ಬೆಂಗಳೂರು,ಆ,22,2020(www.justkannada.in): ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರು ಮೃತಪಟ್ಟ ಬೆನ್ನಲ್ಲೆ ಮತ್ತೊಬ್ಬ ಆರೋಗ್ಯಾಧಿಕಾರಿ ಬೆಂಗಳೂರಿನಲ್ಲಿನ ಡಾ.ನಾಗೇಂದ್ರ ಅವರ ಕರುಣಾಜನಕ ಕಥೆಯನ್ನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿನ ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರ ಪರಿಸ್ಥಿತಿ ಬಗ್ಗೆ ಸಚಿವ ಸುರೇಶ್ ಕುಮಾರ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಹಂಚಿಕೊಂಡಿದ್ದು ಹೀಗೆ….
ನಿನ್ನೆ ರಾತ್ರಿ ನಮ್ಮ ಮನೆಗೆ ನನಗೆ ಕೋವಿಡ್ 19 ನಿಯಂತ್ರಣದ ದೃಷ್ಟಿಯಿಂದ ಉಸ್ತುವಾರಿ ಜವಾಬ್ದಾರಿ ನೀಡಿರುವ ಬೊಮ್ಮನಹಳ್ಳಿ ಕ್ಷೇತ್ರದ ಆರೋಗ್ಯ ಅಧಿಕಾರಿಗಳಾದ ನಾಗೇಂದ್ರ ಬಂದಿದ್ದರು.
ಅವರ ಮನೆಯಲ್ಲಿ ಇತ್ತೀಚೆಗೆ ಸಂಭವಿಸಿದ ಘಟನೆಗಳು ಯಾರಿಗೇ ಆದರೂ ಕಣ್ಣೀರು ತರಿಸುವಂತಹದು.
ಕೇವಲ ನಾಲ್ಕು ದಿನಗಳ ಅಂತರದಲ್ಲಿ ಡಾ. ನಾಗೇಂದ್ರ ತನ್ನ ತಂದೆ, ತಾಯಿ ಹಾಗೂ ಭಾವ (ತಂಗಿಯ ಪತಿ) …ಈ ಮೂವರನ್ನೂ ಕೊರೋನಾದಿಂದ ಕಳೆದುಕೊಂಡರು.
ನಾಲ್ಕು ದಿನಗಳ ಅಂತರದಲ್ಲಿ ಮೂರು ಬಾರಿ ತನ್ನ ಕುಟುಂಬದ ಯಾವು ದಾದರೂ ಒಂದು ಪಾರ್ಥಿವ ಶರೀರ ದೊಂದಿಗೆ ಚಿತಾಗಾರಕ್ಕೆ ಹೋಗುವುದು ಊಹೆಗೂ ನಿಲುಕದು. ಚಿತಾಗಾರದಲ್ಲಿದ್ದ ಸಿಬ್ಬಂದಿ ಕೇಳಿದರಂತೆ “ಸರ್. ನಿನ್ನೆ ನೀವು ಬಂದಿದ್ರಿ. ಇವತ್ತು ಮತ್ತೆ ಬಂದಿದ್ದೀರಿ. ಯಾರು ತೀರಿಹೋಗಿದ್ದಾರೆ” ಎಂದು.
ನಿನ್ನೆ ತನ್ನ ತಂದೆ, ಇಂದು ತನ್ನ ತಾಯಿ ಎಂದು ಉತ್ತರ ಕೊಡಲೂ ಸಾಧ್ಯವಾಗಲಿಲ್ಲ ಅಂದು ನಾಗೇಂದ್ರ ರವರಿಗೆ.
ಈ ಎಲ್ಲ ವಿದ್ಯಮಾನ ಕೇಳುತ್ತಿದ್ದಾಗ ಏಕೋ ಎಸ್ಎಲ್ ಭೈರಪ್ಪನವರ #ಭಿತ್ತಿ ಪುಸ್ತಕದಲ್ಲಿ ಅವರ ಬಾಲ್ಯದ ನೆನಪು ಬಂತು.
ತನ್ನ ತಾಯಿಯ ಅಸ್ತಿಯನ್ನು ವಿಸರ್ಜನೆ ಮಾಡಲು ಶ್ರೀರಂಗಪಟ್ಟಣಕ್ಕೆ ಹೋಗುತ್ತಿರುವ ದಾರಿಯಲ್ಲಿಯೇ ಮದ್ದೂರಿನ ಬಳಿ ತನ್ನ ತಂಗಿಯ ಯಜಮಾನರು (ಭಾವ) ತೀರಿಹೋದರೆಂಬ ಸುದ್ದಿ ಡಾ ನಾಗೇಂದ್ರರವರಿಗೆ ತಲುಪಿತು. ಅವರ ಮನಸ್ಥಿತಿ ಹೇಗಾಗಿರಬೇಕು?
ಅಸ್ತಿಯನ್ನು ವಾಪಸ್ಸು ಮನೆಗೆ ತರುವಂತಿಲ್ಲ. ಅಲ್ಲಿಯೇ ದಾರಿಯಲ್ಲಿ ಸಿಕ್ಕ ತೊರೆಯೊಂದರಲ್ಲಿ ವಿಸರ್ಜಿಸಿ ಮತ್ತೆ ಬೆಂಗಳೂರಿಗೆ ವಾಪಸ್ಸು ಬಂದು ಭಾವನ ಅಂತಿಮಕ್ರಿಯೆ ಮಾಡಬೇಕಾದ ದಯನೀಯ ಪರಿಸ್ಥಿತಿ ನಾಗೇಂದ್ರ ರವರಿಗೆ ಬಂದೊದಗಿತ್ತು.
ಈ ಎಲ್ಲಾ ದುಃಖಕರ ಸಂಗತಿಗಳ ನಂತರ ಡಾ ನಾಗೇಂದ್ರರವರು ಕ್ವಾರಂಟೈನ್ ನಲ್ಲಿ ಇರಬೇಕಾದ ಸ್ಥಿತಿ.
ಡಾ ನಾಗೇಂದ್ರ ಈ ಮಾತುಗಳನ್ನು ಹೇಳುತ್ತಿರುವಾಗ ಅವರ ದುಃಖ ಉಮ್ಮಳಿಸಿ ಬಂತು.
ಅವರಿಗೆ ಸಾಂತ್ವನ ಹೇಳಲಿಕ್ಕೂ ನನಗೆ ಪದಗಳು ಸಿಗಲಿಲ್ಲ. ಅವರ ತಂದೆ ನಿವೃತ್ತ ಶಿಕ್ಷಕರು, ಭಾವ ತಾಲ್ಲೂಕೊಂದರ ಆರೋಗ್ಯಾಧಿಕಾರಿ.
ಹೀಗೆ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿರುವ ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರ ಕಥೆ ಕೇಳಿದರೇ, ನೆನಪಿಸಿಕೊಂಡರೇ ಎಂತಹವರಿಗೂ ಸಹ ಕಣ್ಣಲ್ಲಿ ನೀರು ತರಿಸುತ್ತೆ.
Key words: story –doctor- Dr Nagendra- Minister -Suresh Kumar- Tears