ಬೆಂಗಳೂರು,ಸೆಪ್ಟಂಬರ್,11,2023(www.justkannada.in): ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿಯೋಜನೆಯಿಂದ ಸಂಕಷ್ಟ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟ ಮುಷ್ಕರ ಹೂಡಿದ್ದು, ನಗರದಾದ್ಯಂತ ಖಾಸಗಿ ಬಸ್, ಆಟೋ, ಓಲಾ, ಊಬರ್ ಸೇವೆಗಳು ಸ್ತಬ್ಧವಾಗಿದೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿಯೋಜನೆಯಿಂದ ಖಾಸಗಿ ಸಾರಿಗೆಗಳಿಗೆ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ವಾಹನ ಚಾಲಕರು ಮತ್ತು ಮಾಲಿಕರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿವೆ. ಆದರೆ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್ಗೆ ಕರೆ ನೀಡಿವೆ. 40ಕ್ಕೂ ಹೆಚ್ಚು ಖಾಸಗಿ ಸಾರಿಗೆ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ಕೊಟ್ಟಿದ್ದು ರಾತ್ರಿ 12ರಿಂದ ಇಂದು ರಾತ್ರಿ 12ರ ವರೆಗೂ ನಗರದಲ್ಲಿ ಆಟೋ, ಕ್ಯಾಬ್, ವ್ಯಾನ್, ಗೂಡ್ಸ್ ವಾಹನ ಸೇರಿದಂತೆ ಸೇವೆಗಳು ಸ್ಥಗಿತವಾಗಿದೆ.
ಖಾಸಗಿ ಸಾರಿಗೆ ಮುಷ್ಕರಕ್ಕೆ ಮೆಜೆಸ್ಟಿಕ್ ಆಟೋ ಸಂಘ ಬೆಂಬಲ ಸೂಚಿಸಿದೆ. ಹೀಗಾಗಿ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಆಟೋ ನಿಲ್ದಾಣದಲ್ಲಿ ಒಂದು ಆಟೋ ಕೂಡ ಕಂಡು ಬಂದಿಲ್ಲ. ಮುಂಜಾನೆಯೇ ಬೇರೆ, ಬೇರೆ ಊರುಗಳಿಂದ ಮೆಜೆಸ್ಟಿಕ್ ಗೆ ಆಗಮಿಸುತ್ತಿರುವ ಜನರು ಆಟೋಗಳು ಇಲ್ಲದೆ ಬಿಎಂಟಿಸಿ ಬಸ್ ಗಳತ್ತ ಮುಖ ಮಾಡಿದ್ದಾರೆ. ಲಗೇಜ್ ಹೆಚ್ಚಿದೆ ಬಸ್ ನಲ್ಲಿ ಹೋಗಲು ಆಗದು, ಆಟೋನೇ ಬೇಕು ಎನ್ನುವವರಿಗೆ ಭಾರಿ ಸಮಸ್ಯೆ ಉಂಟಾಗಿದೆ.
ಆಟೋ ಚಾಲಕರ ಪ್ರತಿಭಟನೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಜಾಲಹಳ್ಳಿ ಕ್ರಾಸ್ನಲ್ಲಿ ಸಂಚಾರಕ್ಕೆ ಅಡ್ಡಿ ಪಡಿಸಿದಂತೆ ಅಟೋ ಚಾಲಕರಿಗೆ ಎಚ್ಚರಿಕೆ ನೀಡಿದರು.
ಖಾಸಗಿ ಸಾರಿಗೆ ವಾಹನ ಬಂದ್ ಇದ್ದರೂ ಸಂಚರಿಸುತ್ತಿದ್ದ ಆಟೋ, ಕ್ಯಾಬ್ ಗಳನ್ನು ತಡೆದು ಚಾಲಕರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯುತ್ತಿದೆ. ಆಟೋ ಕ್ಯಾಬ್ ಸೇವೆ ಸ್ಥಗಿತ ಹಿನ್ನೆಲೆ ಜನರಿಗೆ ತೊಂದರೆಯುಂಟಾಗಿದೆ.
Key words: Strike -private transport -union – Bengaluru