎಂದು ಹೇಳಿದರು.
ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಈಗ ನಡೆಯುತ್ತಿರುವ ಚುನಾವಣೆ ತರಾತುರಿಯಲ್ಲಿ ನಡೆಯುತ್ತಿದೆ. ಹಾಗಾಗಿ ಉಪಚುನಾವಣೆ ಈಗ ಬೇಡ ಅನ್ನೋದು ನಮ್ಮ ಅಭಿಪ್ರಾಯ. ಸುಪ್ರೀಂಕೋರ್ಟ್ ತೀರ್ಮಾನದ ನಂತರ ಎಲ್ಲವು ನಿರ್ಧಾರ ಆಗಲಿದೆ. ಉಪಚುನಾವಣೆಗೆ ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಹುಣಸೂರಿನ ಹಿರಿಯರು, ಮುಖಂಡರ ಜೊತೆ ಚರ್ಚೆ ಮಾಡ್ತೇನೆ. ಅವರ ಅಭಿಪ್ರಾಯ ಪಡೆದು ಮುಂದುವರೆಯುತ್ತೇನೆ. ಉಪಚುನಾವಣೆಗೆ ಸಮಯ ಕಮ್ಮಿ ಇದ್ದು ಹಾಗಾಗಿ ತಯಾರಿ ಮಾಡಿಕೊಳ್ಳಲೇಬೇಕು ಅಲ್ಲವೇ? ಎಂದು ಹೇಳುವ ಮೂಲಕ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ನೀಡಿದರು.
ಬಿಎಸ್ ವೈ ಸಿಎಂ ಆಗಲು ಸಿದ್ದು ಹೆಚ್.ಡಿಕೆ ಕಾರಣ…
ಯಡಿಯೂರಪ್ಪ ಸಿಎಂ ಆಗಲು ಸಿದ್ದರಾಮಯ್ಯ ಕುಮಾರಸ್ವಾಮಿ ಕಾರಣ..! ಇದನ್ನ ಸ್ವತಃ ಅವರಿಬ್ಬರೇ ಒಪ್ಪಿಕೊಂಡಿದ್ದಾರೆ.. ಸಮ್ಮಿಶ್ರ ಸರ್ಕಾರ ಪತನಕ್ಕೆ 17 ಜನ ಅನರ್ಹ ಶಾಸಕರು ಕಾರಣರಲ್ಲ. ನಮ್ಮ ಮೇಲೆ ಸರ್ಕಾರ ಬೀಳಿಸಿದ ಗೂಬೆ ಕೂರಿಸಿದ್ದಿರಿ ಇಷ್ಟು ದಿನ. ಈಗ ನಿಮ್ಮ ಮಾತಿನ ಮೂಲಕ ಸರ್ಕಾರ ಪತನಕ್ಕೆ ನೀವೆ ಕಾರಣ ಎಂಬುದು ಸ್ಪಷ್ಟವಾಗಿದೆ. ಪರಸ್ಪರ ಅಸಮಾಧಾನ ಅಪನಂಬಿಕೆಯಲ್ಲಿ ಸರ್ಕಾರ ನಡೆಸಿದವರು ನೀವು. ಅದರ ಪರಿಣಾಮ ಸರಕಾರ ಪತನವಾಯಿತು ಎಂದು ಹೆಚ್.ವಿಶ್ವನಾಥ್ ತಿಳಿಸಿದರು.
ಮಾಜಿ ಸಚಿವ ರೇವಣ್ಣರನ್ನ ಹೊಗಳಿ ಜೊತೆಗೆ ಟಾಂಗ್ ಕೊಟ್ಟ ಹೆಚ್.ವಿಶ್ವನಾಥ್.
ಇದೇ ವೇಳೆ ಮಾಜಿ ಸಚಿವ ರೇವಣ್ಣರನ್ನ ಹೊಗಳಿ ಜೊತೆಗೆ ಟಾಂಗ್ ಕೊಟ್ಟ ಹೆಚ್.ವಿಶ್ವನಾಥ್, ಅವರು ಕೆಲಸ ಮಾಡುವುದರಲ್ಲಿ ದೈತ್ಯರು. ಅವರ ಕೆಲಸದ ಬಗ್ಗೆ ಯಾವುದೇ ಅನುಮಾನ ಬೇಡ. ಯಾವುದೇ ಖಾತೆ ಇದ್ರು ಅದನ್ನ ಮಾಡುತ್ತಾರೆ. ಜತೆಗೆ ಎಲ್ಲಾ ಖಾತೆಗು ಕೈಯಾಡಿಸುತ್ತಾರೆ ಎಂದು ಟಾಂಗ್ ಕೊಟ್ಟರು.
Key words: stop – personal -criticism -H. Vishwanath-appealed –sa ra Mahesh-mysore