ಬೆಂಗಳೂರು, ಮಾರ್ಚ್ 22, 2021(www.justkannada.in): ಕೋವಿಡ್ ಎರಡನೇ ಅಲೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಆದರೆ ಸೆಮಿ ಲಾಕ್ ಡೌನ್ ಅಥವಾ ಲಾಕ್ ಡೌನ್ ಇಂದಿನ ಪರಿಸ್ಥಿತಿಗೆ ಅನ್ವಯವಾಗುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಹಾರಾಷ್ಟ್ರ, ಕೇರಳ ಗಡಿಭಾಗಗಳಿಂದ ಬರುವ ಜನರ ಮೇಲೆ ತೀವ್ರ ನಿಗಾ ಇರಿಸುವುದು, ಆರ್ ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದೇ ಬಿಡದಿರುವುದು ಅಥವಾ ಅಲ್ಲೇ ಪರೀಕ್ಷೆ ಮಾಡುವುದು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದು, ಹೆಚ್ಚು ಅರಿವು ಮೂಡಿಸುವುದು ಎನ್ನುವ ವಿಷಯಗಳ ಬಗ್ಗೆ ಆರೋಗ್ಯ ಇಲಾಖೆಯ ಸಭೆಯಲ್ಲಿ ಚರ್ಚೆಯಾಗಿದೆ. ಜನರು ಆದಷ್ಟು ಬೇಗ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಲಸಿಕೆ ಪಡೆಯುವಂತೆ ಮಾಡಬೇಕಿದೆ ಎಂದರು.
ಗಡಿಭಾಗಗಳಲ್ಲಿ ಕ್ರಮ ವಹಿಸಲು ಗೃಹ ಇಲಾಖೆಯ ಸಹಯೋಗ ಬೇಕಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಸೆಮಿ ಲಾಕ್ ಡೌನ್, ಲಾಕ್ ಡೌನ್ ಎಲ್ಲ ಇಂದಿನ ಪರಿಸ್ಥಿತಿಗೆ ಅನ್ವಯವಾಗಲ್ಲ. ಹಿಂದಿನ ತಪ್ಪುಗಳನ್ನು ನೋಡಿಕೊಂಡು ಈಗ ಸರಿಪಡಿಸಿಕೊಳ್ಳಬೇಕಿದೆ ಎಂದರು.
ಮದುವೆ ಸಮಾರಂಭಗಳಲ್ಲಿ ನಿಗದಿಪಡಿಸಿದ ಮಿತಿ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಕ್ರಮ ಅನುಸರಿಸಬೇಕು. ಇಲ್ಲದಿದ್ದರೆ ಮಾಲೀಕರ ಮೇಲೆ, ಆಯೋಜಕರ ಮೇಲೆ ದಂಡ ವಿಧಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಭೌತಿಕ ಅಂತರ ಕಾಯ್ದುಕೊಳ್ಳಬೇಕೆಂದು ಸೂಚಿಸಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ಷ್ಮವಾಗಿ ಗಮನಿಸಿ, ಸೋಂಕಿತರ ಪ್ರಮಾಣ ಹೆಚ್ಚಿದ್ದರೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ, ಕ್ರಮ ವಹಿಸಲಾಗುವುದು ಎಂದರು.
ಬೆಂಗಳೂರಿನಲ್ಲಿ ಈ ವಾರದಿಂದಲೇ ಮೂರು ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು. ಇವೆಲ್ಲ ಕ್ರಮಗಳಿಂದ ಕೋವಿಡ್ ನಿಯಂತ್ರಣಕ್ಕೆ ಬರಲಿದೆ ಎಂದರು.
Key words: Strict action –prevent- covid second –wave- Minister- Dr. K. Sudhakar.